ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗ್ಪುರ ಶಿಕ್ಷಣ ನೀತಿ: ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದ ಕಾಂಗ್ರೆಸ್‌ ಹೇಳಿಕೆ

Last Updated 24 ಸೆಪ್ಟೆಂಬರ್ 2021, 20:31 IST
ಅಕ್ಷರ ಗಾತ್ರ

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ಚರ್ಚೆ ನಡೆಸದೇ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಶುಕ್ರವಾರ ಧರಣಿ ನಡೆಸಿದರು. ಇದು ಆರ್‌ಎಸ್ಎಸ್‌ ಕಾರ್ಯಸೂಚಿ ಎಂಬ ವಿಷಯ ಕಾಂಗ್ರೆಸ್‌– ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದು ಕಲಾಪದಲ್ಲಿ ಕೋಲಾಹಲ ಸೃಷ್ಟಿಯಾಯಿತು.

ಇದು ನಾಗಪುರ ಶಿಕ್ಷಣ ನೀತಿ ಎಂದು ಕಾಂಗ್ರೆಸ್‌ ಸದಸ್ಯರು ಆರೋಪಿಸಿದರೆ, ಕಾಂಗ್ರೆಸ್‌ನವರಿಗೆ ಇಟಲಿ ಶಿಕ್ಷಣ ನೀತಿ ಬೇಕಾಗಿದೆ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಆರೋಪ–ಪ್ರತ್ಯಾರೋಪಗಳ ಸುರಿಮಳೆ ಸುರಿಸಿದರು.

ಸದನದಲ್ಲಿ ನಡೆದಿದ್ದು ಏನು?
ಶೂನ್ಯ ವೇಳೆಯಲ್ಲಿ ತುರ್ತು ವಿಷಯಗಳ ಬಗ್ಗೆ ಗಮನ ಸೆಳೆಯಲು ಕೆಲವು ಸದಸ್ಯರಿಗೆ ಅವಕಾಶ ನೀಡಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಾದರು. ಈ ವೇಳೆ, ಹೇಮಾವತಿ ಅಣೆಕಟ್ಟೆಯಿಂದ ಕುಣಿಗಲ್‌ ಲಿಂಕ್‌ ಕೆನಾಲ್‌ಗೆ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗಮನ ಸೆಳೆಯಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ನ ಡಾ.ರಂಗನಾಥ್‌ ಒತ್ತಾಯಿಸಿದರು. ಅದಕ್ಕೆ ಸಭಾಧ್ಯಕ್ಷರು ಪ್ರತಿಕ್ರಿಯಿಸಲಿಲ್ಲ. ‘ಕುಣಿಗಲ್‌ ಲಿಂಕ್‌ ಕೆನಾಲ್‌’ ಎಂಬ ಭಿತ್ತಿಪತ್ರವನ್ನು ಪ್ರದರ್ಶಿಸಿದ ರಂಗನಾಥ್‌ ಅವರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು. ಕಾಂಗ್ರೆಸ್‌ನ ಕೆ.ವೆಂಕಟರಮಣಯ್ಯ, ಜೆ.ಎನ್‌.ಗಣೇಶ್‌ ಸೇರಿದಂತೆ ಹಲವು ಸದಸ್ಯರು ಧರಣಿಯಲ್ಲಿ ಸೇರಿಕೊಂಡರು.

‘ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದೇನೆ. ಆದರೂ, ನಿಮ್ಮ ಪಕ್ಷದ ಸದಸ್ಯರು ಧರಣಿ ನಡೆಸುತ್ತಿದ್ದಾರಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಾಗೇರಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ‘ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಹಾಗೂ ಧರಣಿ ನಡೆಸಬಾರದು ಎಂದು ನಾವು ತೀರ್ಮಾನಿಸಿದ್ದೆವು. ಹಲವು ವಿಷಯಗಳ ಕುರಿತು ಚರ್ಚಿಸಲು ಅವಕಾಶವೇ ಸಿಕ್ಕಿಲ್ಲ. ಕಲಾಪವನ್ನು ಒಂದು ವಾರ ಮುಂದುವರಿಸುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದೆವು. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆಯೂ ಚರ್ಚಿಸಬೇಕಿತ್ತು. ಇದಕ್ಕೆಲ್ಲ ಅವಕಾಶ ಸಿಕ್ಕಿಲ್ಲ ಎಂಬ ಬೇಸರದಿಂದ ನಮ್ಮ ಸದಸ್ಯರು ಧರಣಿ ಆರಂಭಿಸಿದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ಈ ನೀತಿಯನ್ನು ನಾಗ‍ಪುರ ಶಿಕ್ಷಣ ನೀತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೀಕಿಸಿದ್ದಾರೆ. ಅಕ್ಟೋಬರ್‌ 1ರಿಂದ ಕಾಲೇಜುಗಳು ಆರಂಭವಾಗಲಿವೆ. ನೀತಿಯ ಕುರಿತು ಚರ್ಚೆಯೇ ಆಗಿಲ್ಲ. ಇದು ಮಕ್ಕಳ ಭವಿಷ್ಯದ ಪ್ರಶ್ನೆ. ಮಕ್ಕಳ ಮೇಲೆ ಆರ್‌ಎಸ್‌ಎಸ್‌ ಅಜೆಂಡಾ ಹೇರುವುದು ಸರಿಯಲ್ಲ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

‘ಕಾಂಗ್ರೆಸ್‌ನವರಿಗೆ ಇಟಲಿ ಶಿಕ್ಷಣ ನೀತಿ ಬೇಕಿದೆ’ ಎಂದು ಬಿಜೆಪಿಯ ಸಿ.ಟಿ.ರವಿ ವ್ಯಂಗ್ಯವಾಗಿ ಹೇಳಿದರು. ಆಗ ಉಳಿದ ಕಾಂಗ್ರೆಸ್‌ ಸದಸ್ಯರು ಧರಣಿಯಲ್ಲಿ ಸೇರಿಕೊಂಡರು.

ಕಾಂಗ್ರೆಸ್‌ ಸದಸ್ಯರು ‘ಎನ್‌ಇಪಿ ಕೈಬಿಡಿ, ನ್ಯಾಯ ಬೇಕೇ ಬೇಕು’ ಎಂದು ಘೋಷಣೆಗಳನ್ನು ಕೂಗಿದರು. ನಾಗಪುರ ಶಿಕ್ಷಣ ನೀತಿ ನಮಗೆ ಬೇಡವೇ ಬೇಡ ಎಂದೂ ಹೇಳಿದರು. ‘ಇಟಲಿ ಕಾಂಗ್ರೆಸ್‌’ ಎಂದು ಬಿಜೆಪಿ ಸದಸ್ಯರು ಛೇಡಿಸಿದರು. ಬಿಜೆಪಿಯ ಹಲವು ಸದಸ್ಯರು ತಮ್ಮ ಸ್ಥಾನಗಳನ್ನು ಬಿಟ್ಟು ಬಂದು ಗುಂಪಾಗಿ ನಿಂತು ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೋವಿಡ್‌ ಸಾವಿನ ಕುರಿತ ಚರ್ಚೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಉತ್ತರ ನೀಡಲು ಆರಂಭಿಸಿದರು. ‘ಸಚಿವರು ಉತ್ತರ ನೀಡುತ್ತಿದ್ದಾರೆ. ಗಮನಿಸಿ’ ಎಂದು ಬಿಜೆಪಿ ಸದಸ್ಯರನ್ನು ಉದ್ದೇಶಿಸಿ ಸಭಾಧ್ಯಕ್ಷರು ಹೇಳಿದರು. ಆಗಲೂ ಬಿಜೆಪಿ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಜೈ ಶ್ರೀರಾಮ್‌ ಎಂದೂ ಕೂಗಿದರು.

‘ರಾಜ್ಯದಲ್ಲಿ ಗೋಡ್ಸೆ ವಿಶ್ವವಿದ್ಯಾಲಯ ಸ್ಥಾಪನೆ ಯಾವಾಗ’ ಎಂದು ಕಾಂಗ್ರೆಸ್‌ ಸದಸ್ಯರು ಪ್ರಶ್ನಿಸಿದರು.

‘ದಲಿತ, ಶೂದ್ರ, ಹಿಂದುಳಿದ, ಮಹಿಳಾ, ರೈತ, ಕಾರ್ಮಿಕ ವಿರೋಧಿ ಶಿಕ್ಷಣ ನೀತಿ’ ಎಂಬ ಭಿತ್ತಿಪತ್ರವನ್ನು ಕಾಂಗ್ರೆಸ್‌ ಸದಸ್ಯರು ಪ್ರದರ್ಶಿಸಿದರು. ‘ಮೋದಿ ಸರ್ಕಾರ್‌ ಚೋರ್‌ ಹೈ’ ಎಂದೂ ಘೋಷಣೆಗಳನ್ನು ಕೂಗಿದರು. ‘ಕಾಂಗ್ರೆಸ್‌ ಚೋರ್‌ ಹೈ’ ಎಂದು ಬಿಜೆಪಿ ಸದಸ್ಯರು ಹೇಳಿದರು. ಚೌಕಿದಾರ್ ಚೋರ್‌ ಹೈ ಎಂದೂ ಕಾಂಗ್ರೆಸ್‌ ಸದಸ್ಯರು ಹೇಳಿದರು. ಇದರಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಈಗಲೂ ಆರೆಸ್ಸೆಸ್‌ಪರ: ಕಾಗೇರಿ
‘ನಾನು ಈಗಲೂ ಆರೆಸ್ಸೆಸ್‌ ಪರ. ಆರ್‌ಎಸ್‌ಎಸ್ ಇರುವುದುಭಾರತದಲ್ಲಿ ಅಲ್ಲವೇ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

‘ಆರೆಸ್ಸೆಸ್‌ ಅಜೆಂಡಾವನ್ನು ಸರ್ಕಾರ ಹೇರಲು ಹೊರಟಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು. ‘ಆರೆಸ್ಸೆಸ್‌ನ ಉತ್ತಮ ವಿಚಾರಗಳನ್ನು ಕಲಿಸಿದರೆ ತಪ್ಪೇನು’ ಎಂದು ಕಾಗೇರಿ ಪ್ರಶ್ನಿಸಿದರು. ‘ನಿಮ್ಮ ಪೂರ್ವಾಶ್ರಮ ಅದೇ ಅಲ್ಲವೇ’ ಎಂದು ಸಿದ್ದರಾಮಯ್ಯ ಚುಚ್ಚಿದರು. ‘ನಾನು ಈಗಲೂ ಆರ್‌ಎಸ್ಎಸ್‌ ಪರ’ ಎಂದು ಕಾಗೇರಿ ಪ್ರತಿಕ್ರಿಯಿಸಿದರು.

ಆರ್‌ಎಸ್ಎಸ್‌ ಎಂದರೆ ರಾಷ್ಟ್ರೀಯತೆ: ಬೊಮ್ಮಾಯಿ
‘ಆರ್‌ಎಸ್‌ಎಸ್‌ ಎಂದರೆ ರಾಷ್ಟ್ರೀಯತೆ. ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಒಳ್ಳೆಯದು ಆಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು ಆಗುವುದಿದ್ದರೆ ಸಂಘಟನೆಯ ವಿಚಾರವನ್ನು ನೀತಿಯಲ್ಲಿ ಅಳವಡಿಸಿದರೆ ತಪ್ಪೇನು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

‘ಕಾಂಗ್ರೆಸ್‌ಗೆ ಬೇಕಿರುವುದು ಮೆಕಾಲೆ ಶಿಕ್ಷಣ ಪದ್ಧತಿ. ಶಿಕ್ಷಣ ವ್ಯವಸ್ಥೆಯ ಸುಧಾರಣೆಯನ್ನು ಸಹಿಸುವುದಿಲ್ಲ. ಅವರಿಗೆ ಬೇಕಿರುವುದು ಗುಲಾಮತನ’ ಎಂದೂ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT