ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಆಪ್ತ ಉಮೇಶ್‌, ಇತರರ ಮೇಲೆ ಐಟಿ ದಾಳಿ: ₹ 750 ಕೋಟಿ ಅಘೋಷಿತ ಆದಾಯ ಪತ್ತೆ

ನೀರಾವರಿ, ಹೆದ್ದಾರಿ ಕಾಮಗಾರಿಗಳ ಗುತ್ತಿಗೆದಾರರ ಮೇಲೆ ಐ.ಟಿ ದಾಳಿ
Last Updated 12 ಅಕ್ಟೋಬರ್ 2021, 20:56 IST
ಅಕ್ಷರ ಗಾತ್ರ

ಬೆಂಗಳೂರು: ಜಲ ಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಬೃಹತ್‌ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಮತ್ತು ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬದ ಆಪ್ತರಾಗಿದ್ದ ಬಿಎಂಟಿಸಿ ಚಾಲಕ ಆಯನೂರು ಉಮೇಶ್‌ ಮನೆ, ಕಚೇರಿಗಳಲ್ಲಿ ನಡೆಸಿದ ಶೋಧದಲ್ಲಿ ₹750 ಕೋಟಿಯಷ್ಟು ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ಆದಾಯ ತೆರಿಗೆ (ಐ.ಟಿ) ಇಲಾಖೆ ತಿಳಿಸಿದೆ.

ಗುತ್ತಿಗೆದಾರರು, ಉಮೇಶ್‌, ಯಡಿಯೂರಪ್ಪ ಅವರ ಮಗ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಹಪಾಠಿ ಅರವಿಂದ್‌ ರಾಮಸ್ವಾಮಿ ಸೇರಿದಂತೆ ಹಲವರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಗುತ್ತಿಗೆದಾರರಾದ ಡಿ.ವೈ. ಉಪ್ಪಾರ, ಸ್ಟಾರ್‌ ಚಂದ್ರು, ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್‌, ಅಮೃತ್‌ ಕನ್‌ಸ್ಟ್ರಕ್ಷನ್ಸ್‌ನ ಎಂ.ಸಿ. ರಾವ್‌, ಶ್ರೀನಿವಾಸ್‌, ಬಸವೇಶ್ವರ ನಗರದ ಸೋಮಶೇಖರ್, ಕಬ್ಬಿಣ ಮತ್ತು ಸಿಮೆಂಟ್‌ ಪೂರೈಸುವ ಸಹಕಾರ ನಗರದ ರಾಹುಲ್‌ ಎಂಟರ್‌ಪ್ರೈಸಸ್‌ ಸೇರಿದಂತೆ ಹಲವರ ಮೇಲೆ ಗುರುವಾರ ಐ.ಟಿ ಅಧಿಕಾರಿಗಳು ದಾಳಿ ಮಾಡಿದ್ದರು. ನಾಲ್ಕು ರಾಜ್ಯಗಳ 47 ಸ್ಥಳಗಳಲ್ಲಿ ಸತತ ಮೂರು ದಿನ ಶೋಧ ನಡೆದಿತ್ತು.

‘ಮೂವರು ಗುತ್ತಿಗೆದಾರರು ₹750 ಕೋಟಿಯಷ್ಟು ಆದಾಯವನ್ನು ಬಹಿರಂಗಪಡಿಸದೇ ಇರುವುದು ಪತ್ತೆಯಾಗಿದೆ. ನಕಲಿ ಬಿಲ್‌ಗಳು ಹಾಗೂ ವಹಿವಾಟು ದಾಖಲೆಗಳನ್ನು ಸೃಷ್ಟಿಸಿ ಆದಾಯ ಬಚ್ಚಿಟ್ಟಿರುವುದು ಕಂಡುಬಂದಿದೆ. ಈ ಪೈಕಿ ₹487 ಕೋಟಿಯಷ್ಟು ಮೊತ್ತದ ಅಘೋಷಿತ ಆದಾಯವನ್ನು ಹೊಂದಿರುವುದಾಗಿ ಈ ಕಂಪನಿಗಳು ಒಪ್ಪಿಕೊಂಡಿವೆ’ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಒಂದು ಸಮೂಹವು ಕಾರ್ಮಿಕರ ವೆಚ್ಚವನ್ನು ಹೆಚ್ಚಾಗಿ ತೋರಿಸುವ ಮೂಲಕ ₹ 382 ಕೋಟಿಯಷ್ಟು ಆದಾಯವನ್ನು ಗೋಪ್ಯ
ವಾಗಿ ಇಟ್ಟಿರುವುದನ್ನು ಒಪ್ಪಿಕೊಂಡಿದೆ. ಮತ್ತೊಂದು ಕಂಪನಿಯು ಅಸ್ತಿತ್ವದಲ್ಲೇ ಇಲ್ಲದ, ಕೇವಲ ಕಾಗದದ ಮೇಲಷ್ಟೇ ಇರುವ ಕಂಪನಿಗಳ ಜತೆ ವಹಿವಾಟು ನಡೆಸಿರುವ ದಾಖಲೆಗಳನ್ನು ಸೃಷ್ಟಿಸಿ ₹ 105 ಕೋಟಿ ವರಮಾನವನ್ನು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ ಎಂದು ಹೇಳಿದೆ.

ಬೇನಾಮಿ ವಹಿವಾಟು ಪತ್ತೆ: 2019ರಿಂದ ಈಚೆಗೆ ಜಲ ಸಂಪನ್ಮೂಲ ಇಲಾಖೆಯ ನೀರಾವರಿ ನಿಗಮಗಳು ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಬೃಹತ್‌ ನೀರಾವರಿ ಯೋಜನೆಗಳು ಹಾಗೂ ಹೆದ್ದಾರಿಗಳ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಕೆಲವು ಗುತ್ತಿಗೆದಾರರು ಬೇನಾಮಿ ಹೆಸರಿನಲ್ಲಿ ವಹಿವಾಟು ನಡೆಸಿರುವುದನ್ನು ಐ.ಟಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಸಾಮಗ್ರಿ ಖರೀದಿ, ಕಾರ್ಮಿಕರ ವೇತನ ಪಾವತಿ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆದಾಯ ಮುಚ್ಚಿಡಲಾಗಿದೆ. ಗುತ್ತಿಗೆ ಕೆಲಸವನ್ನೇ ಮಾಡದ ವ್ಯಕ್ತಿಗಳು, ನಿರ್ಮಾಣ ಕಾಮಗಾರಿಯನ್ನೇ ನಿರ್ವಹಿಸದವರು, ಆರ್ಥಿಕವಾಗಿ ಶಕ್ತರಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಉಪ ಗುತ್ತಿಗೆ ಒಪ್ಪಂದಗಳನ್ನು ಸೃಷ್ಟಿಸಿ ತೆರಿಗೆ ವಂಚಿಸಲಾಗಿದೆ. ಒಂದು ಕಂಪನಿಯು ಇಂತಹ 40 ಉಪ ಗುತ್ತಿಗೆದಾರರ ಸೇವೆ ಪಡೆದಿರುವುದಾಗಿ ದಾಖಲೆ ಸೃಷ್ಟಿಸಿ ಭಾರಿ ಪ್ರಮಾಣದ ತೆರಿಗೆ ವಂಚಿಸಿದೆ. ಅಕ್ರಮ ಎಸಗಿರುವುದಾಗಿ ಈ ಕಂಪನಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿವೆ ಎಂದು ಇಲಾಖೆ ತಿಳಿಸಿದೆ.

₹ 4.69 ಕೋಟಿ ನಗದು ವಶ

ದಾಳಿಯ ವೇಳೆ ಲೆಕ್ಕಪತ್ರಗಳಿಲ್ಲದ ₹4.69 ಕೋಟಿ ನಗದು, ₹8.67 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹ 29.83 ಕೋಟಿ ಮೌಲ್ಯದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಾಹಿತಿ ನೀಡಿದೆ. ಈ ಪ್ರಕರಣದಲ್ಲಿ ಅರವಿಂದ್‌ ರಾಮಸ್ವಾಮಿ ಮತ್ತು ಅವರ ಕೆಲವು ಸಹವರ್ತಿಗಳನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT