ಮಂಗಳವಾರ, ಜುಲೈ 27, 2021
21 °C

ಕನ್ನಡ ಕಡೆಗಣನೆ: ಅಪಚಾರ ಸರಿಪಡಿಸಲು ಕಸಾ‍ಪ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲೋಕಸಭಾ ಸಚಿವಾಲಯವು ಭಾಷಾ ಕಲಿಕೆ ಶಿಬಿರದಲ್ಲಿ ಕನ್ನಡ ಕಡೆಗಣಿಸಿರುವುದನ್ನು ಖಂಡಿಸಿರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ), ಈ ಅಪಚಾರವನ್ನು ಸರಿಪಡಿಸುವಂತೆ ಒತ್ತಾಯಿಸಿದೆ.

ಈ ಬಗ್ಗೆ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಪತ್ರ ಬರೆದಿದ್ದಾರೆ.

‘ಲೋಕಸಭಾ ಸಚಿವಾಲಯದ ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ (ಪ್ರೈಡ್) ಸಂಸ್ಥೆಯು ಸಂಸದರು, ಶಾಸಕರು ಮತ್ತು ಅಧಿಕಾರಿಗಳಿಗೆ ಇದೇ ತಿಂಗಳು 22 ರಂದು ಹಮ್ಮಿಕೊಂಡಿರುವ ದೇಶೀಯ ಹಾಗೂ ವಿದೇಶಿ ಭಾಷಾ ಕಲಿಕೆ ಶಿಬಿರದಲ್ಲಿ ಕನ್ನಡವನ್ನು ಕಡೆಗಣಿಸಿದೆ. ದಕ್ಷಿಣದ ಭಾಷೆ ಎಂದರೆ ಕೇವಲ ತಮಿಳು ಅಥವಾ ತೆಲುಗು ಎನ್ನುವಂತೆ ಬಿಂಬಿತವಾಗಿರುವುದು ದುರದೃಷ್ಟಕರ. ಇದು ಕನ್ನಡ ಭಾಷೆಗೆ, ಪರಂಪರೆಗೆ ಹಾಗೂ ಕನ್ನಡಿಗರಿಗೆ ಮಾಡಿರುವ ಅಪಮಾನ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕನ್ನಡವು ಎರಡೂವರೆ ಸಾವಿರ ವರ್ಷ ಇತಿಹಾಸಗಳ ಭವ್ಯ ಪರಂಪರೆಯನ್ನು ಹೊಂದಿದೆ. ಈ ಭಾಷೆಯ ಎಂಟು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಇದು ಹಿಂದಿ ಭಾಷೆಗೆ ಸಮಾನ ಎನ್ನುವಂತೆ ಇದೆ. ಆದರೂ ಕನ್ನಡವನ್ನು ಹೀಗೆ ಕಡೆಗಣನೆ ಮಾಡುವುದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಪ್ರೈಡ್ ಸಂಸ್ಥೆ ಮಾಡಿರುವ ಈ ಅಪಚಾರ ಸರಿಪಡಿಸುವಂತೆ ರಾಜ್ಯ ಸರ್ಕಾರವು ಸಂಬಂಧಪಟ್ಟವರಿಗೆ ಆಗ್ರಹಿಸಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು