ಸೋಮವಾರ, ಏಪ್ರಿಲ್ 19, 2021
23 °C

ಮುಂಬೈಗೆ ಕರೆದೊಯ್ದವರೇ ಸಿ.ಡಿ ಮಾಡಿದ್ರಾ: ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

hd kumaraswamy prajavani photo

ಬೆಂಗಳೂರು: ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಮುಂಬೈಗೆ ಕರೆದುಕೊಂಡು ಹೋದವರೇ ಇದನ್ನೆಲ್ಲಾ ಮಾಡಿದರೋ ಎಂದು ಪ್ರಶ್ನಿಸಿದ್ದಾರೆ.

‘ಮುಂಬೈಗೆ ಹೋದ 12 ಮಂದಿಯದ್ದೂ ಸಿ.ಡಿಗಳಿವೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಮುಂಬೈಗೆ ಕರೆದುಕೊಂಡು ಹೋದವರೇ ಇದನ್ನೆಲ್ಲಾ ಮಾಡಿದರೋ? ಸಿನಿಮಾ ರಂಗದ ಪರಿಣಿತರೂ ಜತೆಯಲ್ಲೇ ಇದ್ದರು. ಅವರೇನಾದರೂ ಮಾಡಿರಬಹುದಾ’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿ.ಡಿಯಲ್ಲಿ ಇದ್ದಾರೆ ಎನ್ನಲಾದ ಯುವತಿಯನ್ನು ಸಂತ್ರಸ್ತೆ ಎನ್ನುತ್ತಿದ್ದೀರಿ. ಆ ಹೆಣ್ಣು ಮಗಳು ಭೇಟಿ ನೀಡಿದ ಸ್ಥಳದ ವಿವರ, ಆಕೆಯ ಭಾವಚಿತ್ರವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ. ಆಕೆ ಸಂತ್ರಸ್ತಳಾಗಿದ್ದು, ಅವರ ಕುಟುಂಬಕ್ಕೆ ನಿಜವಾಗಿಯೂ ಕಿರುಕುಳ ಆಗಿದ್ದರೆ ಸಾರ್ವಜನಿಕವಾಗಿ ಬಂದು ದೂರು ನೀಡಬೇಕಿತ್ತಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಓದಿ: ಅನೈತಿಕ 6 ಸಚಿವರ ಉತ್ತರ ಬೇಕಿಲ್ಲ: ಉಭಯ ಸದನಗಳಲ್ಲಿ ಕಾಂಗ್ರೆಸ್‌ ತಕರಾರು

‘ಈ ಘಟನೆಯಿಂದ ನೊಂದುಕೊಂಡ ಆಕೆಯ ಕುಟುಂಬವನ್ನು ಸಂತ್ರಸ್ತರು ಎನ್ನಬೇಕೋ? ಯುವತಿಯನ್ನೇ ಸಂತ್ರಸ್ತೆ ಎನ್ನಬೇಕೋ? ಸಿ.ಡಿ ನಕಲಿ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ಅವರನ್ನು, ಅವರ ಸಹೋದರರು, ಪತ್ನಿ ಮತ್ತು ಕುಟುಂಬದ ಸದಸ್ಯರನ್ನು ಸಂತ್ರಸ್ತರು ಎನ್ನಬೇಕೋ’ ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ಸಲಹೆ ಕೊಟ್ಟವರಾರು?

‘ಆರು ಮೇಧಾವಿ ಸಚಿವರು ತಮ್ಮ ಸಿ.ಡಿ ಬಿಡುಗಡೆ ಮಾಡದಂತೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ಸಲಹೆ ಕೊಟ್ಟವರು ಯಾರು ಎಂಬುದು ಪ್ರಶ್ನೆ. ಸಚಿವರಿಗೆ ಸ್ವಯಂ ಆತ್ಮವಿಶ್ವಾಸ ಇದ್ದಿದ್ದರೆ ತಡೆ ತರುವ ಪ್ರಶ್ನೆ ಏಕೆ ಉದ್ಭವಿಸುತ್ತಿತ್ತು’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಇವೆಲ್ಲವೂ ವ್ಯಕ್ತಿಯ ಖಾಸಗಿ ಬದುಕಿನ ಹವ್ಯಾಸಕ್ಕೆ ಸಂಬಂಧಿಸಿದ ವಿಷಯಗಳು. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಸಂಗತಿಯನ್ನು ರೆಕಾರ್ಡ್‌ ಮಾಡಿ ರಾಜಕೀಯಕ್ಕೆ ಬಳಸುವ ಕೆಲಸವನ್ನು ನಮ್ಮ ಕುಟುಂಬ ಎಂದೂ ಮಾಡಿಲ್ಲ. ನಾನು ಕೂಡ ಒಮ್ಮೆ ತಪ್ಪು ಮಾಡಿದ್ದೆ. ವಿಧಾನಸಭೆಯಲ್ಲೇ ಅದನ್ನು ಒಪ್ಪಿಕೊಂಡಿದ್ದೇನೆ. ತಿದ್ದಿಕೊಂಡು ನಡೆಯುವುದು ಮುಖ್ಯ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು