ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ‘ಹೈಕಮಾಂಡ್‌ಗೆ ಶೀಘ್ರ ಹೆಸರು ಶಿಫಾರಸು’

ಅಭ್ಯರ್ಥಿಗಳ ಆಯ್ಕೆಗೆ ‘ಕೈ’ ಹಿರಿಯ ನಾಯಕರ ಸಭೆ
Last Updated 9 ಜನವರಿ 2021, 19:42 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧಆ ಭಾಗದ ಮುಖಂಡರ ಜತೆ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಚರ್ಚೆ ನಡೆಸಿದ ಕಾಂಗ್ರೆಸ್‌ನ ಹಿರಿಯ ನಾಯಕರು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲಿ ಹೈಕಮಾಂಡ್‌ಗೆ ಕಳುಹಿಸಲು ನಿರ್ಧರಿಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸತೀಶ ಜಾರಕಿಹೊಳಿ, ಪ್ರಕಾಶ್ ಹುಕ್ಕೇರಿ ಮತ್ತು ಚನ್ನರಾಜ್ ಅವರ ಹೆಸರು ಪ್ರಸ್ತಾವಗೊಂಡಿದೆ. ಬಿ. ನಾರಾಯಣರಾವ್ ನಿಧನದಿಂದ ತೆರವುಗೊಂಡಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಮತ್ತು ವಿಧಾನಪರಿಷತ್ ಸದಸ್ಯ ವಿಜಯ್ ಸಿಂಗ್ ಹೆಸರು ಚರ್ಚೆಗೆ ಬಂದಿದೆ. ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಬಂದಿರುವ ಬಸನಗೌಡ ತುರವೀಹಾಳ್ ಅವರನ್ನು ಮಸ್ಕಿ ಕ್ಷೇತ್ರದಿಂದ ಕಣಕ್ಕಿಳಿಸಲು ಸಮಾಲೋಚನೆ ನಡೆದಿದೆ.

ಸಭೆಯ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ನಾವು ಹೆಸರುಗಳನ್ನು ಶಿಫಾರಸು ಮಾಡಲಿದ್ದು, ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳಲಿದೆ’ ಎಂದರು.

'ಬೆಳಗಾವಿ, ಬಸವ ಕಲ್ಯಾಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಈ ಭಾಗದ ಮುಖಂಡರ ಅಭಿಪ್ರಾಯ ಪಡೆದಿದ್ದೇವೆ. ಅನೇಕ ಸಲಹೆಗಳು ಬಂದಿವೆ. ನಾನು ಹುಬ್ಬಳ್ಳಿ ಹೋಗಿ ಬಂದ ಮೇಲೆ ಮಸ್ಕಿ ಸೇರಿದಂತೆ ಮೂರು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ವರಿಷ್ಠರಿಗೆ ಕಳುಹಿಸುತ್ತೇವೆ’ ಎಂದು ಹೇಳಿದರು.

ಸಮಾಲೋಚನೆಯ ವೇಳೆ ಬೆಳಗಾವಿ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಅವರಿಗೆ ಟಿಕೆಟ್ ಕೊಡುವಂತೆ ಸತೀಶ ಜಾರಕಿಹೊಳಿ ಹೇಳಿದಾಗ, ‘ಸತೀಶ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಡಿ’ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು ಎನ್ನಲಾಗಿದೆ. ‘ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಕೆಲಸ ಮಾಡುವುದಾದರೆ ಸ್ಪರ್ಧೆಗೆ ಸಿದ್ಧ’ ಎಂದು ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ ಎಂದೂ ಗೊತ್ತಾಗಿದೆ.

ಬಸವಕಲ್ಯಾಣ ಕ್ಷೇತ್ರದಿಂದ ನಾರಾಯಣ ರಾವ್ ಪತ್ನಿ ಮಲ್ಲಮ್ಮಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ವಿಜಯ್ ಸಿಂಗ್, ಚಂದ್ರಶೇಖರ ಪಾಟೀಲ ಅವರ ಪ್ರಸ್ತಾಪವಾಗಿದೆ. ಮಲ್ಲಮ್ಮ ಪರವಾಗಿ ಸಿದ್ದರಾಮಯ್ಯ ಮಾತನಾಡಿದಾಗ ಉಳಿದವರು ಮೌನವಾಗಿದ್ದರು. ತಮ್ಮ ಮಾತು ಕೇಳುತ್ತಿಲ್ಲವೆಂದು ವಿಜಯ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು ಎಂದೂ ಗೊತ್ತಾಗಿದೆ.

ಸಭೆಯ ಬಳಿಕ ಮಾತನಾಡಿದ ಸತೀಶ ಜಾರಕಿಹೊಳಿ, ‘ಪಕ್ಷ ಏನು ತೀರ್ಮಾನ ತೆಗೆದುಕೊಳ್ಳಲಿದೆಯೊ ಅದಕ್ಕೆ ಬದ್ಧ’ ಎಂದರು.

‘ಇನ್ನೂ ಒಂದು ಸುತ್ತಿನ ಚರ್ಚೆ ನಡೆಯಬೇಕಿದೆ. ನನಗೆ ಟಿಕೆಟ್ ನೀಡುವಂತೆ ಕೆಲವರು ಸಲಹೆ ನೀಡಿದ್ದಾರೆ. ಕಾರ್ಯಕರ್ತರೂ ನನ್ನ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಹಲವರು ಪ್ರಕಾಶ್ ಹುಕ್ಕೇರಿ, ಅನಿಲ್ ಲಾಡ್, ಚನ್ನರಾಜ್ ಹೆಸರು ಪ್ರಸ್ತಾಪಿಸಿದ್ದಾರೆ. ಇಲ್ಲಿ ಯಾರೂ ಕೂಡ ಹರಕೆಯ ಕುರಿ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT