ಮಂಗಳವಾರ, ಜನವರಿ 31, 2023
27 °C
ಕನಕಪುರ ತಾಲ್ಲೂಕಿನ 36 ಹಳ್ಳಿಗಳ ಮಹಿಳೆಯರಿಗೆ 8 ಸಾವಿರ ಮುಟ್ಟಿನ ಕಪ್ ವಿತರಣೆ

ರಾಮನಗರ: ಮುಟ್ಟಿನ ಸಮಸ್ಯೆ ಈಗ ‘ಆಸಾನ್‌’

ಆರ್‌. ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ಕನಕಪುರ ತಾಲ್ಲೂಕಿನ 36 ಹಳ್ಳಿಗಳಲ್ಲಿನ ಸಾವಿರಾರು ಮಹಿಳೆಯರ ಮುಟ್ಟಿನ ಬಾಧೆ ಈಗ ‘ಆಸಾನ್‌’ (ಸರಳ) ಆಗಿದೆ. ಋತುಚಕ್ರದ ಅವಧಿಯಲ್ಲೂ ಅವರು ಯಾವುದೇ ಅಳುಕಿಲ್ಲದೆ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಈ ಮಹಿಳೆಯರಿಗೆ ವಿತರಿಸಲಾದ ‘ಆಸಾನ್‌’ ಹೆಸರಿನ ಮುಟ್ಟಿನ ಕಪ್‌, ಇವರಲ್ಲಿ ಇದರ ಬಗ್ಗೆ ಇದ್ದ ತಿಳಿವಳಿಕೆ ಬದಲಿಸಿದೆ ಮತ್ತು ಅವರ ಆತ್ಮವಿಶ್ವಾಸ ಹೆಚ್ಚಿಸಿದೆ. ಕನಕಪುರ ತಾಲ್ಲೂಕಿನ 8 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಈಗಾಗಲೇ ಈ ಕಪ್‌ ತಲುಪಿವೆ. 29 ವರ್ಷ ವಯಸ್ಸಿನ ಇರಾ ಗುಹಾ ಅವರ ಸಾಮಾಜಿಕ ಕಾಳಜಿಯಿಂದ ಇದು ಸಾಧ್ಯವಾಗಿದೆ.

‘ಆಸಾನ್‌’ ಹೆಸರಿನ ಕಂಪನಿ ಸ್ಥಾಪಿಸಿರುವ ಇರಾ, ಅದೇ ಹೆಸರಿನ ಬ್ರ್ಯಾಂಡ್‌ನಲ್ಲಿ ಮುಟ್ಟಿನ ಕಪ್‌ಗಳನ್ನು ಮಾರುತ್ತಿದ್ದಾರೆ. ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನದ ವೇಳೆ ಹಾರ್ವರ್ಡ್‌ ಇನೋವೇಶನ್‌ ಲ್ಯಾಬ್‌ನಲ್ಲಿ ಸತತ ಎರಡು ವರ್ಷದ ಪ್ರಯೋಗಗಳ ಮೂಲಕ ತಾವೇ ಈ ಮುಟ್ಟಿನ ಕಪ್‌ ಅನ್ನು ವಿನ್ಯಾಸ ಮಾಡಿದ್ದಾರೆ. ಈಗಾಗಲೇ ಇಂಗ್ಲೆಂಡ್, ಯುರೋಪ್‌, ಅಮೆರಿಕ ಹಾಗೂ ಭಾರತದಲ್ಲಿ ಇವು ಮಾರಾಟ ಆಗುತ್ತಿವೆ.

ಹೀಗೆ ಮಾರಾಟ ಆಗುವ ಪ್ರತಿ ಕಪ್‌ಗೆ ‍ಪ್ರತಿಯಾಗಿ ಇನ್ನೊಂದು ಕಪ್‌ ಅನ್ನು ಭಾರತದಲ್ಲಿನ ಗ್ರಾಮೀಣ ಮಹಿಳೆಯರಿಗೆ ವಿತರಿಸಲಾಗುತ್ತಿದೆ. ದೇಶದಲ್ಲಿನ ವಿವಿಧ ರಾಜ್ಯಗಳ 20 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಇದು ಉಚಿತವಾಗಿ ತಲುಪಿದೆ. ಕನಕಪುರದಲ್ಲಿ ಮೂರು ವರ್ಷದ ಹಿಂದೆ ಬೆಳಕು ಸಂಸ್ಥೆಯ ಸರಸ್ವತಿ ಗಣಪತಿ ಜೊತೆಗೂಡಿ ವಿತರಣೆ ಆರಂಭಗೊಂಡಿದ್ದು, ಇಂದಿಗೂ ಶೇ 90ರಷ್ಟು ಮಹಿಳೆಯರು ಇದನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ ಎನ್ನುತ್ತಾರೆ ಇರಾ. ಮುಂದಿನ ಹತ್ತು ವರ್ಷದಲ್ಲಿ ಭಾರತದ 50 ಲಕ್ಷ ಮಹಿಳೆಯರಿಗೆ ಈ ಕಪ್‌ ತಲುಪಿಸುವ ಗುರಿಯನ್ನು ಆಸಾನ್ ಸಂಸ್ಥೆ ಹೊಂದಿದೆ.

ಗ್ರಾಮೀಣ ಮಹಿಳೆಯರಿಗೆ ಕಪ್‌ ವಿತರಿಸುವ ಜೊತೆಗೆ ಪ್ರತಿ ಗ್ರಾಮದಲ್ಲೂ ‘ಆಸಾನ್‌ ’ ಪ್ರತಿನಿಧಿಗಳ ಮೂಲಕ ಸ್ತ್ರೀಯರಿಗೆ ಇದರ ಬಳಕೆ ಕುರಿತು ಜಾಗೃತಿ– ತರಬೇತಿಯನ್ನೂ ನೀಡಲಾಗಿದೆ. ಅಂಗನವಾಡಿ–ಆಶಾ ಕಾರ್ಯಕರ್ತೆಯರು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

ಅನುಕೂಲಗಳೇನು?

ವೈದ್ಯಕೀಯ ಸಾಮಗ್ರಿಗಳಿಗೆ ಬಳಸುವ ಸಿಲಿಕಾನ್‌ನಿಂದ ತಯಾರಿಸಲಾದ ಈ ಕಪ್‌ ಅನ್ನು ಹತ್ತು ವರ್ಷ ತನಕ ಬಳಸಲು ಸಾಧ್ಯವಿದೆ. ಇದನ್ನು ಧರಿಸುವುದರಿಂದ ಮಹಿಳೆಯರು ಮುಟ್ಟಿನ ಅವಧಿಯಲ್ಲೂ ಎಂದಿನಂತೆ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗಲಿದೆ. ಜೊತೆಗೆ ಅವರಲ್ಲಿನ ಒತ್ತಡ, ಉದ್ವೇಗ ಕಡಿಮೆ ಆಗಿ ಆರೋಗ್ಯವೂ ಸುಧಾರಣೆ ಆಗುತ್ತಿದೆ ಎನ್ನುತ್ತಾರೆ ಇರಾ.

ಪ್ರತಿ ಮಹಿಳೆಯು ಹತ್ತು ವರ್ಷ ಇದನ್ನು ಬಳಸುವುದರಿಂದ ಸ್ಯಾನಿಟರಿ ಪ್ಯಾಡ್‌ಗಳಿಗೆ ಖರ್ಚು ಮಾಡುತ್ತಿದ್ದ ₹50 ಸಾವಿರದಷ್ಟು ಹಣ ಉಳಿಯಲಿದೆ. ಸ್ಯಾನಿಟರಿ ‍ಪ್ಯಾಡ್‌ಗಳ ಬಳಕೆ ತಪ್ಪಿದ ಪರಿಣಾಮ ಒಟ್ಟಾರೆ 112 ಟನ್‌ನಷ್ಟು ತ್ಯಾಜ್ಯ ನೆಲ ಸೇರಿ ಮಾಲಿನ್ಯವಾಗುವುದೂ ತಪ್ಪಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು