ಮಂಗಳವಾರ, ಮಾರ್ಚ್ 28, 2023
22 °C

ಜನಸೇವಕ ಆರಂಭ: ಇನ್ನು ಮನೆ ಬಾಗಿಲಿಗೆ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಟು ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ 'ಜನಸೇವಕ' ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಚಾಲನೆ ನೀಡಿದರು.

ವಿಧಾನಸೌಧದ ಎದುರಿನ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ ಜನಸೇವಕ, ಏಕೀಕೃತ ದೂರು ಪರಿಹಾರ ವ್ಯವಸ್ಥೆ ಮತ್ತು ಸಾರಿಗೆ ಇಲಾಖೆಯ ಕಾಗದ ರಹಿತ ಮತ್ತು ಸಂಪರ್ಕ ರಹಿತ ಸೇವೆಗಳನ್ನು ಉದ್ಘಾಟಿಸಿದರು.

ಜನಸೇವಕ ಯೋಜನೆಯಲ್ಲಿ ಭಾರತೀಯ ವಿಶಿಷ್ಟ ಗುರುತು  ಪ್ರಾಧಿಕಾರ (ಆಧಾರ್), ಕಂದಾಯ ಇಲಾಖೆಯ 21, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ಒಂಬತ್ತು, ಬಿಬಿಎಂಪಿಯ 18, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಒಂದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಂದು, ಪೊಲೀಸ್ ಇಲಾಖೆಯ ಮೂರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಒಂದು ಸೇವೆಯನ್ನು ಒದಗಿಸಲಾಗುತ್ತದೆ.

ಈ ಯೋಜನೆಯನ್ನು ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳಲ್ಲಿ ಸೋಮವಾರದಿಂದ ಜಾರಿಗೆ ತರಲಾಗಿದೆ. 2022ರ ಜನವರಿ 26ರೊಳಗೆ ರಾಜ್ಯದ ಎಲ್ಲ ಕಡೆಗಳಲ್ಲೂ ಜಾರಿಗೊಳಿಸುವ ಗುರಿ ಇದೆ.

ಈ ಯೋಜನೆಯ ಅಡಿಯಲ್ಲಿ ಜನಸೇವಕರನ್ನು ನೇಮಿಸಲಾಗುತ್ತದೆ. ಜನರು ಸರ್ಕಾರಿ ಸೇವೆ ಪಡೆಯಲು 080-44554455ಗೆ ಕರೆ ಮಾಡಬಹುದು ಅಥವಾ ಮೊಬೈಲ್ ಒನ್ ತಂತ್ರಾಂಶದಲ್ಲಿ ಕೋರಿಕೆ ಸಲ್ಲಿಸಬಹುದು ಅಥವಾ www.janasevaka.Karnataka.gov.in ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಸಬಹುದು.
ಜನರು ನಿಗದಿಪಡಿಸಿದ ಸಮಯಕ್ಕೆ ಜನಸೇವಕರು ಸಂಬಂಧಿಸಿದ ಅರ್ಜಿ ನಮೂನೆಗಳೊಂದಿಗೆ ಜನರ ಮನೆ ಬಾಗಿಲಿಗೆ ಹೋಗುತ್ತಾರೆ. ಮನೆಯಿಂದಲೇ ಅರ್ಜಿ ಪಡೆದು ಸೇವೆ ಒದಗಿಸಲಾಗುತ್ತದೆ.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ, 'ಜನರು ಸುಲಭವಾಗಿ ಸರ್ಕಾರದ ಸೇವೆ ಪಡೆಯಲಾಗದ ಸ್ಥಿತಿ. ಪ್ರಭುತ್ವದ ಶಕ್ತಿ ಕೆಲವೇ ಜನರ ಕಪಿಮುಷ್ಠಿಯಲ್ಲಿ ಇರಬಾರದು. ಆ ಕಾರಣಕ್ಕಾಗಿ ಜನಸೇವಕ ಯೋಜನೆ ಜಸರಿಗೊಳಿಸಲಾಗಿದೆ' ಎಂದರು.

ಜನರ  ಮನೆ ಬಾಗಿಲಿಗೆ ಸೇವೆ ತಲುಪಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಜನರಿಗೆ ಅನುಕೂಲ ಆಗುತ್ತದೆ. ವಿಳಂಬ ತಪ್ಪುತ್ತದೆ ಎಂದು ಹೇಳಿದರು.

ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿ. ಶ್ರೀರಾಮುಲು, ಬಿ.ಸಿ. ನಾಗೇಶ್, ಶಾಸಕರಾದ ರಿಜ್ವಾನ್ ಅರ್ಷದ್, ಎಸ್. ಸುರೇಶ್ ಕುಮಾರ್, ವಿಧಾನ ಪರಿಷತ್ ನಲ್ಲಿ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಇದ್ದರು‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು