ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ದುರ್ಬಲಗೊಳಿಸಲು ರಾಜಕಾರಣಿಗಳಿಂದ ಒಳಒಪ್ಪಂದ: ಸಂತೋಷ್‌ ಹೆಗ್ಡೆ

Last Updated 12 ಆಗಸ್ಟ್ 2022, 9:47 IST
ಅಕ್ಷರ ಗಾತ್ರ

ಬೆಂಗಳೂರು: ಎಸಿಬಿಯನ್ನು ರದ್ದುಪಡಿಸಿ, ಅದರ ಅಡಿಯಲ್ಲಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸರಿಗೆ ವರ್ಗಾಯಿಸುವ ರಾಜ್ಯ ಹೈಕೋರ್ಟ್‌ನ ಮಹತ್ವದ ತೀರ್ಪನ್ನು ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಸ್ವಾಗತಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಲೋಕಾಯುಕ್ತರ ಅಧಿಕಾರವನ್ನು ಮರುಸ್ಥಾಪಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

‘ಇದು ಅತ್ಯುತ್ತಮ ತೀರ್ಪು. ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಅದ್ಭುತ ಬದಲಾವಣೆ ತರಬಹುದು. ಯಾವುದೇ ಪ್ರಾಮಾಣಿಕ ಸರ್ಕಾರವು ತೀರ್ಪನ್ನು ಒಪ್ಪಿಕೊಳ್ಳಬೇಕು ಮತ್ತು ಅಗತ್ಯ ಮೂಲಸೌಕರ್ಯ ಮತ್ತು ಮಾನವಸಂಪನ್ಮೂಲವನ್ನು ಒದಗಿಸುವ ಮೂಲಕ ಲೋಕಾಯುಕ್ತವನ್ನು ಪರಿಣಾಮಕಾರಿಗೊಳಿಸಬೇಕು’ ಎಂದು ನ್ಯಾಯಮೂರ್ತಿ ಹೆಗ್ಡೆ ತಿಳಿಸಿದ್ದಾರೆ.

ಸರ್ಕಾರ ಶಿಫಾರಸು ಮಾಡುವ ಯಾವುದೇ ಅಧಿಕಾರಿಯ‌ ಸೇವೆಯನ್ನು ನಿರಾಕರಿಸುವ ಅಧಿಕಾರ ಸೇರಿದಂತೆ, ಅಧಿಕಾರಿಗಳ ನೇಮಕಾತಿಯಲ್ಲಿ ಲೋಕಾಯುಕ್ತಕ್ಕೆ ಸ್ವಾಯತ್ತತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಸೇವೆಯಲ್ಲಿರುವವರ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಲೋಕಾಯುಕ್ತ ಮುಂದಾಯಿತು. ಹೀಗಾಗಿ ಅದನ್ನು ದುರ್ಬಲಗೊಳಿಸಲು ರಾಜಕಾರಣಿಗಳು ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನ್ಯಾಯಮೂರ್ತಿ ಹೆಗ್ಡೆ ಗಂಭೀರ ಆರೋಪ ಮಾಡಿದ್ದಾರೆ.

‘ಎಸಿಬಿಯ ರಚನೆಯೇ ಒಂದು ನಾಟಕ. ಕಳೆದ ಆರು ವರ್ಷಗಳಲ್ಲಿ ಎಸಿಬಿಯು ಒಬ್ಬನೇ ಒಬ್ಬ ಸಚಿವ ಅಥವಾ ಐಎಎಸ್ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿಲ್ಲ. ಇದು ಅದರ ಕಾರ್ಯವೈಖರಿ’ ಎಂದು ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

‘ಇತ್ತೀಚೆಗಷ್ಟೇ ಎಸಿಬಿ ಶಾಸಕರೊಬ್ಬರ (ಜಮೀರ್‌ ಅಹ್ಮದ್ ಖಾನ್‌) ವಿಚಾರಣೆ ಆರಂಭಿಸಿದೆ. ಅದೂ ಕೂಡ ಜಾರಿ ನಿರ್ದೇಶನಾಲಯವು ವರದಿಯನ್ನು ಸಲ್ಲಿಸಿದ ನಂತರ. ಎಸಿಬಿಯು ತಹಶೀಲ್ದಾರ್ ಮತ್ತು ಇತರ ಕೆಳಹಂತದ ಅಧಿಕಾರಿಗಳನ್ನು ಮಾತ್ರವೇ ವಿಚಾರಣೆ ನಡೆಸುತ್ತಿದೆ. ಇದು ಏನನ್ನು ಸೂಚಿಸುತ್ತದೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಭರವಸೆಯಿಂದ ಹಿಂದೆ ಸರಿದ ಬಿಜೆಪಿ

ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಸಿಬಿ ರದ್ದುಪಡಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

ಲೋಕಾಯುಕ್ತರನ್ನು ನೇಮಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಕ್ರಿಯೆಯನ್ನು ಉಳಿಸಿಕೊಳ್ಳಲು ನ್ಯಾಯಮೂರ್ತಿ ಹೆಗ್ಡೆ ಒತ್ತಾಯಿಸಿದ್ದಾರೆ. ಜತೆಗೆ, ಸಾರ್ವಜನಿಕ ಕಚೇರಿಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಒಂಬುಡ್ಸ್‌ಮನ್‌ಗೆ ಪೊಲೀಸ್ ಅಧಿಕಾರವನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ, ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ವಿಧಾನಸಭೆಯ ಸ್ಪೀಕರ್, ವಿಧಾನ ಪರಿಷತ್ತಿನ ಅಧ್ಯಕ್ಷರು ಮತ್ತು ಉಭಯ ಸದನಗಳ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಕರ್ನಾಟಕ ಲೋಕಾಯುಕ್ತರನ್ನು ನೇಮಿಸುತ್ತದೆ.

2006 ರಿಂದ 2011 ರವರೆಗೆ ಕರ್ನಾಟಕ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಆಳ ಅಗಲ ಬಹಿರಂಗಪಡಿಸಿದ್ದರು. ರಾಜ್ಯದ ಪ್ರಮುಖ ರಾಜಕೀಯ ನಾಯಕರ ಅಕ್ರಮಗಳನ್ನು ಅವರು ಹೊರಗೆಳೆದಿದ್ದರು.

2016 ರಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಸ್ಥಾಪಿಸುವ ಮತ್ತು ಲೋಕಾಯುಕ್ತದ ಪೊಲೀಸ್ ಅಧಿಕಾರವನ್ನು ಮೊಟಕುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರದ ಕಟು ಟೀಕಾಕಾರರಾಗಿದ್ದವರಲ್ಲಿ ಸಂತೋಷ್‌ ಹೆಗ್ಡೆ ಅವರೂ ಒಬ್ಬರಾಗಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT