ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ಗೆ ವಿಧಾನಮಂಡಲ ಅಧಿವೇಶನ ಸಾಧ್ಯತೆ

Last Updated 14 ಜುಲೈ 2021, 18:48 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಆಗಸ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದ್ದು, ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್‌ ಒಳಗೆ ಮುಂಗಾರು ಅಧಿವೇಶನ ನಡೆಸಬೇಕಿದ್ದು, ಕೋವಿಡ್‌ ಮೂರನೇ ಅಲೆಯೂ ಹೆಚ್ಚು ಕಡಿಮೆ ಅದೇ ಸಂದರ್ಭದಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಆಗಸ್ಟ್‌ನಲ್ಲೇ ನಡೆಯಲಿದೆ. ಅಧಿವೇಶನ ಬೆಂಗಳೂರು ಅಥವಾ ಬೆಳಗಾವಿಯಲ್ಲಿ ನಡೆಸಬೇಕೆ ಎಂಬ ವಿಚಾರದ ಬಗ್ಗೆಯೂ ಸಂಪುಟ ಸಭೆಯಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ‘ಲಾಕ್‌ಡೌನ್‌ ಸಂದಿಗ್ಧತೆಯಿಂದ ಹೊರಬಂದು, ಅಧಿವೇಶನ ನಡೆಸಲು ಅಗತ್ಯ ಸಿದ್ಧತೆ ನಡೆಸಿಕೊಳ್ಳಿ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭಾ ಸಚಿವಾಲಯದ ಅಧಿಕಾರಿಗಳಿಗೆ ಈಗಾಗಲೇ ತಿಳಿಸಿದ್ದಾರೆ.

ಅತ್ಯಂತ ಕಡಿಮೆ ಸಮಯದಲ್ಲಿ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಅಧಿವೇಶನ ನಡೆಸುವುದು ಸುಲಭದ ಮಾತಲ್ಲ. ಕಳೆದ ಎರಡು ವರ್ಷಗಳಿಂದ ಅಧಿವೇಶನ ನಡೆಸದೇ ಇರುವುದರಿಂದ ಅಲ್ಲಿ ಸ್ವಚ್ಛಗೊಳಿಸುವುದಕ್ಕೆ ಹಲವು ದಿನಗಳೇ ಬೇಕಾಗುತ್ತದೆ. ಅಲ್ಲದೆ, ಕೋವಿಡ್‌ ಇರುವುದರಿಂದ ವಿಶೇಷ ವ್ಯವಸ್ಥೆ ಮಾಡಿಕೊಳ್ಳಬೇಕು. ಏಕೆಂದರೆ ಬೆಂಗಳೂರಿನಿಂದ ಹೋಗುವ ಸಚಿವಾಲಯ ಸಿಬ್ಬಂದಿ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕೋವಿಡ್‌ ನಿಯಮ ಪಾಲಿಸಿಯೇ ಮಾಡಬೇಕು. ಇದು ಅತ್ಯಂತ ಕಷ್ಟದ ಕೆಲಸ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಅಪಾಯಕ್ಕೆ ಆಹ್ವಾನ ಮಾಡಿದಂತೆ. ಕಲಾಪದ ಸ್ಥಳದಲ್ಲಿ ಸದಸ್ಯರಿಗೆ, ಅಧಿಕಾರಿಗಳಿಗೆ ಮತ್ತು ಮಾಧ್ಯಮದವರಿಗೆ ಅಂತರ ಕಾಯ್ದು ಆಸನ ವ್ಯವಸ್ಥೆ ಮಾಡಬೇಕು. ಅದು ಕಷ್ಟವೇ ಸರಿ. ಅಲ್ಲಿ ಅಧಿವೇಶನ ನಡೆಸಿದರೆ, ಒಂದಲ್ಲ ಒಂದು ಹೋರಾಟದ ಕಾರಣಕ್ಕೆ ಜನ ಸಂದಣಿ ಸೇರುತ್ತದೆ. ಇದನ್ನು ನಿಭಾಯಿಸುವುದೂ ಕಷ್ಟ. ಕೋವಿಡ್ ಮೂರನೇ ಅಲೆ ಯಾವುದೇ ಕ್ಷಣದಲ್ಲಿ ಅಪ್ಪಳಿಸಬಹುದು ಎಂಬ ಎಚ್ಚರಿಕೆ ಇದೆ. ಅದಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸುವವರಿಗೆ ಕೋವಿಡ್‌ ಸಮಸ್ಯೆಯ ಪ್ರಾಥಮಿಕ ವಿಚಾರಗಳು ಅರ್ಥವಾಗುತ್ತಿಲ್ಲ. ಹೀಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು ಎಂದು ಭಾವನಾತ್ಮಕವಾಗಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT