ಭಾನುವಾರ, ಸೆಪ್ಟೆಂಬರ್ 25, 2022
20 °C
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಭರವಸೆ

‘ಬಾಕಿ ವೇತನ ಬಿಡುಗಡೆಗೆ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಾಲೇಜು ಪ್ರಾಧ್ಯಾಪಕರ 7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಏಳು ತಿಂಗಳ ವೇತನವನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಭರವಸೆ ನೀಡಿದರು.

ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘವು ವಿವಿಧ ಐದು ಅಧ್ಯಾಪಕರ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಶೈಕ್ಷಣಿಕ ಸಮಾವೇಶ, ಅಭಿನಂದನಾ ಸಮಾರಂಭ ಮತ್ತು ಗ್ರಂಥ ಲೋಕಾರ್ಪಣೆ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲಾ ಅಧ್ಯಾಪಕರು, ಸಿಬ್ಬಂದಿಗಳ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದರು.

‘ಅಧಿಕಾರಿಗಳು, ಅಧ್ಯಾಪಕರ ಸಹಕಾರದಿಂದ ದೇಶದಲ್ಲೇ ಕರ್ನಾಟಕದಲ್ಲಿ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲೂ ಇದರ ಸಂಪೂರ್ಣ ಅನುಷ್ಠಾನಕ್ಕೆ ಎಲ್ಲರೂ ಶ್ರಮಿಸಬೇಕು’ ಎಂದು
ಸೂಚಿಸಿದರು.

ಕಾಲೇಜು ಶಿಕ್ಷಣ ಇಲಾಖೆಯ ಕೆ. ಕಿಶೋರ್‌ಕುಮಾರ್ ಅವರು ರಚಿಸಿರುವ ‘ನಸಾಬ್’ ಪುಸ್ತಕವನ್ನು ಸಚಿವರು ಬಿಡುಗಡೆ ಮಾಡಿದರು. ಇಲಾಖೆ ಆಯುಕ್ತ ಪಿ.ಪ್ರದೀಪ್, ಸಾಹಿತಿ ಡಾ.ರಾಜಶೇಖರ ಮಠಪತಿ, ಕರ್ನಾಟಕ ಸರ್ಕಾರಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ್, ಜಂಟಿ ಕಾರ್ಯದರ್ಶಿ ಡಾ.ಶೋಭಾ
ಇದ್ದರು.

ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ವತಿಯಿಂದ ಬೇಡಿಕೆಗಳ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು.

ಅಧ್ಯಾಪಕರ ಸಂಘದ ಬೇಡಿಕೆಗಳು

* ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿರುವ ಪ್ರಾಧ್ಯಾಪಕರ ಅಂತಿಮ ಪಟ್ಟಿಯನ್ನು ಕೂಡಲೇ ಪ್ರಕಟಿಸಬೇಕು.

* ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಬೇಕು.

* ಬಾಕಿ ಇರುವ ಏಳು ತಿಂಗಳ ಯುಜಿಸಿ ವೇತನ ಬಾಕಿಯನ್ನು ಕೂಡಲೇ ಪಾವತಿಸಬೇಕು.

* ಸಂದರ್ಶನ ಪೂರೈಸಿರುವ ಸಹ ಪ್ರಾಧ್ಯಾಪಕರ ಪಟ್ಟಿ ಪ್ರಕಟಿಸಬೇಕು

* ಸಹ ಪ್ರಾಧ್ಯಾಪಕರ ಪದೋನ್ನತಿಗೆ ಪಿಎಚ್‌ಡಿ ಕಡ್ಡಾಯಗೊಳಿಸಿರುವುದರಿಂದ ಕಾಲಮಿತಿ ವಿನಾಯಿತಿ ನೀಡಬೇಕು.

* ದೈಹಿಕ ಶಿಕ್ಷಣ ಬೋಧಕರು ಮತ್ತು ಗ್ರಂಥಪಾಲಕರ ಪದನಾಮ ಬದಲಾವಣೆಗೆ ಕ್ರಮಕೈಗೊಳ್ಳಬೇಕು.

* 2016ರ ನಂತರ ಪಿ.ಎಚ್‌ಡಿ ಪಡೆದ ಅಧ್ಯಾಪಕರಿಗೆ ವೇತನ ಬಡ್ತಿ ನೀಡಬೇಕು

* ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ 1242 ಅಧ್ಯಾಪಕರುಗಳಿಗೆ ನೇಮಕಾತಿ ಆದೇಶ ನೀಡಬೇಕು.

* ವರ್ಗಾವಣೆ ಅದಾಲತ್ ನಡೆಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು