ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಿಲ್ಲ, ವರಿಷ್ಠರ ತೀರ್ಮಾನ ಅಂತಿಮ: ಯಡಿಯೂರಪ್ಪ

Last Updated 24 ಜುಲೈ 2022, 4:06 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ನನ್ನ ಮಗ ಬಿ.ವೈ. ವಿಜಯೇಂದ್ರಗೆ ಬಿಟ್ಟು ಕೊಡುವುದಾಗಿ ಅಲ್ಲಿನ ಜನರ ಒತ್ತಾಯಕ್ಕೆ ಮಣಿದು ಶುಕ್ರವಾರ ಹೇಳಿಕೆ ನೀಡಿದ್ದೆ. ಆದರೆ, ಈ ವಿಚಾರದಲ್ಲಿ ಬಿಜೆಪಿ ವರಿಷ್ಠರ ತೀರ್ಮಾನವೇ ಅಂತಿಮ’ ಎಂದು ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಹಳೆ ಮೈಸೂರು ಸೇರಿದಂತೆ ಯಾವುದೇ ಭಾಗದಲ್ಲಿ ಸ್ಪರ್ಧಿಸಿದರೂ ಗೆದ್ದು ಬರುವ ಶಕ್ತಿ ವಿಜಯೇಂದ್ರಗೆ ಇದೆ. ಶಿಕಾರಿಪುರದ ಜನರ ಬೇಡಿಕೆಯಂತೆ ಹೇಳಿಕೆ ನೀಡಿದ್ದೆ. ಆದರೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಪಕ್ಷದ ವರಿಷ್ಠರ ನಿರ್ಧಾರದಂತೆ ನಡೆದುಕೊಳ್ಳುತ್ತೇವೆ’ ಎಂದರು.

‘ಶುಕ್ರವಾರ ನಾನು ನೀಡಿದ ಹೇಳಿಕೆಯಿಂದ ಗೊಂದಲ ಉಂಟಾಗಿದೆ. ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ, ಮುಂದಿನ ಚುನಾವಣೆಗೆ ಸ್ಪರ್ಧಿಸುವಂತೆ ಶಿಕಾರಿಪುರದ ಜನರು ಒತ್ತಾಯ ಮಾಡಿದರು. ಆಗ, ನಾನು ಸ್ಪರ್ಧಿಸುವುದಿಲ್ಲ, ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದೆ’ ಎಂದು ಹೇಳಿದರು.

‘ನಾನು ನೀಡಿರುವುದು ಸಲಹೆ ಮಾತ್ರ. ವಿಜಯೇಂದ್ರ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ವರಿಷ್ಠರೇ ತೀರ್ಮಾನಿಸುತ್ತಾರೆ. ಮೋದಿ, ಅಮಿತ್‌ ಶಾ, ನಡ್ಡಾ ಸೂಚಿಸಿದ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುತ್ತಾರೆ’ ಎಂದರು.

ಮೂಲೆಗುಂಪು ಮಾಡಿಲ್ಲ: ‘ನನ್ನನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಪುರಸಭೆ ಸದಸ್ಯನಾಗಿದ್ದವನನ್ನು ನಮ್ಮ ಪಕ್ಷ ನಾಲ್ಕು ಬಾರಿ ಮುಖ್ಯಮಂತ್ರಿ ಮಾಡಿದೆ. ಸಾಮಾನ್ಯ ಕಾರ್ಯಕರ್ತನನ್ನು ಇಷ್ಟು ಎತ್ತರಕ್ಕೆ ಬೆಳೆಸಿರುವುದೇ ಬಿಜೆಪಿ. ನಾನು ಸಂತೃಪ್ತಿ, ಸಮಾಧಾನದಿಂದ ಇದ್ದೇನೆ’ ಎಂದು ಯಡಿಯೂರಪ್ಪ ಹೇಳಿದರು.

‘ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ 140 ಶಾಸಕರನ್ನು ಗೆಲ್ಲಿಸಿಕೊಂಡು ಬಂದು, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ’ ಎಂದರು.

ಸಿದ್ದರಾಮಯ್ಯ ಕ್ಷಮೆ ಯಾಚಿಸಲಿ: ‘ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ವಿಜಯೇಂದ್ರ ಭಾಗಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಇಂತಹ ಹೇಳಿಕೆ ಶೋಭೆ ತರುವುದಿಲ್ಲ. ತಾನು ಕಳ್ಳ ಪರರ ನಂಬ ಎಂಬ ಗಾದೆಯಂತೆ ಅವರು ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಯಾಚಿಸಲಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT