ಗುರುವಾರ , ಫೆಬ್ರವರಿ 25, 2021
28 °C
ಮೇ ತಿಂಗಳಲ್ಲಿ ಚುನಾವಣೆ ಸಾಧ್ಯತೆ lಆಕಾಂಕ್ಷಿಗಳಿಂದ ಪ್ರಚಾರ ಕಾರ್ಯ ಪ್ರಾರಂಭ

ಕಸಾಪ ಚುನಾವಣೆ: ಅಧ್ಯಕ್ಷ ಗಾದಿಗೆ ‘ಹೋರಾಟ’

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಗಾದಿಗೆ ಚುನಾವಣಾ ಕಣ ಸಜ್ಜಾಗುತ್ತಿದೆ. ಸ್ಪರ್ಧಿಸಲು ಕನ್ನಡ ಪರ ಹೋರಾಟಗಾರರಲ್ಲಿ ಹುರುಪು ಕಾಣಿಸುತ್ತಿದ್ದರೆ, ಸಾಹಿತಿಗಳು ಹಿಂದೇಟು ಹಾಕತೊಡಗಿದ್ದಾರೆ.

ಪರಿಷತ್ತಿನ ಹಾಲಿ ಅಧ್ಯಕ್ಷರು, ಜಿಲ್ಲಾ ಮತ್ತು ಗಡಿನಾಡ ಘಟಕಗಳ ಅಧ್ಯಕ್ಷರ ಅವಧಿ ಮಾರ್ಚ್‌ 2ಕ್ಕೆ ಅಂತ್ಯವಾಗಲಿದೆ. ಪರಿಷತ್ತಿನ ಚುನಾವಣೆ ಉಪನಿಬಂಧನೆ 39 ರ ಪ್ರಕಾರ ಚುನಾವಣೆಗೆ ಮೂರು ತಿಂಗಳ ಮೊದಲೇ ಸಹಾಯಕ ಕಮಿಷನರ್ ಹುದ್ದೆಗೆ ಕಡಿಮೆ ಇಲ್ಲದ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಬೇಕು. ಈ ಸಂಬಂಧ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಕಳೆದ ನವೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರಂತೆ ಸರ್ಕಾರವು ಜಿ.ಎಂ. ಗಂಗಾಧರಸ್ವಾಮಿ ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಿದ್ದು, ಮುಂಬರುವ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷರು, 30 ಜಿಲ್ಲಾಧ್ಯಕ್ಷರು, 4 ಗಡಿನಾಡ ಘಟಕಗಳ ಅಧ್ಯಕ್ಷರು ಸೇರಿದಂತೆ 35 ಸ್ಥಾನಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಇಚ್ಛಿಸಿರುವ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಈಗಾಗಲೇ ಭರದ ಪ್ರಚಾರ ನಡೆಸಲಾರಂಭಿಸಿದ್ದಾರೆ. ಕಳೆದ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ 13 ಮಂದಿ ಸ್ಪರ್ಧಿಸಿದ್ದರು.

ಪೈಪೋಟಿ: ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದು, ಈಗಾಗಲೇ ಕೆಲವರು ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಮೊದಲು ಉತ್ಸಾಹ ತೋರಿದ್ದ ಕೆಲ ಸಾಹಿತಿಗಳು ಚುನಾವಣಾ ವೆಚ್ಚ, ವಯೋಸಹಜ ಅನಾರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಹಿಂದೇಟು ಹಾಕಿದ್ದಾರೆ. ದೂರದರ್ಶನದ ನಿವೃತ್ತ ಮಹಾ ನಿರ್ದೇಶಕ ಮಹೇಶ್ ಜೋಶಿ, ಕನ್ನಡ ಪರ ಹೋರಾಟಗಾರರಾದ ವ.ಚ. ಚನ್ನೇಗೌಡ, ಸಿ.ಕೆ. ರಾಮೇಗೌಡ, ಕೊಪ್ಪಳದ ಶೇಖರ್‌ಗೌಡ ಮಾಲಿ ಪಾಟೀಲ್, ಸಂಗಮೇಶ ಬಾದವಾಡಗಿ, ಮಾಯಣ್ಣ ಅವರು ಸ್ಪರ್ಧೆಗೆ ಸಿದ್ಧತೆ ಪ್ರಾರಂಭಿಸಿದ್ದಾರೆ. ಮಹಿಳೆಯೊಬ್ಬರು ಅಧ್ಯಕ್ಷರಾಗಬೇಕೆಂಬ ಕೂಗು ಕೂಡ ಸಾಂಸ್ಕೃತಿಕ ವಲಯದಲ್ಲಿ ಕೇಳಿ ಬಂದಿದೆ.

‘ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಲ್ಲಿ ₹ 50 ಲಕ್ಷಕ್ಕೂ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದರಿಂದಾಗಿ ಸಾಮಾನ್ಯರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಾಹಿತಿಯೊಬ್ಬರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು