ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪದ ನಿರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು

ತಂತ್ರಜ್ಞಾನ ಅಳವಡಿಕೆಯಲ್ಲಿ ಹಿಂದೆ ಬಿದ್ದ ಪರಿಷತ್ತು *ಸಂಪನ್ಮೂಲಕ್ಕೆ ಸರ್ಕಾರದ ಕಡೆಗೆ ಆಸೆಗಣ್ಣು
Last Updated 20 ನವೆಂಬರ್ 2021, 21:40 IST
ಅಕ್ಷರ ಗಾತ್ರ

ಬೆಂಗಳೂರು: ವರ್ಷಕ್ಕೊಮ್ಮೆ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನ. ಒಂದಿಷ್ಟು ಪುಸ್ತಕಗಳ ಪ್ರಕಟಣೆ, ದತ್ತಿ ಪ್ರಶಸ್ತಿಗಳ ವಿತರಣೆ...

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಪ್ರಮುಖ ಕಾರ್ಯಚಟುವಟಿಕೆಗಳು ಇವಾಗಿವೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಯ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ಕಸಾಪ ಸ್ಥಾಪನೆಯಾಯಿತು. ಆದರೆ, ಕೆಲ ವರ್ಷಗಳಿಂದ ‍ಪರಿಷತ್ತಿನ ಮೂಲ ಆಶಯಗಳು ಮರೆಯಾಗುತ್ತಿವೆಯೇ ಎಂಬ ಚರ್ಚೆಯೂ ಇದೆ. ಇನ್ನೊಂದೆಡೆ ಪುಸ್ತಕಗಳ ಮುದ್ರಣ, ಪುಸ್ತಕದ ಡಿಜಿಟಲೀಕರಣ ಸೇರಿದಂತೆ ವಿವಿಧೆಡೆ ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಂಡಿಲ್ಲ. ಪ್ರಕಟಿತ ಪುಸ್ತಕಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ರೂಪಿಸದಿರುವುದರಿಂದ ಉಗ್ರಾಣದಲ್ಲಿಯೇ ಪುಸ್ತಕಗಳು ದೂಳು ತಿನ್ನುತ್ತಿವೆ.

ಪರಿಷತ್ತು ಸ್ವಾಯತ್ತ ಸಂಸ್ಥೆಯಾಗಿದ್ದರೂ ನಿಶ್ಚಿತ ಆದಾಯದ ಮೂಲವಿಲ್ಲ. ಹೀಗಾಗಿ, ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ನೀಡುವ ಅನುದಾನವನ್ನೇ ಅವಲಂಬಿಸಬೇಕಿದೆ. ಅದೇ ರೀತಿ, ಕಟ್ಟಡಗಳ ನವೀಕರಣ, ಭವನ ಮತ್ತು ಸಭಾಂಗಣಗಳ ನಿರ್ಮಾಣದಂತಹ ಯೋಜನೆಗಳಿಗೆ ಅನ್ಯ ಮೂಲಗಳಿಂದಲೇ ಹಣ ಹೊಂದಿಸಬೇಕಾದ ಪರಿಸ್ಥಿತಿಯಿದೆ. ಹೀಗಾಗಿ, ಪರಿಷತ್ತಿಗೆ ಕಾಯಕಲ್ಪ ನೀಡುವ ಕೆಲಸವಾಗಬೇಕೆಂಬ ಕೂಗು ಸಾಂಸ್ಕೃತಿಕ ವಲಯದಲ್ಲಿದೆ.

ತಂತ್ರಜ್ಞಾನದ ಅಳವಡಿಕೆ ಅಗತ್ಯ: ‘ಕೇವಲ ಸದಸ್ಯರ ಸಂಖ್ಯೆ ಹೆಚ್ಚಳ ಮಾಡುವುದರಿಂದ ಪರಿಷತ್ತಿನ ಮೂಲ ಆಶಯ ಸಾಕಾರವಾಗದು. ಅದು ನಿರಂತರವಾಗಿ ಒಂದು ಕಡೆಯಿಂದ ನಡೆಯುತ್ತಿರುತ್ತದೆ. ಅನುದಾನಕ್ಕೆ ಸರ್ಕಾರವನ್ನು ಅವಲಂಬಿಸಬಾರದು ಎಂಬ ಭಾವನೆ ತಪ್ಪು. ಕನ್ನಡಿಗರ ಸರ್ಕಾರವು ಕನ್ನಡದ ಕಾರ್ಯಗಳಿಗೆ ಅನುದಾನ ಒದಗಿಸಬೇಕಾಗುತ್ತದೆ. ಪರಿಷತ್ತಿಗೆ ಹಣಕಾಸಿನ ಕೊರತೆಯಿಲ್ಲ. ಆಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸಿಕೊಳ್ಳಬೇಕು’ ಎಂದು ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದರು. ‌

ಗ್ರಾಮೀಣ ಪ್ರದೇಶ ತಲು‍ಪಲಿ: ‘ಪರಿಷತ್ತು ಕೇವಲ ಬೆಂಗಳೂರಿಗೆ ಸೀಮಿತವಾಗದೆಯೇ ಗ್ರಾಮೀಣ ಪ್ರದೇಶಗಳನ್ನೂ ತಲುಪಬೇಕು. ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಪರಿಷತ್ತು ಕ್ರಿಯಾಶೀಲವಾಗಿ ಕೆಲಸ ಮಾಡಲು ಗ್ರಾಮೀಣ ಜನರನ್ನು ತನ್ನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರದ ಅನುದಾನ ಪಡೆದು ಕಾರ್ಯನಿರ್ವಹಿಸುವುದರಲ್ಲಿ ತಪ್ಪಿಲ್ಲ. ಅಧ್ಯಕ್ಷರಾದವರು ಈ ವ್ಯವಸ್ಥೆಯಲ್ಲಿ ನುಗ್ಗಿ, ನಾಡು–ನುಡಿಯ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಸದಾ ಕನ್ನಡಿಗರ ದೊಡ್ಡ ಧ್ವನಿಯಾಗಿ ಸಾಗಬೇಕು’ ಎಂದು ಮಾಜಿ ಅಧ್ಯಕ್ಷ ಆರ್‌.ಕೆ. ನಲ್ಲೂರು ಪ್ರಸಾದ್ ಅಭಿಮತ ವ್ಯಕ್ತಪಡಿಸಿದರು.

ಕನ್ನಡದ ಕೆಲಸವಾಗಬೇಕು: ‘ಕೇವಲ ಕಟ್ಟಡಗಳ ನಿರ್ಮಾಣ ಪರಿಷತ್ತಿನ ಆದ್ಯತೆ ಆಗಬಾರದು. ಸಾಹಿತ್ಯದ ಕಡೆಗೆ ಜನರನ್ನು ಸೆಳೆಯುವ ಕೆಲಸವಾಗಬೇಕು. ಎಲ್ಲ ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಅಭ್ಯಸಿಸುವಂತೆ ನೋಡಿಕೊಳ್ಳಬೇಕು. ಕನ್ನಡದ ಫಲಕಗಳು ಎಲ್ಲೆಡೆ ಅಳವಡಿಕೆಯಾಗುವಂತೆ ನೋಡಿಕೊಳ್ಳಬೇಕು. ಯುವಜನರನ್ನು ಸೆಳೆಯಲು ಯೋಜನೆಗಳನ್ನು ರೂಪಿಸಬೇಕು. ಸದಸ್ಯತ್ವ ಹೆಚ್ಚಿದಲ್ಲಿ ಕನ್ನಡ ಕಾರ್ಯಗಳಿಗೂ ಬಲ ಬರಲಿದೆ’ ಎಂದುಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದರು.

‘ಕನ್ನಡ ಜಾಗತಿಕ ವೇದಿಕೆ ಏರಬೇಕು’

ಕನ್ನಡಿಗರ ಸಾಮೂಹಿಕ ಪ್ರಯತ್ನದಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಾಯಕಲ್ಪ ನೀಡಲು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಯಾವೆಲ್ಲ ಕಾರ್ಯಗಳನ್ನು ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚಿಸಿ, ಆದ್ಯತೆಯ ಮೇರೆಗೆ ಯೋಜನೆಗಳನ್ನು ಹಮ್ಮಿಕೊಳ್ಳಬೇಕು.ಜಗತ್ತು ಬದಲಾವಣೆಯಾಗಿದ್ದು, ತಂತ್ರಜ್ಞಾನ ಕ್ಷೇತ್ರವು ಸಾಕಷ್ಟು ಪ್ರಗತಿ ಹೊಂದಿದೆ. ಹೀಗಾಗಿ, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಹಂ.ಪ. ನಾಗರಾಜಯ್ಯ ತಿಳಿಸಿದರು.

‘ಹಿಂದೆ ಸಾವಿರಗಳಲ್ಲಿದ್ದ ಸದಸ್ಯರ ಸಂಖ್ಯೆ ಈಗ ಬಲೂನಿನ ತರ ಉಬ್ಬಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬೇಕಿದೆ. ಜಾಗತಿಕ ವೇದಿಕೆಗಳಿಗೆ ಕನ್ನಡ ಭಾಷೆಯನ್ನು ಹತ್ತಿಸುವ ಕೆಲಸವಾಗಬೇಕು. ಸರ್ಕಾರವು ಅನುದಾನ ನೀಡಿದರೂ ನಾಡು–ನುಡಿಗೆ ಕಂಟಕವಾಗುವ ನಿರ್ಣಯಗಳನ್ನು ಕೈಗೊಂಡರೆ ಪ್ರತಿಭಟಿಸಬೇಕಾಗುತ್ತದೆ. ಅನುದಾನದ ದಾಸ್ಯಕ್ಕೆ ಬೀಳಬಾರದು. ಪರಿಷತ್ತು ಮೂಲ ಆಶಯಕ್ಕೆ ಅನುಗುಣವಾಗಿ ಸಾಗುತ್ತಿಲ್ಲ ಎಂದು ಅನಿಸಿದಾಗ ಕಾರ್ಯಕಾರಿ ಸಮಿತಿ ಸದಸ್ಯರು ಎಚ್ಚರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT