ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುದಾನಿತ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ: ಸಿ.ಎಂ ಜೊತೆ ಚರ್ಚೆ’

Last Updated 14 ಡಿಸೆಂಬರ್ 2020, 21:36 IST
ಅಕ್ಷರ ಗಾತ್ರ

ಬೆಂಗಳೂರು: 'ಅನುದಾನಿತ ಶಾಲೆಗಳ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಿಸುವ ಕುರಿತಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿ ಚರ್ಚಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ ಹಾಗೂ ಆಡಳಿತ ಮಂಡಳಿಗಳ ಹೋರಾಟ ಸಮನ್ವಯ ಸಮಿತಿ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಧಾರವಾಡದಲ್ಲಿ ಸತ್ಯಾಗ್ರಹ ನಡೆಯುತ್ತಿದೆ.

ಈ ಮಧ್ಯೆ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮತ್ತು ಸಂಘಟನೆಗಳ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ ಸಚಿವರು, ‘ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆಸರಿಯಬೇಕು’ ಎಂದು ಮನವಿ ಮಾಡಿದರು.

‘ಹಳೆ ಪಿಂಚಣಿ ವ್ಯವಸ್ಥೆ ಮುಂದುವರೆಸುವುದು ನೀತಿನಿರೂಪಣಾ ವಿಷಯವಾಗಿರುವುದರಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಇಲಾಖೆಗಳು ಸೇರಿ ನಿರ್ಧಾರಕ್ಕೆ ಬರಬೇಕಿದೆ. ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳಿಗೆ ಸಂಬಂಧಿದ ಡಾ. ವೈದ್ಯನಾಥನ್ ವರದಿಯ ಅನುಷ್ಠಾನಕ್ಕೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು. 2015ರ ನಂತರ ಅನುದಾನಿತ ಶಾಲಾ ಕಾಲೇಜುಗಳಲ್ಲಿ ತೆರವಾಗಿರುವ ಹುದ್ದೆಗಳ ಭರ್ತಿಗೆ, ಸದ್ಯ ಆರ್ಥಿಕ ಇಲಾಖೆಯ ನಿರ್ಬಂಧದ ತೆರವಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದೂ ಸಚಿವರು ಹೇಳಿದರು.

ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ 1:70ರಿಂದ 1:50ಕ್ಕೆ ಬದಲಾಯಿಸುವ ಕುರಿತು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದಲ್ಲಿ 100ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳ ನೋಂದಣಿ ರದ್ದುಪಡಿಸಲು ಹೊರಡಿಸಿರುವ ಆದೇಶ ಶಿಕ್ಷಣ ಕಾಯ್ದೆಯ ಆದೇಶಕ್ಕೆ ವಿರುದ್ಧವಾಗಿದ್ದು, ತಕ್ಷಣವೇ ಹಿಂಪಡೆಯಲು ನಿರ್ದೇಶನ ನೀಡುವಂತೆಯೂ ಅವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT