ಭಾನುವಾರ, ಜೂನ್ 13, 2021
21 °C
ಕಿರಿಮಂಜೇಶ್ವರದ ಕೊಡೇರಿ ಸಮುದ್ರದಲ್ಲಿ ಘಟನೆ

ಮೀನುಗಾರಿಕೆ ವೇಳೆ ಅವಘಡ: ದೋಣಿ ಮಗುಚಿ ನಾಲ್ವರು ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಮೀನುಗಾರಿಕಾ ಬಂದರು ಪ್ರವೇಶ ದ್ವಾರದ ಬಳಿ ಸಮುದ್ರದಲ್ಲಿ ಭಾನುವಾರ ಮೀನುಗಾರಿಕಾ ನಾಡದೋಣಿ ಮಗುಚಿ ಅದರಲ್ಲಿದ್ದ ನಾಲ್ವರು ನಾಪತ್ತೆಯಾಗಿದ್ದಾರೆ.

ನಾಗರಾಜ ಖಾರ್ವಿ, ಮಂಜುನಾಥ ಖಾರ್ವಿ, ಲಕ್ಷ್ಮಣ ಖಾರ್ವಿ ಮತ್ತು ಶೇಖರ ಖಾರ್ವಿ ನಾಪತ್ತೆಯಾದವರು. ಕೆಲವು ನಾಡದೋಣಿಗಳ ಜತೆಗೆ ಮೀನುಗಾರಿಕೆ ನಡೆಸುತ್ತಿದ್ದ ಉಪ್ಪುಂದ ಕರ್ಕಿಕಳಿಯ ‘ಸಾಗರಶ್ರೀ’ ದೋಣಿ ಅಲೆಗಳ ಹೊಡೆತದಿಂದ ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಬಡಿದು ಮಗುಚಿದಾಗ ಅದರಲ್ಲಿದ್ದ 12 ಜನರು ನೀರಿಗೆ ಬಿದ್ದಿದ್ದರು. ನಾಲ್ವರನ್ನು ಹೊರತುಪಡಿಸಿ ಉಳಿದವರನ್ನು ರಕ್ಷಿಸಲಾಯಿತು. ನಾಪತ್ತೆ ಆದವರಿಗಾಗಿ ಮೀನುಗಾರರು ನಡೆಸಿದ ಹುಡುಕಾಟ ಸಂಜೆಯ ವರೆಗೆ ಫಲ ನೀಡಿಲ್ಲ.

ನಾಪತ್ತೆಯಾದವರಲ್ಲಿ ಇಬ್ಬರು ಅವರದ್ದೇ ದೋಣಿಯ ಬಲೆಯಲ್ಲಿ ಸಿಲುಕಿಕೊಂಡಿರಬಹುದು ಮತ್ತಿಬ್ಬರು ನೀರಿನಲ್ಲಿ ಮುಳುಗಿರಬಹುದು ಎಂದು ಮೀನುಗಾರರು ಶಂಕಿಸಿದ್ದಾರೆ.

ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಸಿಪಿಐ ಸಂದೀಪ್ ಜಿ. ಎಸ್, ಕುಂದಾಪುರ ಎಎಸ್‌ಪಿ ಹರಿರಾಮ ಶಂಕರ, ಉಪ ವಿಭಾಗಾಧಿಕಾರಿ ರಾಜು ಕೆ, ಬೈಂದೂರು ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್, ಸಿಪಿಐ ಸುರೇಶ ಜಿ. ನಾಯ್ಕ್, ಎಸ್‌ಐ ಸಂಗೀತಾ ಶಟನಾ ಸ್ಥಳದಲ್ಲಿ ಇದ್ದಾರೆ. ಸಮುದ್ರ ಪಾಲಾದವರ ಪತ್ತೆಗೆ ಪ್ರಯತ್ನ ಮುಂದುವರಿದಿದೆ.ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿನೀಡಿದ್ದಾರೆ.

ಜಿಲ್ಲಾಧಿಕಾರಿ, ಎಸ್‌ಪಿ ಭೇಟಿ: ಸಂಜೆ ಹೊತ್ತಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಮತ್ತು ಎಸ್‌ಪಿ ವಿಷ್ಣುವರ್ಧನ ಭೇಟಿ ನೀಡಿದರು. ಮೀನುಗಾರರ ಜತೆ ಮಾತನಾಡಿದ ಅವರು, ‘ ಕರಾವಳಿ ಕಾವಲು ಪಡೆ ಸಿಬ್ಬಂದಿ ನಾಪತ್ತೆಯಾದ ಮೀನುಗಾರರ ಸುಳಿವು ದೊರೆಯುವ ವರೆಗೆ ಸ್ಥಳದಲ್ಲಿ ಇರುತ್ತಾರೆ. ಮೀನುಗಾರರಿಗೆ ಅಪಾಯ ಸಂಭವಿಸಿದ್ದರೆ ಇಲಾಖೆಯಿಂದ ಪರಿಹಾರ ದೊರಕಿಸಿಕೊಡಲಾಗುವುದು’ ಎಂದರು. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೂ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು