ಭಾನುವಾರ, ಸೆಪ್ಟೆಂಬರ್ 19, 2021
22 °C
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾಹಿತಿ

ಜಲಶಕ್ತಿ ಅಭಿಯಾನ: ರಾಜ್ಯ ಮೊದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿರುವ ಜಲಶಕ್ತಿ ಅಭಿಯಾನದ ಅನುಷ್ಠಾನದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ದೊರೆತಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಶೇ 65ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಮೀಸಲಿಡುವುದು ಕಡ್ಡಾಯ’ ಎಂದರು.

‘ಜಲಶಕ್ತಿ ಅಭಿಯಾನ (ಕ್ಯಾಚ್ ದಿ ರೇನ್) ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 22ರಂದು ಚಾಲನೆ ನೀಡಿದ್ದರು. 2021–22ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾಯೋಜನೆಯಲ್ಲಿ ಪ್ರತ್ಯೇಕವಾಗಿ ‘ಅಂತರ್ಜಲ ಚೇತನ’ ಶೀರ್ಷಿಕೆಯಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಅಭಿಯಾನದಲ್ಲಿ ಈವರೆಗೆ ಜಲ ಸಂರಕ್ಷಣೆಗೆ ಸಂಬಂಧಿಸಿದ 4.87 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಅದರಲ್ಲಿ 2.38 ಲಕ್ಷ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಯೋಜನೆಯಡಿ ಈವರೆಗೆ ₹ 2,394.32 ಕೋಟಿ ವೆಚ್ಚ ಮಾಡಲಾಗಿದ್ದು, ಅದರಲ್ಲಿ ಶೇ 82ರಷ್ಟು ಅಂದರೆ ₹ 2,408.50 ಕೋಟಿಯನ್ನು ಜಲಶಕ್ತಿ ಅಭಿಯಾನಕ್ಕೇ ಬಳಸಲಾಗಿದೆ. ಕೇಂದ್ರವು ಆ.10ರಂದು ನೀಡಿರುವ ಪಟ್ಟಿ ಪ್ರಕಾರ, ಪಶ್ಚಿಮ ಬಂಗಾಳ 2ನೇ ಹಾಗೂ ಉತ್ತರ ಪ್ರದೇಶ 3ನೇ ಸ್ಥಾನ ಪಡೆದಿದೆ’ ಎಂದು ಹೇಳಿದರು.

‘ಉದ್ಯೋಗ ಚೀಟಿ ಪಡೆದಿರುವ 40 ಲಕ್ಷ ಮಂದಿಯು ಸೈನಿಕರಂತೆ ಕೆಲಸ ಮಾಡಿದ್ದರಿಂದ ಸಾಧನೆ ಸಾಧ್ಯವಾಗಿದೆ. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ಶ್ರಮಿಸಿದ್ದಾರೆ’ ಎಂದು ಶ್ಲಾಘಿಸಿದರು.

‘ರಾಜ್ಯದ ಎಲ್ಲ ಕೆರೆಗಳ ಅಭಿವೃದ್ಧಿ ಗುರಿ ಇದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 240 ಹೊಸ ಕೆರೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಕಲಬುರ್ಗಿ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ನೂರಾರು ಕಲ್ಯಾಣಿಗಳ ಕಾಯಕಲ್ಪಕ್ಕೆ ಆದ್ಯತೆ ಕೊಡಲಾಗಿದೆ. ಬೆಳಗಾವಿ, ಗದಗ, ಕಲಬುರ್ಗಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ರೈತರ ಜಮೀನುಗಳಲ್ಲಿ ಬದು ಮತ್ತು ಕೃಷಿ ಹೊಂಡಗಳನ್ನು  ಮಾಡಲಾಗಿದೆ. ರಾಯಚೂರಲ್ಲಿ 150 ಗೋಕಟ್ಟೆಗಳನ್ನು ನಿರ್ಮಿಸಲಾಗಿದೆ. ಕರಾವಳಿ ಮತ್ತು ಮಲೆನಾಡಲ್ಲಿ ತೆರೆದಬಾವಿಗಳು ಹಾಗೂ ಬಯಲು ಸೀಮೆಯಲ್ಲಿ ಸಮಗ್ರ ಕೆರೆ ಅಭಿವೃದ್ಧಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ರಾಮನಗರದಲ್ಲಿ ಅರಣ್ಯೀಕರಣಕ್ಕೆ ಒತ್ತು ಕೊಡಲಾಗಿದೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು