ಬೆಳಗಾವಿ: ‘ಕರ್ನಾಟಕ ವಿಧಾನಸಭೆ ಚುನಾವಣೆ ಈ ಬಾರಿ ದೇಶಕ್ಕೆ ದೊಡ್ಡ ಸಂದೇಶ ನೀಡಲಿದೆ. ಯುವಜನರು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ಕಾಂಗ್ರೆಸ್ ಪಕ್ಷ ಸೋಮವಾರ ಇಲ್ಲಿ ಆಯೋಜಿಸಿದ್ದ ‘ಯುವ ಕ್ರಾಂತಿ’ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಗಾಂಧೀಜಿ ನೂರು ವರ್ಷಗಳ ಹಿಂದೆ ಇದೇ ನೆಲದಲ್ಲಿ; ಸಶಕ್ತ ಯುವಜನರ, ಸ್ವಾವಲಂಬಿ ರೈತರ, ಸಮಾನತೆ ಹೊಂದಿದ ಮಹಿಳೆಯರ ದೇಶದ ಕನಸು ಕಂಡಿದ್ದರು. ಇದೇ ನೆಲದಲ್ಲಿ ಕಾಂಗ್ರೆಸ್ ಅಧ್ಯಕ್ಷನಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಜಿಲ್ಲೆಯ ಎಲ್ಲ 18 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸಿ’ ಎಂದರು.
‘ಗುತ್ತಿಗೆದಾರರ ಸಂಘದವರು ಕಮಿಷನ್ ದಾಖಲೆ ನೀಡಿದರೂ ಮೋದಿ, ಶಾ ಮೌನವಾಗಿದ್ದಾರೆ. ಅತ್ಯಾಚಾರದ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡಿದ್ದಕ್ಕೆ ದಾಖಲೆ ಕೊಡಿ ಎಂದು ಪೊಲೀಸರನ್ನು ಕಳಿಸಿದ್ದಾರೆ’ ಎಂದು ಅವರು ಆಕ್ಷೇಪಿಸಿದರು.
‘ನೀವು ನಮ್ಮನ್ನು ಮಣ್ಣಲ್ಲಿ ಮುಚ್ಚಿದರೂ ಮೊಳೆತು ಮೇಲೆ ಬರುತ್ತೇವೆ. ಪೊಲೀಸರು, ಸಿಬಿಐ, ಇ.ಡಿ ಯಾರೂ ರಾಹುಲ್ ಅವರನ್ನು ಹೆದರಿಸಲಾಗದು. ಅವರನ್ನು ಜೈಲಿಗೆ ಹಾಕಿದರೂ ಕಿಂಚಿತ್ತೂ ಭಯ ಪಡುವವರಲ್ಲ’ ಎಂದೂ ಹೇಳಿದರು.
‘ಖರ್ಗೆ ಅವರ ರಿಮೋಟ್ ಕಂಟ್ರೋಲ್ ಬೇರೊಬ್ಬರ ಕೈಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗಾದರೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ ಸ್ವಾಮಿ; ಉತ್ತರ ಕೊಡಿ’ ಎಂದು ಗುಡುಗಿದರು.
‘12.89 ಲಕ್ಷ ಪ್ರತಿಭೆಗಳ ಪಲಾಯನ’
ಬೆಳಗಾವಿ: ‘ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ 12.89 ಲಕ್ಷ ಯುವಜನರು ವಿದೇಶಗಳಿಗೆ ವಲಸೆ ಹೋಗಿದ್ದಾರೆ. ಈ ಪ್ರತಿಭಾ ಪಲಾಯನಕ್ಕೆ ಏನು ಕಾರಣ ಉತ್ತರ ಕೊಡಿ’ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಸಮಾವೇಶದಲ್ಲಿ ಮಾತನಾಡಿದ ಅವರು, ‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿರಿ. ಅಲ್ಲಿಗೆ 18 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಅದರ ಬದಲಾಗಿ, ಲಕ್ಷಾಂತರ ಯವಜನರು ಉದ್ಯೋಗ ಅರಸಿ ವಲಸೆ ಹೋಗುವಂತಾಗಿದೆ. ದೇಶದಲ್ಲಿ 60 ಲಕ್ಷಕ್ಕೂ ಅಧಿಕ ಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿವೆ’ ಎಂದು ವಾಗ್ದಾಳಿ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.