ಸೋಮವಾರ, ಜೂನ್ 14, 2021
25 °C
ಪ್ರಜಾವಾಣಿ ಸಂವಾದ

ಮೀಸಲಾತಿ: ಸುಪ್ರೀಂಕೋರ್ಟ್‌ನ ಶೇ 50ರ ಲಕ್ಷ್ಮಣರೇಖೆ ದಾಟಲೇ ಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಾತಿ ವಾಸ್ತವ. ಅಸಮಾನತೆ ಇರುವರೆಗೆ ಮೀಸಲಾತಿ ಅನಿವಾರ್ಯ. ಆದರೆ, ಆ ಪ್ರಮಾಣ
ಸಾಮಾಜಿಕ ನ್ಯಾಯಕ್ಕೆ ಪೂರಕ ಆಗಿರಬೇಕು’ ಎಂದು ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಎಚ್‌. ಕಾಂತರಾಜು, ಆಳಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್. ಪಾಟೀಲ ಪ್ರತಿಪಾದಿಸಿದರು.

‘ರಾಜ್ಯದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸುವ ಅಗತ್ಯ ಇದೆಯೇ?’ ಎಂಬ ವಿಷಯದ ಕುರಿತು ‘ಪ್ರಜಾವಾಣಿ’ ಸಂವಾದದಲ್ಲಿ ಸೋಮವಾರ ಮಾತನಾಡಿದ ಈ ಮೂವರೂ, ‘ಮೀಸಲಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳ ವಿಸ್ತೃತ ಚರ್ಚೆ ಅಗತ್ಯವಿದೆ. ಅದು ವಿಧಿಸಿರುವ ಶೇ 50 ಮೀಸಲಾತಿಯ ಲಕ್ಷ್ಮಣರೇಖೆ ದಾಟಬೇಕಿದೆ’ ಎಂದೂ ವಾದಿಸಿದರು. ಅವರ ಅಭಿಪ್ರಾಯಗಳ ಆಯ್ದ ಅಂಶ ಇಲ್ಲಿದೆ.

**

ಹಿಂದುಳಿದ ಜಾತಿಗಳ ಮೀಸಲಾತಿ ಮೇಲೆ ಆಕ್ರಮಣ ಸಲ್ಲ: ಬಿ.ಕೆ. ಹರಿಪ್ರಸಾದ್‌
ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ 50ರ ಮಿತಿಯಿಂದ ಹೆಚ್ಚಿಸಬೇಕಾದ ಅಗತ್ಯದ ಬಗ್ಗೆ ಹಲವು ಸಂದರ್ಭಗಳಲ್ಲಿ ಚರ್ಚೆ ನಡೆದಿದೆ. ತಮಿಳುನಾಡು ಸರ್ಕಾರ ಸಂವಿಧಾನದ ಷೆಡ್ಯೂಲ್‌ 9ರ ಅಡಿಯಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 69ಕ್ಕೆ ಹೆಚ್ಚಿಸಿಕೊಂಡ ನಿದರ್ಶನ ನಮ್ಮ ಮುಂದಿದೆ. ಹಾಗೆಂದು, ಮೀಸಲಾತಿ ಎನ್ನುವಂಥದ್ದು ಉದ್ಯೋಗ ನೀಡುವ, ಬಡತನ ನಿರ್ಮೂಲನೆಗಲ್ಲ. ಸಮಾನ ಅವಕಾಶ ದೊರಕಿಸಿ ಕೊಡಲು ಇರುವ ಮಹತ್ವದ ಪ್ರಾಣ ಅಂಶ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ವಂಚಿತರಾದವರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೀಸಲಾತಿ ಬಂದಿದೆ. ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ಮೀಸಲಾತಿ ಕೇಳಿರುವುದರಲ್ಲಿ ತಪ್ಪಿಲ್ಲ. ಆದರೆ, ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಅದನ್ನು ಸರಿದೂಗಿಸಲು ಸಾಧ್ಯವಿಲ್ಲ. ನಿಗದಿಪಡಿಸಿರುವ ಮಿತಿಯ ಮರುಹಂಚಿಕೆಯೂ ಸಾಧುವಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಘೋಷಿಸಿರುವ ಶೇ 10 ಮೀಸಲಾತಿ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮೀಸಲಾತಿ ವಿಚಾರಗಳಲ್ಲಿ ಕೋರ್ಟ್‌ ಸ್ಪಷ್ಟವಾಗಿ ಹೇಳಬೇಕು. ಜಾತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಎಲ್ಲ ಜಾತಿಗಳಲ್ಲೂ ಕೆನೆಪದರು ಬರಬೇಕು. ಅವಕಾಶ ವಂಚಿತ ಪರಿಶಿಷ್ಟ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಿಗೆ ಉನ್ನತ ಹುದ್ದೆಗಳಲ್ಲೂ ಅವಕಾಶ ಸಿಗಬೇಕು. ಹಿಂದುಳಿದ ವರ್ಗಗಳ ಪಟ್ಟಿ ಸೇರಲು ಹೋರಾಟ ನಡೆಸುತ್ತಿರುವ ಜಾತಿಗಳಿಗೆ ಮೀಸಲಾತಿ ನೀಡಲು, ಈಗ ಹಿಂದುಳಿದ ಜಾತಿಗಿರುವ ಮೀಸಲಾತಿ ಪ್ರಮಾಣ ಆಕ್ರಮಿಸಿಕೊಳ್ಳಬಾರದು. ಆ ಪ್ರಮಾಣ ಮೀರಿ ಎಷ್ಟು ಬೇಕಾದರು ಹೆಚ್ಚಿಸಿ, ನಿಗದಿಪಡಿಸಲಿ.

**

ಅಸಾಧಾರಣ ಪ್ರಕರಣದ ಸ್ಪಷ್ಟತೆ ಇಲ್ಲ: ಎಚ್‌. ಕಾಂತರಾಜು
ಇಂದಿರಾ ಸಾಹ್ನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ 50 ಮೀರಬಾರದೆಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌, ಅಸಾಧಾರಣ ಪ್ರಕರಣಗಳಲ್ಲಿ ಹೆಚ್ಚಿಸಬಹುದು ಎಂದೂ ಹೇಳಿದೆ. ಆದರೆ, ಆ ಅಸಾಧಾರಣ ಪ್ರಕರಣ ಯಾವುದೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಮರಾಠರ ಮೀಸಲಾತಿ ವಿಷಯದಲ್ಲಿ ಇತ್ತೀಚೆಗೆ ನೀಡಿರುವ ತೀರ್ಪು ಗೊಂದಲಮಯವಾಗಿದೆ. ಅಂಕಿ ಅಂಶಗಳಿಲ್ಲದೆ ಮೀಸಲಾತಿ ಪ್ರಮಾಣ ನಿರ್ಣಯ ಸಾಧ್ಯವಿಲ್ಲ. ಸಂವಿಧಾನ ತಿದ್ದುಪಡಿ ಮೂಲಕ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಕೇಂದ್ರ ಸರ್ಕಾರ ಸಾಂವಿಧಾನಿಕ ಅಧಿಕಾರ ನೀಡಿದೆ. ಆದರೆ, ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ರಾಜ್ಯದ ಅಧಿಕಾರವನ್ನು ಕಿತ್ತುಕೊಂಡಿದೆ. ಸಂವಿಧಾನದ 338 ’ಬಿ’ ಕಲಂ (9)ರ ಪ್ರಕಾರ, ಎಲ್ಲ ರಾಜ್ಯಗಳು ಪ್ರಮುಖ ನೀತಿಗಳ ವಿಚಾರದಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಜೊತೆ ಸಮಾಲೋಚನೆ ಮಾಡಬೇಕು. ಆದರೆ, ಆ ನೀತಿಗಳು ಯಾವವು ಎಂದು ಎಲ್ಲಿಯೂ ಹೇಳಿಲ್ಲ. ರಾಷ್ಟ್ರೀಯ ಹಿಂದುಳಿದ ಆಯೋಗದ ಜೊತೆ ಸಮಾಲೋಚಿಸಬೇಕು ಎನ್ನುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ. ಮೀಸಲಾತಿ ಶೇ 50 ಮೀರಬಾರದೆಂದು ತೀರ್ಪಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10 ಮೀಸಲಾತಿ ಘೋಷಿರುವುದು ಮೇಲ್ನೋಟಕ್ಕೆ ಅಸಂವಿಧಾನಿಕವಾಗುತ್ತದೆ. ಈ ಪ್ರಕರಣ ವಿಚಾರಣಾ ಹಂತದಲ್ಲಿದೆ. ಸಂವಿಧಾನ ಅಡಿಯಲ್ಲಿ ಮೀಸಲಾತಿ ಪಡೆಯಲು ಅರ್ಹವೇ ಎನ್ನುವುದೂ ಮುಖ್ಯ. ಅದಕ್ಕೆ ಅಗತ್ಯವಾದ ಅಂಕಿಅಂಶ ಸಮೀಕ್ಷೆಗಳಿಂದ ಮಾತ್ರ ಪಡೆಯಲು ಸಾಧ್ಯ. ನಾನು ಅಧ್ಯಕ್ಷನಾಗಿದ್ದಾಗ ಮಾಡಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿಯೂ ಒಂದಂಶ. ಈ ಸಮೀಕ್ಷೆಯ ಅಂಶಗಳ ಬಗ್ಗೆ ನಾನು ಚರ್ಚಿಸುವುದಿಲ್ಲ. ಆದರೆ, ಸದ್ಯದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಯಲ್ಲಿ ಮೀಸಲಾತಿ ಪ್ರಮಾಣ ಶೇ 50ರಿಂದ ಹೆಚ್ಚಿಸಬೇಕು. ಒಳವರ್ಗೀಕರಣ ಅಗತ್ಯವೂ ಇದೆ.

**

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಚರ್ಚೆ ನಡೆಯಲಿ: ಬಿ.ಆರ್. ಪಾಟೀಲ
ಎಲ್ಲ ಸಮಾಜದವರು ಮೀಸಲಾತಿಗೆ ಬೇಡಿಕೆ ಇಟ್ಟಿದ್ದಾರೆ. ಕೇಳುವುದು ಹಕ್ಕು. ಆದರೆ, ಮೀಸಲಾತಿ ಪ್ರಮಾಣ ಶೇ 50 ಮೀರಬಾರದೆಂಬ ಸುಪ್ರೀಂ ಕೋರ್ಟ್‌ನ ಲಕ್ಷಣ ರೇಖೆಯಿಂದ ಮೀಸಲಾತಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಈ ತೀರ್ಪಿನ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕು. ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ತಕ್ಷಣ ಮೀಸಲಾತಿಗೆ ಹಕ್ಕು ಮಂಡಿಸುವ ಜನ ಸುಮ್ಮನಾಗುವುದಿಲ್ಲ. ಮೀಸಲಾತಿಯ ಹಸಿವು ಎಲ್ಲರಿಗಿದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಮೀಸಲಾತಿ ಫಲ ಹಂಚಿಕೆ ಆಗಬೇಕು. ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ಶೇ 10ರಷ್ಟು ಮೀಸಲಾತಿ ನೀಡಿರುವುದು ದೊಡ್ಡ ಅಪಾಯಕ್ಕೆ ಕಾರಣ ಆಗಬಹುದು. ಈ ಬಗ್ಗೆ ಚರ್ಚೆ ಆಗಬೇಕು. ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದಲ್ಲಿ ನಾನೂ ಕೈ ಜೋಡಿಸಿದ್ದೇನೆ. ಈ ಸಮುದಾಯ ಕೃಷಿಯನ್ನೇ ನಂಬಿದೆ. ಕೃಷಿ ವಲಯ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಹೋರಾಟ ನಡೆಸುತ್ತಿದೆ. ಕೆಲವು ಜಾತಿಗಳು ಇತರ ಜಾತಿಗಳನ್ನು ಕತ್ತಲಲ್ಲಿಟ್ಟು ಸಮಾಜ ವ್ಯವಸ್ಥೆಯನ್ನು ತುಳಿಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿ ವಾಸ್ತವದ ಹಿನ್ನೆಲೆಯಲ್ಲಿ ನಡೆಯುವ ವಾದದ ಬಗ್ಗೆ ಎಚ್ಚರ ವಹಿಸದಿದ್ದರೆ ಶೋಷಣೆ ತಪ್ಪುವುದಿಲ್ಲ. ಉನ್ನತ ಹುದ್ದೆಗಳಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಜಾಗ ಸಿಗದೇ ಇರಲು ಇದೂ ಕಾರಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು