ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನ ಸುದ್ದಿ: ₹1,819 ಕೋಟಿ ಜಿಎಸ್‌ಟಿ ವಂಚನೆ ಪತ್ತೆ

Last Updated 23 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

₹ 1,819 ಕೋಟಿ ಜಿಎಸ್‌ಟಿ ವಂಚನೆ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ₹ 1,819 ಕೋಟಿ ಜಿಎಸ್‌ಟಿ ವಂಚನೆ ಪತ್ತೆ ಹಚ್ಚಲಾಗಿದೆ. ತೆರಿಗೆ, ಬಡ್ಡಿ ಹಾಗೂ ದಂಡ ಸೇರಿ ₹ 648.85 ಕೋಟಿ ಸಂಗ್ರಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್‌ ಕೆ. ರಾಥೋಡ್‌ ಪ್ರಶ್ನೆಗೆ ಉತ್ತರಿಸಿದ ಅವರು, ತೆರಿಗೆ ವಂಚನೆ, ಸೋರಿಕೆ ತಡೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಕಲಿ ದಾಖಲೆಗಳ ಸೃಷ್ಟಿ, ಸೂಕ್ತ ದಾಖಲೆಗಳಿಲ್ಲದೆ ಸರಕು ಸಾಗಣೆ, ಮಾರಾಟ ಮಾಡಿದ ವಸ್ತುಗಳಿಗೆ ಬಿಲ್‌ ನೀಡದೆ ಇರುವ 11,914 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದರು.

ತೆರಿಗೆ ರಿಯಾಯಿತಿ ಅವಕಾಶ ಪಡೆಯಲು ಒಬ್ಬ ಉದ್ಯಮಿ 200 ಸಣ್ಣ ಸಣ್ಣ ಕಂಪನಿಗಳನ್ನು ತೆರೆದಿದ್ದ ಪ್ರಕರಣ ಪತ್ತೆ ಮಡಲಾಗಿದೆ. ಮಂಗಳೂರಿನಿಂದ ದೆಹಲಿಯವರೆಗೆ ಗುಜರಿ ಸಾಮಗ್ರಿ ಮಾರಾಟ ಜಾಲ ಪತ್ತೆ ಹಚ್ಚಿ, ₹ 800 ಕೋಟಿಗೂ ಹೆಚ್ಚು ತೆರಿಗೆ ವಸೂಲಿ ಮಾಡಲಾಗಿದೆ. ಇಂತಹ ಕ್ರಮಗಳ ಫಲವಾಗಿ ರಾಜ್ಯ ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

42.13 ಲಕ್ಷ ನಲ್ಲಿ ಸಂಪರ್ಕ ಬಾಕಿ: ಜಲಜೀವನ್‌ ಮಿಷನ್‌ ಯೋಜನೆ ಅಡಿ 80.72 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. 38.8 ಲಕ್ಷ ಮನೆಗಳಿಗೆ ಈಗಾಗಲೇ ಸಂಪರ್ಕ ಕಲ್ಪಿಸಲಾಗಿದೆ. 42.13 ಲಕ್ಷ ಮನೆಗಳ ಸಂಪರ್ಕ ಬಾಕಿ ಇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಬಿಜೆಪಿಯ ಎಸ್‌.ಕೇಶವಪ್ರಸಾದ್, ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ₹ 59 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದುವರೆಗೂ ₹ 7,904 ಕೋಟಿ ಖರ್ಚು ಮಾಡಲಾಗಿದೆ ಎಂದರು.

ನ್ಯಾಯಬೆಲೆ ಅಂಗಡಿ ಮಂಜೂರಾತಿಗೂ ಮೀಸಲಾತಿ

ಬೆಂಗಳೂರು: ನ್ಯಾಯಬೆಲೆ ಅಂಗಡಿ ಮಂಜೂರಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 24.1ರಷ್ಟು ಮೀಸಲಾತಿ ನೀಡಬೇಕು ಎಂದು ವಿಧಾನಮಂಡಲದ ‍ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯು ತನ್ನ ಏಳನೇ ವರದಿಯನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಿತು.

ಸಿಎಸ್‌ಆರ್‌ ನಿಧಿಯಲ್ಲಿ ಶೇ 25, ಬೆಳೆ ಪರಿಹಾರ ಮೊತ್ತ ಶೇ 50ರಷ್ಟು ಹೆಚ್ಚಳ, ಬ್ಯಾಂಕ್‌, ಸಹಕಾರ ಸಂಘಗಳಲ್ಲೂ ಮೀಸಲಾತಿ ನಿಗದಿ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಕಟ್ಟಡ, ಹಾಸ್ಟೆಲ್‌ ಹಾಗೂ ಕಾಲೇಜುಗಳ ನಿರ್ಮಾಣಕ್ಕೆ ಬಳಸದೆ ಪರಿಶಿಷ್ಟ ಸಮುದಾಯದ ಕಲ್ಯಾಣಕ್ಕೆ ಮಾತ್ರ ಬಳಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಬ್ಯಾಕ್‌ಲಾಗ್‌ ಹುದ್ದೆಗಳ ವಿಷಯದಲ್ಲಿ ಕೆಲ ಕಾಲೇಜುಗಳಿಗೆ ನೋಟಿಸ್‌ ನೀಡಿದ್ದು, ಪ್ರಾಂಶುಪಾಲರ ವೇತನ ತಡೆಗೆ ನೀಡಿದ ಸೂಚನೆಯನ್ನು ವಾಪಸ್‌ ಪಡೆಯಬೇಕು. ಪರಿಶಿಷ್ಟ ವಿದ್ಯಾರ್ಥಿಗಳ ಶುಲ್ಕವನ್ನು ಕಾಲೇಜಿಗೆ, ವಿದ್ಯಾರ್ಥಿವೇತನವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.

ಬಿಸಿಯೂಟ ಸಿಬ್ಬಂದಿಗೆ ಕನಿಷ್ಠ ವೇತನಕ್ಕೆ ಆಗ್ರಹ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಿಬ್ಬಂದಿಗೆ ಕನಿಷ್ಠ ವೇತನ ನೀಡುವಂತೆ ಶಾಸಕರು ವಿಧಾನಸಭೆಯಲ್ಲಿ ಗುರುವಾರ ಸರ್ಕಾರವನ್ನು ಆಗ್ರಹಿಸಿದರು.

ಜೆಡಿಎಸ್‌ನ ಸಾ.ರಾ. ಮಹೇಶ್‌ ಪ್ರಶ್ನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ಪ್ರಶ್ನೆಗೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌, ‘ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 97,371 ಅಡುಗೆ ಸಿಬ್ಬಂದಿ ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

₹1.07 ಲಕ್ಷ ಕೋಟಿ ಲೇಖಾನುದಾನಕ್ಕೆ ಒಪ್ಪಿಗೆ

ಬೆಂಗಳೂರು: ಏಪ್ರಿಲ್‌ 1ರಿಂದ ಜುಲೈ ಅಂತ್ಯದವರೆಗೆ ಸರ್ಕಾರ ಮಾಡಲೇಬೇಕಾದ ₹1.07ಲಕ್ಷ ಕೋಟಿ ಮೊತ್ತದ ಲೇಖಾನುದಾನಕ್ಕೆ ವಿಧಾನಸಭೆ ಗುರುವಾರ ಅನುಮೋದನೆ ನೀಡಿತು.

ಇದೇ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023–24 ಸಾಲಿಗೆ ₹3.09 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರು. ಪೂರ್ಣ ಆಯವ್ಯಯ ಮಂಡಿಸಿದ್ದ ಅವರು ಜುಲೈವರೆಗಿನ ವೆಚ್ಚಕ್ಕೆ ಒಪ್ಪಿಗೆ ನೀಡುವಂತೆ ಕೋರಿದ್ದರು.

ಗುರುವಾರ ಧನವಿನಿಯೋಗ ವಿಧೇಯಕ ಮಂಡಿಸಿದ ಅವರು ಲೇಖಾನುದಾನಕ್ಕೆ ಅನುಮತಿ ನೀಡುವಂತೆ ಕೋರಿದರು. ಇದರ ಜತೆಗೆ ಈ ಸಾಲಿನಲ್ಲಿ ಬಜೆಟ್‌ಗೆ ಹೊರತಾಗಿ ಮಾಡಿದ ಹೆಚ್ಚುವರಿ ಮೊತ್ತ ₹11,267 ಕೋಟಿಯ ಪೂರಕ ಅಂದಾಜಿಗೂ ಒಪ್ಪಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT