ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷಾ ಮಸೂದೆ ಕರಡು ಅಧಿವೇಶನದಲ್ಲಿ ಮಂಡನೆ’

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ *ಕರ್ನಾಟಕ ಕಾನೂನು ಆಯೋಗ ರಚಿಸಿರುವ ಮಸೂದೆ
Last Updated 14 ಜುಲೈ 2022, 16:24 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಹಿತದೃಷ್ಟಿಯಿಂದ ತಯಾರಿಸಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ’ಯ ಕರಡನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಕಾನೂನು ಸಚಿವಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಕರ್ನಾಟಕ ಕಾನೂನು ಆಯೋಗ ರಚಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹಾಗೂ ಆಯೋಗದನ್ಯಾ.ಎಸ್.ಆರ್. ಬನ್ನೂರಮಠ ಅವರಿಂದ ಗುರುವಾರ ಸ್ವೀಕರಿಸಿದರು. ‘ನಮ್ಮ ಸರ್ಕಾರ ಸದಾ ನಾಡು-ನುಡಿಯ ಪರವಾಗಿರುತ್ತದೆ. ಕನ್ನಡಿಗರ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಮಸೂದೆಯುಆಡಳಿತ ಭಾಷೆಯ ಅನುಷ್ಠಾನಕ್ಕೆ ನೆರವಾಗುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದು, ಕ್ಯಾಬಿನೆಟ್‌ನಲ್ಲಿ ಅನುಮೋದನೆ ಪಡೆದು, ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಭರವಸೆ ನೀಡಿದರು.

ಟಿ.ಎಸ್.ನಾಗಾಭರಣ, ‘ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ತ್ರಿವಳಿ ಮಂತ್ರದಡಿ ಕಾರ್ಯನಿರ್ವಹಿಸುತ್ತಿರುವ ಪ್ರಾಧಿಕಾರ, ಕನ್ನಡಿಗರ ಅಭ್ಯುದಯಕ್ಕಾಗಿ ಈ ಮಸೂದೆಯನ್ನು ತಯಾರಿಸಿದೆ. ರಾಜ್ಯದ ಎಲ್ಲೆಡೆ ಕನ್ನಡ ರಾರಾಜಿಸಬೇಕು. ಎಲ್ಲ ವಲಯಗಳಲ್ಲೂ ಕನ್ನಡಿಗರಿಗೆ ಪ್ರಥಮ ಆದ್ಯತೆ ದೊರೆಯಬೇಕು. ಈ ಆಶಯಗಳನ್ನು ಮಸೂದೆ ಸಾಕಾರಗೊಳಿಸಲಿದೆ’ ಎಂದು ಹೇಳಿದರು.

ನ್ಯಾ.ಎಸ್.ಆರ್.ಬನ್ನೂರಮಠ , ‘ಕರ್ನಾಟಕ ರಾಜಭಾಷೆ ಕಾಯ್ದೆ 1963, ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಅಧಿಕೃತ ಭಾಷಾ) ಕಾಯ್ದೆ 1981, ಕನ್ನಡ ಭಾಷಾ ಕಲಿಕೆ ಕಾಯ್ದೆ 2015 ಹಾಗೂ ಕನ್ನಡ ಅನುಷ್ಠಾನಕ್ಕಾಗಿ ಶಾಸನಬದ್ಧ ನಿಕಾಯವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದ್ದಾಗಿಯೂ ಉದ್ದೇಶಿತ ಆಶಯದನ್ವಯಕನ್ನಡ ಅನುಷ್ಠಾನಗೊಂಡಿಲ್ಲ‌. ಆದ್ದರಿಂದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಯನ್ನು ತಯಾರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT