ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ಸಂಪತ್ತು ಬಚ್ಚಿಟ್ಟ ಅಧಿಕಾರಿಗಳು; ಕಸದ ತೊಟ್ಟಿಯಲ್ಲೂ ಆಭರಣ

Last Updated 16 ಮಾರ್ಚ್ 2022, 8:36 IST
ಅಕ್ಷರ ಗಾತ್ರ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 18 ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಬುಧವಾರ ಬೆಳಿಗ್ಗೆ 75 ಸ್ಥಳಗಳಲ್ಲಿ ಶೋಧ ಆರಂಭಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರೋಪಿತ ಅಧಿಕಾರಿಗಳ ಮನೆಗಳು, ಸಂಬಂಧಿಕರು ಮತ್ತು ನಿಕಟವರ್ತಿಗಳ ಮನೆಗಳು, ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ. ಎಸಿಬಿಯ 300ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳ ಮನೆಗಳಲ್ಲಿ ಚಿನ್ನ, ಬೆಳ್ಳಿ, ನಗದು, ಶ್ರೀಗಂಧದ ತುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಸಂಪತ್ತು ದೊರೆತಿದೆ. ಮನೆಯ ಕಸದ ತೊಟ್ಟಿಯಲ್ಲೂ ಆಭರಣಗಳನ್ನು ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

***

ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಎಸಿಬಿ ದಾಳಿ

ಬಾಗಲಕೋಟೆ: ಬಾದಾಮಿ ವಲಯ ಅರಣ್ಯಾಧಿಕಾರಿ ಶಿವಾನಂದ ಖೇಡಗಿ ಅವರ ನಿವಾಸದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಪರಿಶೀಲನೆ ವೇಳೆ ನೋಟು ಎಣಿಸುವ ಯಂತ್ರ ಹಾಗೂ ಶ್ರೀಗಂಧದ ತುಂಡುಗಳು ದೊರೆತಿದೆ. ಮನೆಯಲ್ಲಿ 3.17 ಕೆ.ಜಿವರೆಗೆ ಶ್ರೀಗಂಧ ಇಟ್ಟುಕೊಳ್ಳಬಹುದಾಗಿದೆ. ಖೇಡಗಿ ಅವರ ನಿವಾಸದಲ್ಲಿ 3 ಕೆ.ಜಿ ಶ್ರೀಗಂಧ ದೊರೆತಿದೆ ಎಂದು ಹೇಳಲಾಗಿದೆ.

ಗದಗ: ನಗರದ ಪಂಚಾಕ್ಷರಿ ಬಡಾವಣೆಯಲ್ಲಿರುವ ಉಪತಹಶೀಲ್ದಾರ್ ಬಿ.ಎಸ್.ಅಣ್ಣಿಗೇರಿ ಮನೆ ಮೇಲೆ ಎಸಿಬಿ ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ. 450 ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ಹಾಗೂ ಅಂದಾಜು 25 ಎಕರೆ ಜಮೀನು, 12 ಸೈಟ್ ಗಳ ದಾಖಲೆಗಳು ಪತ್ತೆಯಾಗಿವೆ. ₹1. 50 ಲಕ್ಷ ನಗದು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

ವಿಜಯಪುರ: ‌ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥಸಾ ಮಲಜಿ ಅವರ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ನಿವಾಸ,ದರ್ಗಾ ಪ್ರದೇಶದಲ್ಲಿರುವ ಕಚೇರಿ ಹಾಗೂ ಸ್ಟೋರ್ ನಲ್ಲಿ ದಾಖಲಾತಿ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಇರುವ ಗೋಪಿನಾಥ ಸಂಬಂಧಿಗಳ ಎರಡು ಮನೆಗಳ ಮೇಲೆಯೂ ದಾಳಿ ನಡೆದಿದೆ.

ಮೈಸೂರು: ಇಲ್ಲಿನ ವಿಜಯನಗರ ಠಾಣೆಯ ಇನ್ ಸ್ಪೆಕ್ಟರ್ ಬಾಲಕೃಷ್ಣ ಅವರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಅವರ ಮಾವನವರ ಮನೆ ಹಾಗೂ ವಿಜಯನಗರ ಠಾಣೆಯಲ್ಲೂ ಶೋಧ ಕಾರ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ತುಮಕೂರು: ಸಮಾಜ ಕಲ್ಯಾಣ ಇಲಾಖೆ ಜನರಲ್ ಮ್ಯಾನೇಜರ್ ಎ.ಶ್ರೀನಿವಾಸ್ ಅವರಿಗೆ ಸೇರಿದ ಜಿಲ್ಲೆಯ ಎರಡು ಫಾರ್ಮ್ ಹೌಸ್‌ಗಳ ಮೇಲೆ ಎಸಿಬಿ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಮಧುಗಿರಿ ತಾಲ್ಲೂಕಿನ ಪುರವರ ಸಮೀಪದ ಎಜಿಓ ಫಾರ್ಮ್ ಹಾಗೂ ತುಮಕೂರು ತಾಲ್ಲೂಕು ಕೌತಮಾರನಹಳ್ಳಿ ಬಳಿಯ ಎಜಿಓ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ.

ಕೊಪ್ಪಳ: ಯಲಬುರ್ಗಾದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯಕ ಎಂಜಿನಿಯರ್ ಗಿರೀಶ ಎಂಬುವವರ ನಗರದ ಮನೆಯ ಮೇಲೆ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕೊಪ್ಪಳದ ಕುಷ್ಟಗಿ ರಸ್ತೆಯಲ್ಲಿರುವ ಅಗಡಿ ಲೇಔಟ್ ನಲ್ಲಿರುವ ಮನೆ ಸೇರಿದಂತೆ ಬಾಗಲಕೋಟೆಯ ಫಾರ್ಮ್, ವಾಣಿಜ್ಯ ಸಂಕೀರ್ಣ, ಪೀಠೋಪಕರಣ ಅಂಗಡಿ ಮತ್ತು ಗೋಡೌನ್ ಮೇಲೆ ದಾಳಿ ನಡೆಸಲಾಗಿದೆ.

ಬೀದರ್: ಯಾದಗಿರಿಯ ವಲಯ ಅರಣ್ಯಾಧಿಕಾರಿ ರಮೇಶ ಪೀರಣ್ಣ ಕನಕಟ್ಟಿ ಅವರ ಬೀದರ್‌ ಹಾಗೂ ಚಿಟಗುಪ್ಪ ತಾಲ್ಲೂಕಿನ ಉಡಬಾಳದ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಬೀದರ್ ನಗರದ ಆದರ್ಶ ಕಾಲೊನಿಯ ಭವ್ಯ ಮನೆ ಹಾಗೂ ಚಿಟಗುಪ್ಪ ತಾಲ್ಲೂಕಿನ ಉಡಬಾಳ ಗ್ರಾಮದಲ್ಲಿರುವ ಪೋಷಕರ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯ ಸಂದರ್ಭದಲ್ಲಿ ಚಿನ್ನಾಭರಣ, ಬೆಳ್ಳಿಯ ಆಭರಣ, ಬೆಳ್ಳಿಯ ಸಮಯ, ಆರತಿ, ಲೋಟ ಪತ್ತೆಯಾಗಿವೆ.

ಚಿಕ್ಕಮಗಳೂರು: ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗವಿರಂಗಪ್ಪ ಅವರ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತಂಡ ದಾಳಿ ಮಾಡಿದೆ. ತಂಡವು ದಾಖಲೆ ಮೊದಲಾದವುಗಳ ಪರಿಶೀಲನೆಯಲ್ಲಿ ತೊಡಗಿದೆ.

ರಾಯಚೂರು: ಇಲ್ಲಿನ ಬಸವೇಶ್ವರ ನಗರದಲ್ಲಿರುವ ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್‌ (ಕೆಬಿಜೆಎನ್‌ಎಲ್‌) ಉಪವಿಭಾಗ–13 ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕರೆಡ್ಡಿ ಪಾಟೀಲ ಅವರ ಮನೆಮೇಲೆ ಎಸಿಬಿ ಅಧಿಕಾರಿಗಳ ತಂಡವು ಪರಿಶೀಲನೆ ಮುಂದುವರಿಸಿದ್ದು, ಮನೆಕಸದ ಡಬ್ಬಿಯಲ್ಲೂ ನಗದು ಹಾಗೂ ಚಿನ್ನಾಭರಣಗಳನ್ನು ಇಟ್ಟಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT