ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ 'ಕಣ್ಮಣಿ': ಎಚ್.ಡಿ. ಕುಮಾರಸ್ವಾಮಿ

Last Updated 29 ಅಕ್ಟೋಬರ್ 2021, 10:55 IST
ಅಕ್ಷರ ಗಾತ್ರ

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅಗಲಿಕೆ ಕನ್ನಡ ಚಿತ್ರರಂಗಕ್ಕೆ, ಕನ್ನಡಕ್ಕೆ, ನಾಡು ನುಡಿಗೆ ಭರಿಸಲಾಗದ ನಷ್ಟ. ಅವರು 'ಕನ್ನಡ ಚಿತ್ರರಂಗದ ಕಣ್ಮಣಿ' ಎಂದು ಮಾಜಿ ಮುಖ್ಯಮುಂತ್ರಿ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

'ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ವೈಯಕ್ತಿಕವಾಗಿ ನನಗೆ ಆಗಿರುವ ಆಘಾತ ಅಷ್ಟಿಷ್ಟಲ್ಲ. ಇಂತಹ ಸುದ್ದಿ ಕೇಳಬೇಕಾಗುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ' ಎಂದು ಹೇಳಿದ್ದಾರೆ.

'ವ್ಯಕ್ತಿಗತವಾಗಿ ನನಗೆ ಬಹಳ ಇಷ್ಟದ ವ್ಯಕ್ತಿ, ನಟ ಆಗಿದ್ದರು ಪುನೀತ್. ಅವರ ಜತೆ ಸಾಕಷ್ಟು ಸಮಯ ಕಳೆದಿದ್ದೇನೆ. ಜತೆಯಲ್ಲಿ ಹಲವು ಬಾರಿ ಊಟವನ್ನು ಮಾಡಿ ಚಿತ್ರರಂಗದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಅಲ್ಲದೆ, ಡಾ.ರಾಜ್‌ಕುಮಾರ್ ಅವರ ಕುಟುಂಬದ ಜತೆ ನನ್ನ ಬಾಂಧವ್ಯ ಇಂದು ನಿನ್ನೆಯದಲ್ಲ' ಎಂದು ಹೇಳಿದ್ದಾರೆ.

'ಅಣ್ಣಾವ್ರ ಪುತ್ರರಾದರೂ ತಮ್ಮದೇ ವಿಭಿನ್ನ ನಟನಾ ಪ್ರತಿಭೆ ಹೊಂದಿದ್ದ ಪುನೀತ್ ಅವರು; ಬಾಲ ನಟರಾಗಿಯೇ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟವರು. ಆಮೇಲೆ ಹೀರೋ ಆಗಿ ಪ್ರತೀ ಕನ್ನಡಿಗನ ಮನೆಮನ ರಂಜಿಸಿದ್ದರು. ಗಾಯಕರಾಗಿ, ನಿರ್ಮಾಪಕರಾಗಿ ಚಿತ್ರರಂಗದ ಕಣ್ಮಣಿ ಆಗಿದ್ದವರು' ಎಂದು ಹೇಳಿದ್ದಾರೆ.

'ಪುನೀತ್ ಅಗಲಿಕೆ ಕನ್ನಡ ಚಿತ್ರರಂಗಕ್ಕೆ, ಕನ್ನಡಕ್ಕೆ, ನಾಡು ನುಡಿಗೆ ಭರಿಸಲಾಗದ ನಷ್ಟ. ಅವರ ನಿಧನ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ನಮೆಲ್ಲರ ಅಪ್ಪು ಇನ್ನಿಲ್ಲ ಎನ್ನುವ ಸ್ಥಿತಿಯನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ' ಎಂದು ಹೇಳಿದ್ದಾರೆ.

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT