ಬುಧವಾರ, ಮಾರ್ಚ್ 3, 2021
18 °C

‘ಜನಸೇವಕ’ ಯೋಜನೆ ಮತ್ತೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂದಿರಾನಗರದ ವರಲಕ್ಷ್ಮಿ ಮತ್ತು ರಾಜಾಜಿನಗರ 3ನೇ ಬ್ಲಾಕ್ ನಿವಾಸಿ ನಾಗರತ್ನ ಎಂಬವರು ಆಧಾರ್‌ ಕಾರ್ಡ್ ನ್ಯೂನತೆ ಸರಿಪಡಿಸುವಂತೆ ಸಲ್ಲಿಸಿದ್ದ ಅರ್ಜಿಯಂತೆ, ತಿದ್ದುಪಡಿ ಮಾಡಿ ಮನೆ ಬಾಗಿಲಿಗೆ ತಲುಪಿಸುವ ಮೂಲಕ ‘ಜನಸೇವಕ’ (ನಾಗರಿಕ ಸೌಲಭ್ಯ ಮನೆ ಬಾಗಿಲಿಗೆ) ಯೋಜನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಂಗಳವಾರ ಮರುಚಾಲನೆ ನೀಡಿದರು.

ಕೋವಿಡ್‌ ಕಾರಣದಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ, ಬಿಬಿಎಂಪಿ ವ್ಯಾಪ್ತಿಯ ರಾಜಾಜಿನಗರ, ಮಹದೇವಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತ್ತೆ ಆರಂಭಿಸಲಾಗಿದೆ. ಯೋಜನೆ ಆರಂಭವಾಗುತ್ತಿದ್ದಂತೆ, ಜನಸೇವಕರು ಅರ್ಜಿದಾರರ ಮನೆ ಬಾಗಿಲಿಗೆ ಅಗತ್ಯ ಸೇವೆಗಳನ್ನು ತಲುಪಿಸಿದರು.

‘ಬಿಬಿಎಂಪಿ, ಕಂದಾಯ, ಸಾರಿಗೆ ಇಲಾಖೆಗೆ ಸೇರಿದ 55 ಸೇವೆಗಳನ್ನು ಈ ಯೋಜನೆ ಮೂಲಕ ನಿರ್ವಹಿಸಲಾಗುತ್ತದೆ. ಆಧಾರ್ ಕಾರ್ಡ್ ನ್ಯೂನತೆ ಸರಿಪಡಿಸುವುದು ಕೂಡಾ ಈ ಸೇವೆಗಳಲ್ಲಿ ಸೇರಿದೆ. ಹಿರಿಯ ನಾಗರಿಕರು ಮತ್ತು ಸರ್ಕಾರಿ ಕೆಲಸಗಳಿಗಾಗಿ ಕರ್ತವ್ಯಕ್ಕೆ ರಜೆ ಹಾಕಿ ಕಚೇರಿಗಳಿಗೆ ಅಡ್ಡಾಡುವುದನ್ನು ತಪ್ಪಿಸಲು ಮತ್ತು ವಿಶೇಷವಾಗಿ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿಗೊಳಿಸಿ ನೇರವಾಗಿ ಫಲಾನುಭವಿಗಳಿಗೆ ಸರ್ಕಾರಿ ಸೇವೆ ಒದಗಿಸಲು ಈ ಯೋಜನೆ ಸಹಕಾರಿಯಾಗಿದೆ’ ಎಂದು ಸಚಿವರು ಅಭಿಪ್ರಾಯಪಟ್ಟರು.

‘ಈ ಯೋಜನೆಯನ್ನು ಶೀಘ್ರದಲ್ಲಿ ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳಿಗೂ ವಿಸ್ತರಿಸಲಾಗುವುದು. ಆ ನಂತರ ರಾಜ್ಯದೆಲ್ಲೆಡೆ ವಿಸ್ತರಿಸಲು ಚಿಂತನೆ ನಡೆದಿದೆ. ಅದಕ್ಕಾಗಿ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದೂ ಸಚಿವರು ತಿಳಿಸಿದರು.

ಸಕಾಲ ಮಿಷನ್, ಜನಸೇವಕ ಯೋಜನೆ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು