ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ಶೋಧ: ಮತ್ತಷ್ಟು ದಾಖಲೆ ವಶಕ್ಕೆ, ಉಮೇಶ್‌, ಅರವಿಂದ್‌ ಜತೆಗೂ ಸೋಮಶೇಖರ್‌ ನಂಟು

ಅಧಿಕಾರಿಗಳ ಜತೆ ನಂಟು: ಮೂರನೇ ದಿನವೂ ಮುಂದುವರಿದ ಶೋಧ
Last Updated 9 ಅಕ್ಟೋಬರ್ 2021, 16:21 IST
ಅಕ್ಷರ ಗಾತ್ರ

ಬೆಂಗಳೂರು: ಜಲ ಸಂಪನ್ಮೂಲ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ನಿಕಟ ನಂಟು ಹೊಂದಿದ್ದ ಗುತ್ತಿಗೆದಾರ ಸೋಮಶೇಖರ್‌ ಮನೆಯಿಂದ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಶನಿವಾರ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

2019ರಿಂದ ಈವರೆಗೆ ಜಲ ಸಂಪನ್ಮೂಲ, ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಕೈಗೊಂಡಿರುವ ಬೃಹತ್‌ ಕಾಮಗಾರಿಗಳಲ್ಲಿ ತೆರಿಗೆ ವಂಚನೆ, ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಐ.ಟಿ ಅಧಿಕಾರಿಗಳು ಗುರುವಾರದಿಂದ ಶೋಧ ಆರಂಭಿಸಿದ್ದಾರೆ. ಸತತ ಮೂರನೇ ದಿನವೂ ಶೋಧ ಮುಂದುವರಿಯಿತು.

ಸೋಮಶೇಖರ್‌ ಅವರ ಬಸವೇಶ್ವರನಗರದ ಮನೆಯ ಮೇಲೆ ಶುಕ್ರವಾರವೇ ದಾಳಿ ನಡೆಸಲಾಗಿತ್ತು. ಶನಿವಾರವೂ ಶೋಧ ಮುಂದುವರಿಸಿದ ತಂಡ, ಚೀಲಗಳಲ್ಲಿ ತುಂಬಿ ದಾಖಲೆಗಳನ್ನು ಕೊಂಡೊಯ್ದಿದೆ. ಮನೆಯಲ್ಲೇ ಇದ್ದ ಗುತ್ತಿಗೆದಾರನನ್ನು ಐ.ಟಿ ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಸೋಮಶೇಖರ್‌ ಮೂರೂ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ನಿಕಟ ನಂಟು ಹೊಂದಿದ್ದರು. ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವಿವಿಧ ಇಲಾಖೆಗಳ ಮುಖ್ಯ ಎಂಜಿನಿಯರ್‌ಗಳ ಜತೆ ಸಂಪರ್ಕದಲ್ಲಿದ್ದರು. ಜಲ ಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಗಳಿಂದ ಎರಡು ವರ್ಷಗಳ ಅವಧಿಯಲ್ಲಿ ಹಲವು ಕಾಮಗಾರಿಗಳ ಗುತ್ತಿಗೆ ಪಡೆದಿದ್ದರು. ಈ ಮಾಹಿತಿ ಆಧರಿಸಿ ದಾಳಿ ನಡೆಸಿದ್ದು, ಕೆಲವು ಕಾಮಗಾರಿಗಳ ಗುತ್ತಿಗೆಗೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಮೇಶ್‌, ಅರವಿಂದ್‌ ಜತೆಗೂ ನಂಟು: ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಕುಟುಂಬದ ನಿಕಟವರ್ತಿಯಾಗಿದ್ದು, ಮುಖ್ಯಮಂತ್ರಿಯವರ ಸಚಿವಾಲಯದ ಸಿಬ್ಬಂದಿಯಾಗಿದ್ದ ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಆಯನೂರು ಉಮೇಶ್‌ ಮತ್ತು ಬಿ.ವೈ. ವಿಜಯೇಂದ್ರ ಅವರ ಸಹಪಾಠಿ ಅರವಿಂದ್‌ ಜತೆಗೆ ಸೋಮಶೇಖರ್‌ ನಿಕಟ ನಂಟು ಹೊಂದಿದ್ದರು. ಈ ಕಾರಣಕ್ಕಾಗಿಯೇ ಅವರ ಮನೆಯ ಮೇಲೆಯೂ ದಾಳಿ ನಡೆದಿದೆ ಎಂದು ಮೂಲಗಳು ಹೇಳಿವೆ.

ಗುರುವಾರ ಮತ್ತು ಶುಕ್ರವಾರ ಶೋಧ ನಡೆಸಲಾಗಿದ್ದ ಇನ್ನೂ ಕೆಲವು ಸ್ಥಳಗಳಲ್ಲಿ ಶನಿವಾರವೂ ಐ.ಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೆಲವು ಕಚೇರಿಗಳಿಂದ ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌ಗಳು, ಲೆಕ್ಕಪತ್ರಕ್ಕೆ ಸಂಬಂಧಿಸಿದ ಡಿಜಿಟಲ್‌ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಎತ್ತಿನಹೊಳೆ ಯೋಜನೆ ಸೇರಿದಂತೆ ಕೆಲವು ಬೃಹತ್‌ ನೀರಾವರಿ ಕಾಮಗಾರಿಗಳ ಕಾಮಗಾರಿ ಸ್ಥಳಗಳಲ್ಲೂ ಶೋಧ ನಡೆಸಿ ದಾಖಲೆ ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT