ಸೋಮವಾರ, ಸೆಪ್ಟೆಂಬರ್ 20, 2021
22 °C

ನೀರಾವರಿ ಯೋಜನೆಗಳಿಗೆ ಅನುಮತಿ ಕೋರಿ ರಾಷ್ಟ್ರಪತಿ, ಪ್ರಧಾನಿಗೆ ಜೆಡಿಎಸ್‌ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ನೀಡುವಂತೆ ಆಗ್ರಹಿಸಿ ಜೆಡಿಎಸ್‌ ಗುರುವಾರ ರಾಜ್ಯಪಾಲರ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿಯಿಂದ ರಾಜಭವನಕ್ಕೆ ಕಾಲ್ನಡಿಗೆ ಜಾಥಾ ಮೂಲಕ ತೆರಳಿದ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‌.ಡಿ ಕುಮಾರಸ್ವಾಮಿ, ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಎರಡು ವರ್ಷಗಳಿಂದ ಕೇಂದ್ರದ ಅನುಮತಿ ಕೋರುತ್ತಿದೆ. ಕೃಷ್ಣಾ ಮತ್ತು ಮಹದಾಯಿಯಲ್ಲಿ ರಾಜ್ಯಕ್ಕೆ ಹೆಚ್ಚುವರಿ ನೀರು ನಿಗದಿ ಮಾಡಲಾಗಿದೆಯಾದರೂ, ಅದರ ಬಳಕೆಗೆ ಸಂಬಂಧಿಸಿದ ಯೋಜನೆಗಳಿಗೆ ಕೇಂದ್ರ ಅನುಮತಿ ನೀಡುತ್ತಿಲ್ಲ. ಈ ಮೂರು ಯೋಜನೆಗಳಿಗೆ ಅನುಮತಿ ನೀಡುವಂತೆ ಆಗ್ರಹಿಸಿ ರಾಜ್ಯಪಾಲರ ಮೂಲಕ ಜೆಡಿಎಸ್‌ ಮನವಿ ಮಾಡಿದೆ,‘ ಎಂದು ತಿಳಿಸಿದರು.

‘ಕೇಂದ್ರ ಸಕಾರಾತ್ಮಕಾಗಿ ಸ್ಪಂದಿಸದೇ ಇದ್ದರೆ ದೇವೇಗೌಡರ ನೇತೃತ್ವದಲ್ಲಿ ದೆಹಲಿಗೆ ತೆರಳಿ ರಾಷ್ಟ್ರಪತಿ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು,‘ ಎಂದೂ ಅವರು ಇದೇ ವೇಳೆ ಹೇಳಿದರು.

ನಂತರ ಈ ಬಗ್ಗೆ ಟ್ವೀಟ್‌ ಮಾಡಿರುವ ಎಚ್‌.ಡಿ ಕುಮಾರಸ್ವಾಮಿ, ‘ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ನೀಡಲು ಆಗ್ರಹಿಸಿ ಮನವಿ ಪತ್ರವನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳಿಗೆ ರವಾನಿಸಲಾಗಿದೆ. ಈ ಹೋರಾಟ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಗಲಿದೆ. ಕನ್ನಡ ನಾಡಿನ ನುಡಿ, ನೆಲ, ಜಲ, ಗಡಿ ರಕ್ಷಣೆ ಜೆಡಿಎಸ್‌ನ ಆದ್ಯತೆ. ಅದೇ ನಮ್ಮ ಬದ್ಧತೆ,‘ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು