ಶುಕ್ರವಾರ, ಜುಲೈ 1, 2022
28 °C
ಸಚಿವ ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್‌ ಪಟ್ಟು l ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಾಳೆ

ಸಚಿವ ಈಶ್ವರಪ್ಪ ವಜಾಕ್ಕೆ ಪಟ್ಟು; ಮುಂದುವರಿದ ‘ಕೈ’ ಅಹೋರಾತ್ರಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್‌, ಪಟ್ಟು ಸಡಿಲಿಸದಿರಲು ನಿರ್ಧರಿಸಿದೆ. ಅಲ್ಲದೆ, ತಾಲ್ಲೂಕು ಕೇಂದ್ರಗಳಲ್ಲಿ ಸೋಮವಾರ (ಫೆ. 21) ಪ್ರತಿಭಟನೆ ನಡೆಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದೆ.

ಕಾಂಗ್ರೆಸ್‌ ಹಟ ಹಿಡಿದಿರುವುದರಿಂದ ಸೋಮವಾರವು ವಿಧಾನ ಮಂಡಲದ ಉಭಯ ಸದನಗಳಲ್ಲಿ ಗದ್ದಲ ಮುಂದುವರಿಯುವ ಸಾಧ್ಯತೆ ಇದೆ. ಈ ಮಧ್ಯೆಯೇ ಮಸೂದೆಗಳಿಗೆ ಅಂಗೀಕಾರ ಪಡೆದು ಸೋಮವಾರವೇ ಅಧಿವೇಶನ ಮುಕ್ತಾಯಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಧರಣಿ ನಿರತ ಕಾಂಗ್ರೆಸ್‌ ಶಾಸಕರು, ಶನಿವಾರವು ಸಚಿವ ಈಶ್ವರಪ್ಪ ಮತ್ತು ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ‘ಈಶ್ವರಪ್ಪ ಅವರನ್ನು ವಜಾಗೊಳಿಸುವರೆಗೆ ಯಾವುದೇ ಕಾರಣಕ್ಕೂ ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಾಷ್ಟ್ರಧ್ವಜ ವಿಷಯ ದೇಶದ 130 ಕೋಟಿ ಜನರ ಭಾವನೆ ಮತ್ತು ಸ್ವಾಭಿಮಾನದ ವಿಚಾರ.‌ ಸಂವಿಧಾನಕ್ಕೆ ಗೌರವ ಕೊಡದೆಯೇ ಈಶ್ವರಪ್ಪನವರು ಮಂತ್ರಿಯಾಗಿ ಹೇಗೆ ಇರುತ್ತಾರೆ’ ಎಂದು ಪ್ರಶ್ನಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಇದು ಆರೆಸ್ಸೆಸ್‌ನವರ ಕುತಂತ್ರ. ಆರೆಸ್ಸೆಸ್‌ನವರಿಗೆ ತ್ರಿವರ್ಣ ಧ್ವಜದ ಮೇಲೆ ಗೌರವವಿಲ್ಲ. ಈಶ್ವರಪ್ಪ ಪೆದ್ದ, ಹೇಳಿ ನೀಡಿ ಬಿಟ್ಟಿದ್ದಾನೆ’ ಎಂದರು.

‘ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸೋಮವಾರ (ಫೆ. 21) ರಾಜ್ಯದಾದ್ಯಂತ ಎಲ್ಲ ತಾಲ್ಲೂಕುಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಬಳಿಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಿದ್ದಾರೆ. ಬಳಿಕ ಹಳ್ಳಿ ಹಳ್ಳಿಗಳಲ್ಲೂ ಹೋರಾಟ ಹಮ್ಮಿಕೊಳ್ಳುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ರಾಷ್ಟ್ರಧ್ವಜದ ಕುರಿತು ಈಶ್ವರಪ್ಪ ನೀಡಿದ್ದ ಹೇಳಿಕೆಯನ್ನು ಜನತಾ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಈಶ್ವರಪ್ಪ ನಮ್ಮ‌ ಮೇಲೆ ಮೊಕದ್ದಮೆ ದಾಖಲಿಸಲಿ’ ಎಂದೂ ಸವಾಲು ಹಾಕಿದರು.

ಬಿಜೆಪಿಯವರಷ್ಟು ಲುಚ್ಚಾಗಳು ಯಾರೂ ಇಲ್ಲ:
‘ಬಿಜೆಪಿಯವರಷ್ಟು ಲುಚ್ಚಾಗಳು ಯಾರೂ ಇಲ್ಲ. ಸಂವಿಧಾನ ಬುಡಮೇಲು ಮಾಡುವುದು, ರಾಷ್ಟ್ರಧ್ವಜ ಬದಲಿಸುವುದು ಅವರ ಗುಪ್ತಸೂಚಿ’ ಎಂದು ಮೇಲ್ಮನೆ ವಿರೋಧಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ವಾಗ್ದಾಳಿ ನಡೆಸಿದರು.

‘ಈಶ್ವರಪ್ಪ ಹರಕುಬಾಯಿ ದಾಸ. ಇಂಥವರಿಗೆಲ್ಲ ಇಡೀ ದೇಶದಲ್ಲಿ ಹರಕುಬಾಯಿ ದಾಸರೇ ಇದ್ದಾರೆ. ಹಾವಿನಪುರದವರು (ನಾಗಪುರ) ಸಾಕಿರುವುದೆಲ್ಲ ಇಂಥ ಹರಕುಬಾಯಿಯವರನ್ನು. ಅದು ಬಚ್ಚಲು ಬಾಯಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಇದೆಲ್ಲ ಆರೆಸ್ಸೆಸ್ ಸಂಸ್ಕೃತಿ. ಹೀನವಾದ, ಹೇಯವಾದ ಸಂಸ್ಕೃತಿ. ಈಶ್ವರಪ್ಪ ಅವರ ಬೆನ್ನಿಗೆ ಮುಖ್ಯಮಂತ್ರಿ ನಿಂತಿರುವುದು ದುರಂತ’ ಎಂದೂ ಹೇಳಿದರು.
 

‘ರಾಷ್ಟ್ರಧ್ವಜದ ಮೇಲೆ ಪ್ರೀತಿ ಇದ್ದರೆ ವಜಾ ಮಾಡಲಿ’

‘ಬಿಜೆಪಿಯವರಿಗೆ ರಾಷ್ಟ್ರಧ್ವಜದ ಮೇಲೆ ಪ್ರೀತಿ, ಗೌರವ ಇದ್ದರೆ ಮೊದಲು ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡಬೇಕು. ಈಶ್ವರಪ್ಪನವರ ರಾಜೀನಾಮೆ ತೆಗೆದುಕೊಳ್ಳಲು ಯಾಕೆ ಆಗುತ್ತಿಲ್ಲ? ಮುಖ್ಯಮಂತ್ರಿ ಯಾಕೆ ಅಸಹಾಯಕರಾಗಿದ್ದಾರೊ ಗೊತ್ತಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಪಕ್ಷದ ಶಾಸಕರಾದ ಶರತ್ ಬಚ್ಚೇಗೌಡ ಮತ್ತು ಅನಿಲ್‌ ಚಿಕ್ಕಮಾದು ಜೊತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬಿಜೆಪಿಯವರದ್ದು ಬೋಗಸ್ ದೇಶಭಕ್ತಿ’ ಎಂದರು.

‘ರಾಷ್ಟ್ರ ಧ್ವಜ ಬದಲಾಗಲಿದೆ ಎಂದು ಹೇಳುವುದು ಸಂವಿಧಾನ ವಿರೋಧಿ ಅಲ್ಲವೇ? ಆರೆಸ್ಸೆಸ್‌ನವರು ರಾಷ್ಟ್ರೀಯ ಹಿತಾಸಕ್ತಿ ವಿರುದ್ಧ ಕೆಲಸ ಮಾಡುತ್ತಿದ್ದಾರೆ’ ಎಂದರು.
 

ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ– ಖರ್ಗೆ

ಬೆಂಗಳೂರು: ‘ತ್ರಿವರ್ಣ ಧ್ವಜವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅಂಥ ಧ್ವಜಕ್ಕೆ ಅವಮಾನ ಮಾಡುವ ರೀತಿಯಲ್ಲಿ ಈಶ್ವರಪ್ಪ ಮಾತನಾಡಿದ್ದಾರೆ. ರಾಷ್ಟ್ರ ಧ್ವಜದ ಬಗ್ಗೆ ಒಬ್ಬ ಮಂತ್ರಿ ಈ ರೀತಿ ಮಾತನಾಡಿರುವುದು ಸರಿಯಲ್ಲ. ಈ ರೀತಿಯ ಹೇಳಿಕೆ ಕೊಡುವಂತೆ ಆರೆಸ್ಸೆಸ್‌ನವರು ಮಾಡಿರಬಹುದು’ ಎಂದು ರಾಜ್ಯಸಭೆ ಕಾಂಗ್ರೆಸ್‌ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಧರಣಿ ನಿರತ ಪಕ್ಷದ ಶಾಸಕರನ್ನು ವಿಧಾನಸಭೆಯ ಮೊಗಸಾಲೆಯಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಬಾಯಿ, ನಾಲಗೆ ಇದೆ ಎಂದು ಯುವಕರಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಯಾರೂ ಮಾಡಬಾರದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು