ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ನಿಷೇಧಕ್ಕೆ ಅಸ್ತು: ಕಾಂಗ್ರೆಸ್ಸಿಗರ ಧರಣಿ ಮಧ್ಯೆ ವಿಧಾನಸಭೆಯಲ್ಲಿ ಒಪ್ಪಿಗೆ

ವಿಧಾನಮಂಡಲ ಅಧಿವೇಶನ
Last Updated 23 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಮತಾಂತರವನ್ನು ನಿಷೇಧಿಸುವ, ಮತಾಂತರ ಮಾಡುವವರನ್ನು ಗರಿಷ್ಠ 10 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲು ಅವಕಾಶ ಇರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ 2021’ಕ್ಕೆ ಕಾಂಗ್ರೆಸ್‌ನ ಪ್ರತಿಭಟನಾ ಧರಣಿ ಹಾಗೂ ಜೆಡಿಎಸ್‌ ವಿರೋಧದ ಮಧ್ಯೆಯೇ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರ ದೊರೆಯಿತು.

ವಿಧಾನಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದ ಕಾಂಗ್ರೆಸ್ ಸದಸ್ಯರು ಸರ್ಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಸೂದೆ ವಿರೋಧಿಸಿದರೂ ಏನು ಮಾಡಬೇಕು ಎಂಬ ಗೊಂದಲಕ್ಕೆ ಒಳಗಾದ ಜೆಡಿಎಸ್‌ನ ಒಂದಿಬ್ಬರು ಸದಸ್ಯರು ಧರಣಿಯಲ್ಲಿ ಭಾಗಿಯಾದರು. ಉಳಿದವರು ತಮಗೆ ಮೀಸಲಾದ ಜಾಗದಲ್ಲಿ ನಿಂತಿದ್ದರು. ಜೈಶ್ರೀರಾಂ ಎಂದು ಘೋಷಣೆ ಕೂಗುತ್ತಿದ್ದ ಆಡಳಿತ ಪಕ್ಷದ ಸದಸ್ಯರು ಮತ್ತು ಬಿಜೆಪಿಗೆ ಧಿಕ್ಕಾರ ಎಂದು ಅಬ್ಬರಿಸುತ್ತಿದ್ದ ವಿರೋಧ ಪಕ್ಷದ ಸದಸ್ಯರ ಗದ್ದಲದ ಮಧ್ಯೆಯೇ ಧ್ವನಿಮತದ ಮೂಲಕ ಮಸೂದೆಗೆ ಅನುಮೋದನೆ ಪಡೆಯಲಾಯಿತು.

ವಿಧಾನಪರಿಷತ್ತಿನಲ್ಲಿ ಮಸೂದೆಗೆ ಒಪ್ಪಿಗೆ ಸಿಕ್ಕಿದ ಬಳಿಕವಷ್ಟೇ ಕಾಯ್ದೆ ಜಾರಿಯಾಗಲಿದೆ. ಪರಿಷತ್ತಿನಲ್ಲಿ ಶುಕ್ರವಾರ ಮಸೂದೆ ಮಂಡಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಗುರುವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ, ಮಸೂದೆಯ ಕುರಿತು ಪ್ರಾಥಮಿಕ ವಿವರಣೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೀಡಲಿದ್ದಾರೆ ಎಂದರು.

ಆಗ ಮಾತನಾಡಿದ ಮಾಧುಸ್ವಾಮಿ, ‘ಈ ಮಸೂದೆಯನ್ನು ಸಿದ್ದರಾಮಯ್ಯ ಅವಧಿಯಲ್ಲೇ ರೂಪಿಸಲಾಗಿತ್ತು. ಅಂದಿನ ಕಾನೂನು ಸಚಿವರು ಮಸೂದೆ ಪರಿಶೀಲನೆ ನಡೆಸಿ, ಸಚಿವ ಸಂಪುಟದ ಮುಂದೆ ತರಲು ಹೊರಟಿದ್ದರು. ಮಂಡಿಸುವಂತೆ ಸಿದ್ದರಾಮಯ್ಯ ಅವರೇ ಸಹಿ ಮಾಡಿದ್ದರು. ಅದೇ ಮಸೂದೆಯನ್ನು ನಾವು ಪರಿಷ್ಕರಿಸಿ ಮಂಡಿಸಿದ್ದೇವೆ’ ಎಂದು ಹೇಳಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು
ತಬ್ಬಿಬ್ಬುಗೊಳಿಸಿದರು.

‘ಆರ್‌ಎಸ್‌ಎಸ್‌ ಕಾರ್ಯಸೂಚಿ’
ಮತಾಂತರ ಮಸೂದೆಯು ಆರ್‌ಎಸ್‌ಎಸ್‌ನ ರಹಸ್ಯ ಕಾರ್ಯಸೂಚಿಯ ಭಾಗ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದರು.

5.11.2009 ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕೆಲವು ಮುಖಂಡರು ಮನವಿ ನೀಡಿ ಮಧ್ಯಪ್ರದೇಶ ರಾಜ್ಯದ ಮಾದರಿಯಲ್ಲೇ ಮತಾಂತರ ನಿಷೇಧ ಕಾಯ್ದೆ ತರಬೇಕು. ಮಧ್ಯಪ್ರದೇಶ ಹೆಸರು ತೆಗೆದು ಕರ್ನಾಟಕ ಎಂದು ಸೇರಿಸಿದರೆ ಸಾಕು ಎಂದು ಮನವಿ ಮಾಡಿದ್ದರು.

‘ಈ ಮನವಿಯನ್ನು ಸರ್ಕಾರ ಕಾನೂನು ಆಯೋಗಕ್ಕೆ ನೀಡಿತು. ಮತಾಂತರ ನಿಷೇಧ ಕಾಯ್ದೆಗೆ ಕಾಣದ ಕೈಗಳು ಇವರೇ (ಆರ್‌ಎಸ್ಎಸ್‌) ಆಗಿದ್ದಾರೆ. ಈ ಕಾಯ್ದೆ ನಮ್ಮ ಕೂಸು ಎನ್ನುವುದು ಸತ್ಯಕ್ಕೆ ದೂರ. ಅದೇನಿದ್ದರೂ ಬಿಜೆಪಿ ಸರ್ಕಾರ, ಆರೆಸ್ಸೆಸ್‌ ಕೂಸು’ ಎಂದು ಹೇಳಿದರು.

‘ರಹಸ್ಯ ಕಾರ್ಯಸೂಚಿಯಲ್ಲ’
ಮತಾಂತರ ನಿಷೇಧ ಕಾಯ್ದೆ ತರಬೇಕು ಎಂಬುದು ಆರ್‌ಎಸ್ಎಸ್‌ನ ರಹಸ್ಯ ಕಾರ್ಯಸೂಚಿಯಲ್ಲ. ಬಹಳ ಹಿಂದಿನಿಂದಲೂ ಸಂಘದ ನಾಯಕರು ಅದನ್ನು ಪ್ರತಿಪಾದಿಸಿಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ನಿಮ್ಮ ಅವಧಿಯಲ್ಲಿ ಮಸೂದೆ ರೂಪಿಸಿದಿರಿ, ಆಗ ನೀವು ಈ ಕಾಯ್ದೆ ಮಾಡಲು ಮುಂದಾಗಿದ್ದು ಏಕೆಂದರೆ, ಆಗ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿ ವೀರಭದ್ರಸಿಂಗ್‌ ಅವರು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದರು’ ಎಂದರು.

ಆರ್‌ಎಸ್‌ಎಸ್‌ನಿಂದಲೇ ತಂದಿದ್ದು ತಪ್ಪೇನು?
‘ನಮ್ಮ ಭಾಗದಲ್ಲಿರುವ ಅಷ್ಟೂ ಸದಸ್ಯರು ಆರ್‌ಎಸ್ಎಸ್‌ ಸಂಸ್ಕಾರದಿಂದಲೇ ಬೆಳೆದು ಬಂದವರು. ಆರ್‌ಎಸ್‌ಎಸ್‌ನಿಂದಲೇ ಈ ಮಸೂದೆ ತಂದಿದ್ದು ತಪ್ಪೇನಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.

‘ದೇಶ–ಧರ್ಮ ಉಳಿಸಲು, ಅದಕ್ಕೆ ಅನುಕೂಲವಾಗಲು ಇಂತಹ ನೂರು ಮಸೂದೆಗಳನ್ನು ತರುತ್ತೇವೆ. ಅದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ನಾವು ಬೇರೆಯವರ ತಂಟೆಗೆ ಹೋಗುವುದಿಲ್ಲ. ನಮ್ಮ ಸುದ್ದಿಗೆ ಬಂದರೆ ಚಿಂದಿ, ಚಿಂದಿ ಮಾಡ್ತೇವೆ’ ಎಂದು ಅಬ್ಬರಿಸಿದರು.

ಈಶ್ವರಪ್ಪ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯರು, ಅವರ ಹೇಳಿಕೆಯನ್ನು ಕಡತದಿಂದ ತೆಗೆಯುವಂತೆ ಆಗ್ರಹಿಸಿದರು.

ಅಷ್ಟಕ್ಕೇ ಸುಮ್ಮನಾಗದ ಈಶ್ವರಪ್ಪ, ‘2016ರಲ್ಲಿ ಸಿದ್ದರಾಮಯ್ಯ ತಯಾರಾಗಿದ್ದರು. ಈ ವಿಷಯದಲ್ಲಿ ಸೋನಿಯಾಗಾಂಧಿ ಸಿಟ್ಟಾದರೆ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲದೇ ಎರಡು ವರ್ಷ ಮುಖ್ಯಮಂತ್ರಿಯಾಗಿರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಸೂದೆ ಜಾರಿ ಮಾಡಲಿಲ್ಲ’ ಎಂದರು. ಈಶ್ವರಪ್ಪ ಮಾತಿನಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದರು.

9ನೇ ರಾಜ್ಯ ನಮ್ಮದು: ಆರಗ
‘ಈ ಮಸೂದೆ ಯಾವುದೇ ಸಮುದಾಯದವರ ವಿರುದ್ಧ ಅಲ್ಲ. ಮತಾಂತರ ನಿಷೇಧ ಕಾಯ್ದೆಯನ್ನು ಈಗಾಗಲೇ ಎಂಟು ರಾಜ್ಯಗಳು ಜಾರಿಗೆ ತಂದಿವೆ. 9ನೇ ರಾಜ್ಯ ನಮ್ಮದು’ ಎಂದು ಮಸೂದೆ ಮಂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಹಳ್ಳಿಗಳಲ್ಲಿ ಮತಾಂತರ ಪಿಡುಗು ವ್ಯಾಪಕವಾಗಿದೆ. ಇದರಿಂದಾಗಿ ಹಳ್ಳಿಗಳಲ್ಲಿ ಸಂಘರ್ಷ ಏರ್ಪಟ್ಟಿದೆ. ಮತಾಂತರ ಪಿಡುಗಿನಿಂದಾಗಿ ಉಡುಪಿಯಲ್ಲಿ ಒಬ್ಬರು ಹಾಗೂ ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಇಷ್ಟದ ಧರ್ಮ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ, ಬಲವಂತದ ಮತಾಂತರದಿಂದಾಗಿ ಶಾಂತಿ, ನೆಮ್ಮದಿ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಈ ಮಸೂದೆ ತಂದಿದ್ದೇವೆ ಎಂದು ಆರಗ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT