ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Hijab Row: ಹಿಜಾಬ್‌ಗೆ ಪಟ್ಟು, ಬಗೆಹರಿಯದ ಬಿಕ್ಕಟ್ಟು

ಅನಿರ್ದಿಷ್ಟ ಅವಧಿಯವರೆಗೆ ರಜೆ ಘೋಷಿಸಿದ ಬೆಳಗಾವಿಯ ವಿಜಯಾ ಅರೆ ವೈದ್ಯಕೀಯ ಸಂಸ್ಥೆ
Last Updated 19 ಫೆಬ್ರುವರಿ 2022, 21:01 IST
ಅಕ್ಷರ ಗಾತ್ರ

ಬೆಂಗಳೂರು: ಹಿಜಾಬ್‌ ಧರಿಸಿ ತರಗ ತಿಗೆ ಬರಲು ಅವಕಾಶ ಕೋರಿ ವಿದ್ಯಾರ್ಥಿನಿಯರು ಶನಿವಾರವೂ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟಿಸಿದ್ದಾರೆ. ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರ ಜೊತೆ ವಾಗ್ವಾದ ನಡೆಸಿದ್ದು, ಅನಿಶ್ಚಿತತೆ ಮುಂದುವರಿದಿದೆ. ಕೆಲವೆಡೆ ಹಿಜಾಬ್‌ ಪರ ಮತ್ತು ಅಲ್ಲಾ ಹು ಅಕ್ಬರ್‌ ಘೋಷಣೆ ಕೂಗಲಾಗಿದೆ. ಹಿಜಾಬ್‌ಗೆ ಅವಕಾಶ ನೀಡದ್ದನ್ನು ಪ್ರತಿಭಟಿಸಿ ಮನೆಗೆ ವಾಪಸಾಗಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳ ಗಾವಿಯ ವಿಜಯಾ ಅರೆವೈದ್ಯಕೀಯ ಸಂಸ್ಥೆಯ ಕಾಲೇಜಿಗೆ ಅನಿರ್ದಿಷ್ಟ ಅವಧಿ ಯವರಿಗೆ ರಜೆ ನೀಡಲಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ, ‘ಹಿಜಾಬ್‌ಗೆ ಅವಕಾಶ ನೀಡಿ, ಇಲ್ಲ ಟಿ.ಸಿ ಕೊಡಿ’ ಎಂದು ವಿದ್ಯಾರ್ಥಿನಿಯರು ಪಟ್ಟುಹಿಡಿದಿದ್ದಾರೆ.

ಬೆಳಗಾವಿ ವರದಿ:
ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗು ತ್ತೇವೆ ಎಂದು ವಿದ್ಯಾರ್ಥಿನಿಯರು ಶನಿವಾರವೂ ಪಟ್ಟು ಹಿಡಿದ ಕಾರಣ ಇಲ್ಲಿನ ವಿಜಯಾ ಅರೆವೈದ್ಯಕೀಯ ಸಂಸ್ಥೆಯ ಕಾಲೇಜಿಗೆ ಅನಿರ್ದಿಷ್ಟ ಅವಧಿಯವರೆಗೆ ರಜೆ ಘೋಷಿಸಲಾಗಿದೆ.

ಪ್ರಾಚಾರ್ಯ ಡಾ.ಪ್ರಕಾಶ ಪಾಟೀಲ ಅವರು, ‌‘ಮನವೊಲಿಸಿದರೂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಬರಲು ಒಪ್ಪುತ್ತಿಲ್ಲ. ಉಳಿದ ವಿದ್ಯಾರ್ಥಿಗಳಿಗೂ ತೊಂದರೆ ಆಗಬಾರದು ಎಂದು ರಜೆ ಘೋಷಿಸಿದ್ದೇವೆ. ಜಿಲ್ಲಾಧಿಕಾರಿ ಜೊತೆಗೂ ಚರ್ಚಿಸುತ್ತೇವೆ. ಮುಂದಿನ ಆದೇಶದವರೆಗೆ ಕಾಲೇಜಿಗೆ ರಜೆ ಇರಲಿದೆ. ಬಳಿಕ ಹೆಚ್ಚುವರಿ ತರಗತಿ ನಡೆಸಿ ವಿದ್ಯಾರ್ಥಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಹಿಜಾಬ್ ಧರಿಸಲು ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿ ಶನಿವಾರವೂ ಧರಣಿ ನಡೆಸಿದ ವಿದ್ಯಾರ್ಥಿ ಗಳು ‘ನಾವು ಬುರ್ಖಾ, ನಕಾಬ್ ತೆಗೆದು ತರಗತಿಗೆ ಹಾಜರಾಗುತ್ತೇವೆ. ಆದರೆ, ಹಿಜಾಬ್ ತೆಗೆಯುವ ಮಾತೇ ಇಲ್ಲ’ ಎಂದು ಪಟ್ಟು ಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ರಜೆ ಘೋಷಿಸಿತು.

ಮಂಗಳೂರು ವರದಿ:
ಮಂಗಳೂರಿನಲ್ಲಿ ಪ್ರತಿಭಟನೆ ಮುಂದುವರಿದಿದ್ದು,ನಾಲ್ಕು ದಿನಗಳಿಂದ ನಾವು ಕಾಲೇಜು ಹೊರಗಿದ್ದೇವೆ. ಶನಿವಾರ ಸಹಪಾಠಿ ವಿದ್ಯಾರ್ಥಿನಿ ತಲೆತಿರುಗಿ ಬಿದ್ದಳು. ಶಿಕ್ಷಕರ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದೇವೆ’ ಎಂದು ಮಂಗಳೂರಿನ ಕಾವೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಆರೋಪಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 19 ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ 25 ವಿದ್ಯಾರ್ಥಿನಿಯರು ಗೈರುಹಾಜರಾದರು. ಎರಡೂ ಕಡೆ ಮೂವರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಹಾಜರಾದರು. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಪಿಯು ಕಾಲೇಜು ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಯಿತು.

ರಾಮನಗರ ವರದಿ:
ಮಾಗಡಿ ತಾಲ್ಲೂಕಿನ ಕುದೂರಿನ ಕರ್ನಾಟಕ ಪಬ್ಲಿಕ್ ಶಾಲೆ ಪಿಯು ವಿದ್ಯಾರ್ಥಿನಿಯರು ಶನಿವಾರವೂ‌ ಪ್ರತಿಭಟಿಸಿದರು‌.

ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

ಚಿತ್ರದುರ್ಗ: ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶಿಸಲು ನಿರಾಕರಿಸಿದ ಕಾರಣಕ್ಕೆ ಪ್ರಾಂಶುಪಾಲರ ವಿರುದ್ಧವೇ ನಗರದ ಎಸ್‌ಜೆಎಂ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರು ಠಾಣೆ ಮೆಟ್ಟಿಲೇರಿದ್ದರು.

ಹಿಜಾಬ್‌ ಧರಿಸಿದ್ದ ವಿದ್ಯಾರ್ಥಿನಿಯರ ಮನವೊಲಿಕೆಗೆ ಆಡಳಿತ ಮಂಡಳಿ ಯತ್ನಿಸಿತು. ಬೇಸತ್ತ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನಗರ ಠಾಣೆಗೆ ಹೋಗಿ ಪ್ರಾಂಶುಪಾಲರು, ಸಿಬ್ಬಂದಿ‌ ವಿರುದ್ಧ ದೂರು ನೀಡಲು ಮುಂದಾದರು.

ಡಿವೈಎಸ್ಪಿ ಪಾಂಡುರಂಗ, ಸಿಪಿಐ ನಯೀಮ್, ‘ನ್ಯಾಯಾಲಯದ ಮಧ್ಯಂತರ ಆದೇಶ ಪಾಲಿಸಿ ಕಾಲೇಜಿಗೆ ತೆರಳಿ, ಇಲ್ಲವಾದಲ್ಲಿ‌ ಮನೆಗೆ ಹೋಗಿ’ ಎಂದು ವಿದ್ಯಾರ್ಥಿನಿಯರನ್ನು ಕಳುಹಿಸಿದರು.

‘ಅಮಾನತು ಮಾಡಿಲ್ಲ, ಹೆದರಿಸಿದ್ದು ಅಷ್ಟೆ’

ಶಿರಾಳಕೊಪ್ಪ: ಹಿಜಾಬ್ ಧರಿಸಿದ್ದ ಕಾರಣಕ್ಕೆ 58 ವಿದ್ಯಾರ್ಥಿಯರನ್ನು ಅಮಾನತು ಪಡಿಸಿಲ್ಲ. ಕೇವಲ ಹೆದರಿಸಿದ್ದೆವು ಅಷ್ಟೇ’ ಎಂದು ಇಲ್ಲಿನ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲರು ಹೇಳಿದ್ದಾರೆ.

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ ಎಂಬ ಸುದ್ದಿ ಇದೀಗ ವಿವಾದಕ್ಕೆ ಎಡೆಯಾದ ಹಿಂದೆಯೇ ಈ ಸ್ಪಷ್ಟನೆ ನೀಡಿದ್ದಾರೆ. ಶುಕ್ರವಾರ ಮಾತನಾಡಿದ್ದ ಪ್ರಾಂಶುಪಾಲರು, ‘ನಿಮ್ಮನ್ನು ಅಮಾನತು ಮಾಡಲಾಗಿದೆ. ನೀವು ಶನಿವಾರ ಕಾಲೇಜಿಗೆ ಬರುವ ಅವಶ್ಯಕತೆ ಇಲ್ಲ. ಬಂದರೆ, ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದ ವಿಡಿಯೊ ಹರಿದಾಡಿತ್ತು. ಇದಕ್ಕೆ ವಿದ್ಯಾರ್ಥಿಗಳು, ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆ ಶನಿವಾರವು ವಿದ್ಯಾರ್ಥಿನಿಯರು ಪ್ರತಿಭಟನೆ ಮುಂದುವರಿಸಿದರು.

‘ಈ ಕುರಿತು ಪರಿಶೀಲನೆ ನಡೆಸಿದ್ದೇನೆ. ಅಮಾನತು ಮಾಡಲು ಹಲವು ಕ್ರಮಗಳಿವೆ. ಯಾವುದೇ ವಿದ್ಯಾರ್ಥಿನಿಯರನ್ನೂ ಅಮಾನತು ಮಾಡಿಲ್ಲ’ ಎಂದು ಡಿಡಿಪಿಯು ನಾಗರಾಜ್‌ ಕಾಲಗರ್ ಸ್ಪಷ್ಟಪಡಿಸಿದರು.

ಬುರ್ಕಾ ಧರಿಸಿಯೇ ಪರೀಕ್ಷೆ ಬರೆದರು

ಯಾದಗಿರಿ (ಸುರಪುರ): ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿನಿ ಯರು ಶನಿವಾರಹಿಜಾಬ್, ಬುರ್ಕಾ ಧರಿಸಿ ಶಾಲೆಗೆ ಬಂದರು. ಡಾ.ಅಂಬೇಡ್ಕರ್ ಕಾಲೇಜಿನಲ್ಲಿಯೂಹಿಜಾಬ್ ಧರಿಸಿ ಪಿಯು ಪ್ರಾಯೋಗಿಕ ಪರೀಕ್ಷೆ ಬರೆದರು.

ಹಿಜಾಬ್ವಿವಾದದಿಂದಾಗಿ ಗುರುವಾರ, ಶುಕ್ರವಾರ ತರಗತಿಗೆ ಹಾಜರಾ ಗಿರಲಿಲ್ಲ. ಸಮವಸ್ತ್ರ ನಿಗದಿ ಮಾಡದ ನಗರದ ಬಹುತೇಕ ಕಾಲೇಜು ಗಳಲ್ಲಿಹಿಜಾಬ್‍ಗೆ ಶನಿವಾರ ಅವಕಾಶ ನೀಡಲಾಗಿತ್ತು.

‘ಸಮವಸ್ತ್ರ ನಿಗದಿ ಮಾಡದಿರುವುದರಿಂದಹಿಜಾಬ್‍ಗೆ ಅವಕಾಶ ನೀಡಲು ಉಪನಿರ್ದೇಶಕ ಚಂದ್ರಕಾಂತ ಹಿಳ್ಳಿ ತಿಳಿಸಿದ್ದರು. ಹೀಗಾಗಿ ಅವಕಾಶ ನೀಡಿದ್ದೇನೆ’ ಎಂದು ಪ್ರಾಚಾರ್ಯ ಬಸವರಾಜ ಕೊಡೇಕಲ್ ತಿಳಿಸಿದರು.

***

‘ಹಿಜಾಬ್‌ ವಿವಾದ ಸೌಹಾರ್ದವಾಗಿ ಪರಿಹಾರ ಆಗಬೇಕು. ರಾಜ್ಯದ ಎಲ್ಲ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ, ಚರ್ಚಿಸುತ್ತಿದ್ದೇನೆ. ಕಿಡಿಗೇಡಿಗಳ ಸಂಚು ವಿಫಲಗೊಳಿಸಲು ಎಲ್ಲ ಒಟ್ಟಾಗಬೇಕು

-ಮುಹಮ್ಮದ್ ಶಾಫಿ ಸಅದಿ, ವಕ್ಫ್ ಮಂಡಳಿ ಅಧ್ಯಕ್ಷ

***

ಕಾಂಗ್ರೆಸ್‌ಗೆ ಹಿಜಾಬ್‌ ಭೂತ ಕಾಡುತ್ತಿದೆ. ವಿವಾದ ಸೃಷ್ಟಿಸಿ ಮಕ್ಕಳ ಮನಸ್ಸಿನಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಅವರ ಮನಸ್ಸು ಒಡೆಯುತ್ತಿದ್ದಾರೆ

-ಬಿ.ಸಿ.ಪಾಟೀಲ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT