ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ

ಕುರುಬರಿಗೆ ಎಸ್‌ಟಿ ಮೀಸಲಾತಿಗೆ ಆಗ್ರಹ; ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವ
Last Updated 29 ನವೆಂಬರ್ 2020, 22:40 IST
ಅಕ್ಷರ ಗಾತ್ರ

ಬಾಗಲಕೋಟೆ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸಿ ಜನವರಿ 15ರಿಂದ ಫೆಬ್ರುವರಿ 7ರವರೆಗೆ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಬಾಗಲಕೋಟೆಯಲ್ಲಿ ಭಾನುವಾರ ಕುರುಬರ ಎಸ್ಟಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಫೆಬ್ರುವರಿ 7ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. 10 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ. ನಮ್ಮ ಹೋರಾಟ ಯಾವ ಸರ್ಕಾರದ ವಿರುದ್ಧವೂ ಅಲ್ಲ. ಎಸ್‌ಟಿ ಮೀಸಲಾತಿ ಪಡೆಯುವುದು ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ’ ಎಂದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ಮೈಯಲ್ಲಿ ಸಂಗೊಳ್ಳಿ ರಾಯಣ್ಣ, ಕನಕದಾಸರ ರಕ್ತ ಹರಿಯುತ್ತಿದೆ ಎಂದು ಬರೀ ಬಾಯಿ ಮಾತಲ್ಲಿ ಹೇಳಿಕೊಂಡರೆ ಸಾಲದು. ಹೋರಾಟದಲ್ಲಿ ಪಾಲ್ಗೊಂಡು ಬಡ ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಿದರೆ ಮಾತ್ರ ರಕ್ತಕ್ಕೆ ಬೆಲೆ ಬರುತ್ತದೆ’ ಎಂದು ಪರೋಕ್ಷವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕುಟುಕಿದರು.

ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್‌, ಎಂ.ಟಿ.ಬಿ.ನಾಗರಾಜ್‌, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆ.ಮುಕುಡಪ್ಪ ಪಾಲ್ಗೊಂಡಿದ್ದರು.

ಸರ್ಕಾರ ಒಂದು ಜಾತಿಗೆ ಸೀಮಿತ: ಸಿದ್ದರಾಮಪುರಿ ಶ್ರೀ

‘ಯಾರದ್ದೋ ತ್ಯಾಗದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಇಂದು ಒಂದು ಜಾತಿ, ವರ್ಗಕ್ಕೆ ಮೀಸಲಾದಸರ್ಕಾರವಾಗಿ ಮಾರ್ಪಟ್ಟಿದೆ. ಇದನ್ನು ಬಿಜೆಪಿಯವರು, ಆರ್‌ಎಸ್ಎಸ್‌ನವರು ಹಾಗೂ ರಾಜ್ಯದ ಜನರು ಗಮನಿಸಬೇಕು’ ಎಂದು ಕನಕ ಗುರುಪೀಠ ತಿಂಥಿಣಿ ಬ್ರಿಜ್ ಶಾಖೆಯ ಸಿದ್ದರಾಮಪುರಿ ಸ್ವಾಮೀಜಿ ಹೇಳಿದರು.

ಕುರುಬರನ್ನು ಎಸ್ಟಿಗೆ ಸೇರಿಸಬೇಕು ಎಂಬುದು ಮನವಿ ಅಲ್ಲ. ಅದು ಆಗ್ರಹ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕುರುಬರ ಋಣದಲ್ಲಿವೆ. ಅದನ್ನು ಮರೆಯಬಾರದು ಎಂದರು.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯವರು ಯಾಕೆ ಕುರುಬರಿಗೆ ಟಿಕೆಟ್ ಕೊಡಬಾರದು. ಬರೀ ಅದೇ ವರ್ಗಕ್ಕೆ ಕೊಡಬೇಕು ಎಂಬ ನಿಯಮವಿದೆಯೇ ಎಂದು ಪ್ರಶ್ನಿಸಿದರು.

ಈ ಸಮಾವೇಶ ಬಿಜೆಪಿಯ ಪರ ಅಲ್ಲ. ಸಮಾವೇಶಕ್ಕೆ ಬಾರದವರ ವಿರುದ್ಧವೂ ಅಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಗೈರು ಹಾಜರಿ ಪ್ರಸ್ತಾಪಿಸಿದರು.

ಈಶ್ವರಪ್ಪ ಅಸಮಾಧಾನ: ಸ್ವಾಮೀಜಿ ಭಾಷಣ ಮುಗಿಸಿ ತಮ್ಮ ಸ್ಥಾನಕ್ಕೆ ಮರಳುತ್ತಿದ್ದಂತೆಯೇ ಹತ್ತಿರ ಬಂದು ಕುಳಿತ ಸಚಿವ ಕೆ.ಎಸ್.ಈಶ್ವರಪ್ಪ, ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ರಕ್ತ ಸುರಿಸಲಿದ್ದೇವೆ: ಸಚಿವ ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ ಮಾತನಾಡಿ, ಇಲ್ಲಿಯವರೆಗಿನ ಹೋರಾಟ ಬರೀ ಸ್ಯಾಂಪಲ್ ಮಾತ್ರ. ಅಗತ್ಯ ಬಿದ್ದರೆ ರಕ್ತ ಸುರಿಸಿಯಾದರೂ ಮೀಸಲಾತಿ ಕೊಡಿಸಲು ಬದ್ಧ ಎಂದರು.

ಚರ್ಚೆಗೆ ಗ್ರಾಸವಾದ ಸಿದ್ದರಾಮಯ್ಯ ಗೈರು...

ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಳ್ಳದಿರುವುದು ಚರ್ಚೆಗೆ ಗ್ರಾಸವಾಯಿತು.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಹೋರಾಟಕ್ಕೆ ಬನ್ನಿ ಎಂದು ಸಿದ್ದರಾಮಯ್ಯ ಅವರನ್ನು ನಾನು ನೂರು ಸಾರಿ ಕರೆದಿದ್ದೇನೆ. ಬರ್ತೀನಿ ಅಂತಾರೆ ಬರೋಲ್ಲ. ಬಲವಂತವಾಗಿ ಎಳೆದುಕೊಂಡು ಬರೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

‘ಪರಿಶಿಷ್ಟ ಪಂಗಡದ ಪ್ರಮಾಣಪತ್ರವನ್ನು ಮನೆಗೆ ತಂದುಕೊಡುವ ವಾತಾವರಣ ನಮಗೆ ಒದಗಿಬಂದಿತ್ತು. ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗಲಿಲ್ಲ. ಅದಕ್ಕೆ ರಾಜಕೀಯ ಬದ್ಧತೆ ಬೇಕಾಗುತ್ತದೆ. ದೇವರಾಜ ಅರಸು ಹಾಗೂ ವಿ.ಪಿ.ಸಿಂಗ್‌ಗೆ ಆ ಬದ್ಧತೆ ಇತ್ತು. ನಾವೇ ಅಧಿಕಾರ ಕೊಟ್ಟವರಿಗೆ ಆ ಬದ್ಧತೆ ಇರಲಿಲ್ಲ‘ ಎಂದು ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೆಸರು ಹೇಳದೇಪರೋಕ್ಷವಾಗಿ ಭಾಷಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಹೋರಾಟಕ್ಕೆ ಮೊದಲು ಒಪ್ಪಿಗೆ ಕೊಟ್ಟು, ಬೆಂಬಲಿಸಿದವರೇ ಸಿದ್ದರಾಮಯ್ಯ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ತಮ್ಮ ಭಾಷಣದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT