ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ʼಒಂದೇ ದೇಶ, ಒಂದೇ ಭಾಷೆʼ ನೀತಿ ಮೂಲಕ ಹಿಂದಿ ಹೇರಿಕೆ: ಎಚ್.ಡಿ. ಕುಮಾರಸ್ವಾಮಿ

Last Updated 19 ಅಕ್ಟೋಬರ್ 2021, 6:53 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವುʼಒಂದೇ ದೇಶ, ಒಂದೇ ಭಾಷೆʼ ನೀತಿಯ ಹಿಂದಿ ಹೇರಿಕೆ ಮಾಡುತ್ತಿದೆ. ಆ ಮೂಲಕ ನಾಡಿನ ಸಾಂಸ್ಕೃತಿಕ ಸೊಗಡಿನ ದನಿಯಾಗಿರುವ ದೂರದರ್ಶನದ ಪ್ರಾದೇಶಿಕ ಕೇಂದ್ರಗಳಿಗೆ ಬೀಗ ಜಡಿಯುವಕೆಲಸಕ್ಕೆ ಕೈ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ ನರೇಂದ್ರ ಮೋದಿ‌ ನೇತೃತ್ವದ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ʼಒಂದೇ ದೇಶ, ಒಂದೇ ಭಾಷೆʼ ಎನ್ನುವ ಕರಾಳ ನೀತಿಯ ಮೂಲಕ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರಕಾರವು ಈಗ ನಮ್ಮ ನಾಡಿನ ಗ್ರಾಮೀಣ, ಜಾನಪದ, ಸಾಂಸ್ಕೃತಿಕ ಸೊಗಡಿನ ದನಿಯಾಗಿರುವ ಆಕಾಶವಾಣಿ ಮತ್ತು ದೂರದರ್ಶನದ ಪ್ರಾದೇಶಿಕ ಕೇಂದ್ರಗಳಿಗೆ ಬೀಗ ಜಡಿಯುವ ಹೇಯ ಕೃತ್ಯಕ್ಕೆ ಕೈಹಾಕಿರುವುದು ಖಂಡನೀಯ ಎಂದು ಗುಡುಗಿದ್ದಾರೆ.

ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವವರದಿಯನ್ನು ಉಲ್ಲೇಖಿಸಿ, ವಿವಿಧತೆಯಲ್ಲಿ ಏಕತೆಯನ್ನು ಮೈದುಂಬಿಕೊಂಡು ಜಗತ್ತಿಗೆ ʼಬಹುತ್ವತೆಯ ಆದರ್ಶʼ ಆಗಿರುವ ಭಾರತದ ಪ್ರಾದೇಶಿಕ ವೈವಿಧ್ಯಮಯ ಅನನ್ಯ ಸಾಂಸ್ಕೃತಿಕ, ಜಾನಪದ ಸಂಪತ್ತಿಗೆ ಕೇಂದ್ರ ಸರಕಾರ ಕೊಳ್ಳಿ ಇಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, ʼಈಗಾಗಲೇ ಡಿಡಿ, ಆಕಾಶವಾಣಿಯ ಒಂದೊಂದೇ ಪ್ರಾದೇಶಿಕ ಕಾರ್ಯಕ್ರಮ ಸ್ಥಗಿತಗೊಳಿಸಿದ ನಂತರ ಪ್ರಾದೇಶಿಕ ಪ್ರಸಾರ ಕೇಂದ್ರಗಳನ್ನೂ ಮುಚ್ಚುವ ಹುನ್ನಾರ ನಡೆಸಿದೆ. ಅಕ್ಟೋಬರ್‌ 31ರಿಂದ ಕಲಬುರಗಿ ಪ್ರಾದೇಶಿಕ ಕೇಂದ್ರಕ್ಕೂ ಬೀಗ ಜಡಿಯಲು ಪ್ರಸಾರ ಭಾರತಿ ಹೊರಟಿದೆ. ಇದು ಕನ್ನಡ ವಿರೋಧಿ ನಡೆ, ಪ್ರಾದೇಶಿಕ ಭಾಷೆಗಳಿಗೆ ಚರಮಗೀತೆ ಹಾಡುವ ದಮನ ನೀತಿʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ʼದೇಶ ಭಾಷೆಗಳಲ್ಲಿ ಒಂದಾದ ಹಿಂದಿಯನ್ನೇ ಉಳಿಸಿ ಬೆಳೆಸುವ ಹಾಗೂ ಅದನ್ನೇ ಕನ್ನಡಿಗರ ಮೇಲೆ ಹೇರುವ ಏಕೈಕ ದುರಾಲೋಚನೆಯಿಂದ ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು ಕಡೆಗಣಿಸಿ, ಮೂಲೋತ್ಪಾಟನೆ ಮಾಡಲು ಕೇಂದ್ರ ಸರಕಾರ ಈ ಮೂಲಕ ಹೊಂಚು ಹಾಕಿರುವುದು ಗೊತ್ತಾಗುತ್ತದೆʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ʼಯಾವುದೇ ಕಾರಣಕ್ಕೂ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಪ್ರಸಾರ ಆಗುತ್ತಿರುವ ಪ್ರಾದೇಶಿಕ ಕಾರ್ಯಕ್ರಮಗಳು ನಿಲ್ಲಬಾರದು. ಕಲಬುರಗಿ ಸೇರಿ ಯಾವುದೇ ಭಾಗದಲ್ಲಿರುವ ಪ್ರಾದೇಶಿಕ ಪ್ರಸಾರ ಕೇಂದ್ರಗಳನ್ನು ಮುಚ್ಚಬಾರದು ಎನ್ನುವುದು ನನ್ನ ಒತ್ತಾಯವಾಗಿದೆʼ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT