ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಅಧಿವೇಶನ: ಮತಾಂತರ ಮಾಡಿದವನಿಗೆ ಹತ್ತು ವರ್ಷದವರೆಗೆ ಜೈಲು

ಮಾತೃಧರ್ಮಕ್ಕೆ ಮರಳುವವರಿಗೆ ಕಾಯ್ದೆ ಅನ್ವಯಿಸದು
Last Updated 15 ಡಿಸೆಂಬರ್ 2021, 20:06 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಮತಾಂತರ ನಿಷೇಧ ಕಾಯ್ದೆ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಇಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ‘ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ– 2021’ ಮಸೂದೆ ಮಂಡಿಸಲು ತಯಾರಿ ನಡೆಸಿದೆ. ಒತ್ತಾಯ, ಆಮಿಷ ಒಡ್ಡಿ ಮತಾಂತರಗಳನ್ನು ನಿಷೇಧಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ.

ಪ್ರಸ್ತಾವಿತ ಮಸೂದೆಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಅದರ ಪ್ರಕಾರ, ಪರಿಶಿಷ್ಟ (ಎಸ್‌ಸಿ, ಎಸ್‌ಟಿ), ಅಪ್ರಾಪ್ತರು, ಮಹಿಳೆಯರು, ಬುದ್ಧಿಮಾಂದ್ಯರನ್ನು ಮತಾಂತರ ಮಾಡಿದವನಿಗೆ ಕನಿಷ್ಠ 3 ವರ್ಷದಿಂದ 10 ವರ್ಷದವರೆಗೆ ಜೈಲು, ₹ 50 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇತರ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3 ವರ್ಷದಿಂದ 5 ವರ್ಷದವರೆಗೆ ಜೈಲು ಮತ್ತು ₹ 25 ಸಾವಿರ ದಂಡ, ಸಾಮೂಹಿಕ ಮತಾಂತರ ಮಾಡಿದವನಿಗೆ 3ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹ 1 ಲಕ್ಷ ದಂಡ ವಿಧಿಸಲು ಅವಕಾಶವಿದೆ.

ಯಾವುದು ಕಾನೂನುಬಾಹಿರ: ಮಸೂದೆಯ ಪ್ರಕಾರ, ಯಾವುದೇ ರೀತಿಯ ವಸ್ತು, ಹಣದ ರೂಪದಲ್ಲಿ ಉಡುಗೊರೆ, ಯಾವುದೇ ಧರ್ಮದಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ, ಉಚಿತ ಶಿಕ್ಷಣ, ವಿವಾಹವಾಗುವುದಾಗಿ ಆಮಿಷ ಅಥವಾ ಉತ್ತಮ ಜೀವನಶೈಲಿ, ಭಾವನಾತ್ಮಕವಾಗಿ ಸೆಳೆದು ಬಲವಂತವಾಗಿ ಮತಾಂತರ ಮಾಡುವುದು ಕಾನೂನುಬಾಹಿರ.

ಅಲ್ಲದೆ, ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಆಸ್ಪತ್ರೆ, ಧಾರ್ಮಿಕ ಮಿಷನರಿಗಳು, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಸೇರಿದಂತೆ ನಿರ್ದಿಷ್ಟ ಸಂಸ್ಥೆಗಳು ಇಬ್ಬರು ಅಥವಾ ಹೆಚ್ಚು ಮಂದಿಯ ಸಾಮೂಹಿಕ ಮತಾಂತರ ಪ್ರಕ್ರಿಯೆಯಲ್ಲಿ ಭಾಗಿಯಾದರೆ ಅಂಥ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸುವ ಬಗ್ಗೆ ಪ್ರಸ್ತಾವವಿದೆ.

ಮತಾಂತರಗೊಳಿಸಿರುವುದು ನ್ಯಾಯಾಲಯದಲ್ಲಿ ಸಾಬೀತಾದರೆ, ಮತಾಂತರಕ್ಕೆ ಒಳಗಾದವನಿಗೆ ಮತಾಂತರ ಮಾಡಿದವನು ಸೂಕ್ತ ಪರಿಹಾರ ನೀಡಲು ಕೂಡಾ ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಮತಾಂತರಕ್ಕೆ ಒಳಗಾದವನಿಗೆ ಗರಿಷ್ಠ ₹ 5 ಲಕ್ಷ ಪರಿಹಾರ ನೀಡಬೇಕು. ಅಲ್ಲದೆ, ಹೆಚ್ಚುವರಿಯಾಗಿ ದಂಡ ನೀಡಬೇಕು. ಈ ಹಿಂದೆಯೂ ಮತಾಂತರ ಮಾಡಿದ್ದರೆ, ಅಂಥವರಿಗೆ ಎರಡು ಪಟ್ಟು ಶಿಕ್ಷೆ ವಿಧಿಸಲು ಕೂಡಾ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆಮಿಷ ಒಡ್ಡಿ ಮತಾಂತರಗೊಂಡು ವಿವಾಹ ಆಗಿದ್ದರೆ ಅಂಥ ವಿವಾಹವನ್ನು ಅಸಿಂಧು ಎಂದು ಘೋಷಿಸಲು ಕುಟುಂಬ ನ್ಯಾಯಾಲಯಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ, ಮತಾಂತರ ಅಪರಾಧವನ್ನು ಜಾಮೀನುರಹಿತ ಮತ್ತು ಸಂಜ್ಞೆಯ ಅಪರಾಧ (ನೇರವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು) ಎಂದು ಪರಿಗಣಿಸಬಹುದು. ಒತ್ತಾಯಪೂರ್ವವಾಗಿ ಮತಾಂತರ ಮಾಡುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದು. ಒತ್ತಾಯದ ಮತಾಂತರ ಅಸಿಂಧುವಾಗುತ್ತದೆ ಎಂದೂ ಮಸೂದೆಯಲ್ಲಿದೆ.

ಕಾನೂನು ಆಯೋಗ ಶಿಫಾರಸು: ಸಂವಿಧಾನದ ಅನುಚ್ಚೇದ 25ರಲ್ಲಿ ಎಲ್ಲರಿಗೂ ಅವರವರ ಧರ್ಮವನ್ನು ಅನುಸರಿಸಲು ಮತ್ತು ಪ್ರಚಾರ ಮಾಡಲು ಅವಕಾಶ ನೀಡಲಾಗಿದೆ. ಆದರೆ, ರೆವರೆಂಡ್‌ ಸ್ಟೇನಿಲಡ್‌ ವರ್ಸಸ್‌ ಮಧ್ಯಪ್ರದೇಶ ಪ್ರದೇಶ ಸರ್ಕಾರದ ಪ್ರಕರಣದಲ್ಲಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌, ಧರ್ಮದ ಪ್ರಚಾರ ಮಾಡಬಹುದು ಎಂಬ ಕಾರಣಕ್ಕೆ ಮತಾಂತರಕ್ಕೆ ಅವಕಾಶ ಇದೆಯೆಂದು ಹೇಳಲಾಗದು ಎಂದು ಸ್ಪಷ್ಟವಾಗಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಅನುಚ್ಛೇದ 25ನ್ನು ದುರ್ಬಳಕೆ ಮಾಡಿಕೊಂಡು ಮತಾಂತರ ಮಾಡಿರುವ ಹಲವು ಪ್ರಕರಣಗಳು ನಡೆದಿವೆ. ಅದನ್ನು ನಿಲ್ಲಿಸುವುದು ಈ ಕಾನೂನಿನ ಉದ್ದೇಶವಾಗಿದೆ. ಸಾಮಾಜಿಕ ಸುವ್ಯವಸ್ಥೆ ಧಕ್ಕೆ ಬರುವಂತೆ ವರ್ತಿಸಿದರೆ ಅವುಗಳನ್ನು ನಿಯಂತ್ರಿಸಲು ಅವಕಾಶವಿದೆ. ರಾಜ್ಯ ಕಾನೂನು ಆಯೋಗ ಕೂಡಾ ಈ ಬಗ್ಗೆ ಅಧ್ಯಯನ ಮಾಡಿ, ತನ್ನ 30ನೇ ವರದಿಯಲ್ಲಿ ಸೂಕ್ತ ಕಾನೂನು ರೂಪಿಸುವಂತೆ ಶಿಫಾರಸು ಮಾಡಿದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಮತಾಂತರಕ್ಕೂ ಪ್ರಕ್ರಿಯೆ
ಯಾವುದೇ ವ್ಯಕ್ತಿ ಧರ್ಮ ಬದಲಿಸುವುದಾದರೆ ಜಿಲ್ಲಾಧಿಕಾರಿಗಳಿಗೆ 60 ದಿನಗಳ ಮೊದಲು ನಮೂನೆ 1ರಲ್ಲಿ ಅರ್ಜಿ ಸಲ್ಲಿಸಬೇಕು. ಮತಾಂತರ ಮಾಡುವ ವ್ಯಕ್ತಿಯು ನಮೂನೆ ಎರಡರಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ಜಿಲ್ಲಾಧಿಕಾರಿಯು ಮತಾಂತರಗೊಳ್ಳುವವನನ್ನು ಮತ್ತು ಮತಾಂತರ ಮಾಡುವವನನ್ನು ಪೊಲೀಸರ ನೆರವಿನಿಂದ ವಿಚಾರಣೆ ನಡೆಸಬೇಕು. ನಮೂನೆ 3ರಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬೇಕು. ಬಳಿಕ ಜಿಲ್ಲಾಧಿಕಾರಿಗಳು ಮತಾಂತರಗೊಂಡ ವ್ಯಕ್ತಿಯ ಶಾಲೆ, ಕಾಲೇಜುಗಳ ಸಕ್ಷಮ ಪ್ರಾಧಿಕಾರಕ್ಕೆ ಮತ ಬದಲಾವಣೆಗೆ ಸೂಚಿಸಬೇಕು. ಆ ಮೂಲಕ, ಮತಾಂತರಗೊಂಡ ಪರಿಶಿಷ್ಟರಿಗೆ ಸಿಗುವ ಜಾತಿ ಮೀಸಲಾತಿ ಮತ್ತು ಇತರ ಸೌಲಭ್ಯಗಳು ಸ್ಥಗಿತಗೊಳ್ಳಲಿವೆ.

ಮತಾಂತರ ಮಾಡುವವರು ಎಂದರೆ?
ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವವರು. ಅವರು ಫಾದರ್‌ಗಳು, ಧಾರ್ಮಿಕ ಗುರುಗಳು, ಪುರೋಹಿತರು, ಪಂಡಿತ್‌, ಮೌಲ್ವಿಗಳು, ಮುಲ್ಲಾಗಳು...ಹೀಗೆ ಯಾವುದೇ ಹೆಸರಿನಲ್ಲಿ ಕರೆಸಿಕೊಂಡಿರಬಹುದು ಎಂದು ಮತಾಂತರ ಮಾಡುವವರನ್ನು ಗುರುತಿಸಲಾಗುವುದು ಎಂದು ಮಸೂದೆ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT