ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ‍ಪಿಎಸ್‌ಸಿ: ಸಂದರ್ಶನ ಅಂಕ 25ಕ್ಕೆಇಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನ

ಕೆ‍ಪಿಎಸ್‌ಸಿ ಆಯ್ಕೆಪಟ್ಟಿ ಊರ್ಜಿತಕ್ಕೆ ವಿಧಾನಸಭೆಯಲ್ಲಿ ಮಸೂದೆ ಮಂಡನೆ
Last Updated 18 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ (ಗ್ರೂಪ್‌ ‘ಎ’ ಮತ್ತು ‘ಬಿ’) ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಅಂಕಗಳನ್ನು 50 ರಿಂದ 25 ಕ್ಕೆ ಇಳಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

200 ಅಂಕಗಳಿಗೆ ನಡೆಯುತ್ತಿದ್ದ ವ್ಯಕ್ತಿತ್ವ ಪರೀಕ್ಷೆಯನ್ನು ಈ ಹಿಂದೆ 50 ಅಂಕಗಳಿಗೂ ಮತ್ತು ಮುಖ್ಯ ಪರೀಕ್ಷೆಯ ಅಂಕಗಳನ್ನು 1,250 ಕ್ಕೆ ಇಳಿಸಲಾಗಿತ್ತು. ಇದೀಗ ಸಚಿವ ಸಂಪುಟದ ನಿರ್ಧಾರದಿಂದ ಸಂದರ್ಶನದ ಅಂಕ 25 ಕ್ಕೆ ನಿಗದಿಯಾಗಲಿದೆ. ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಅಂಕ ಶೇಕಡ 80 ದಾಟಿದರೆ ಅಥವಾ ಶೇ 40 ಕ್ಕಿಂತ ಕಡಿಮೆಯಾದರೆ ಸಂದರ್ಶನ ಮಂಡಳಿ ಸದಸ್ಯರು ಕಾರಣಗಳನ್ನು ದಾಖಲಿಸಬೇಕು ಎಂದೂ ನಿಯಮಕ್ಕೆ ಈ ಹಿಂದೆ ತಿದ್ದುಪಡಿ ತರಲಾಗಿತ್ತು.

ಹಿಂದೆ ಎರಡು ಐಚ್ಛಿಕ ವಿಷಯಗಳೂ (ಪತ್ರಿಕೆ 6 ಮತ್ತು 7) ಸೇರಿ ಏಳು ವಿಷಯಗಳಲ್ಲಿ ಮುಖ್ಯ ಪರೀಕ್ಷೆ ನಡೆಯುತ್ತಿತ್ತು. ಆ ಬಳಿಕ ಐದು ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಐಚ್ಛಿಕ ವಿಷಯಗಳನ್ನು (ತಲಾ 250 ಅಂಕಗಳ 2 ಪತ್ರಿಕೆ) ಕೈಬಿಡಲು ನಿರ್ಧರಿಸಲಾಯಿತು. ಹೀಗಾಗಿ ಒಟ್ಟು 1,750 ಅಂಕಗಳಿಗೆ ನಡೆಯುತ್ತಿದ್ದ ಮುಖ್ಯ ಪರೀಕ್ಷೆಯಲ್ಲಿ 500 ಅಂಕಗಳು ಕಡಿತಗೊಂಡಂತಾಗಿದೆ.

ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿಯಲ್ಲಿ ಸುಧಾರಣೆಗಳನ್ನು ತರಲು ರಾಜ್ಯ ಸರ್ಕಾರ ನೇಮಿಸಿದ್ದ ಪಿ.ಸಿ.ಹೋಟಾ ಸಮಿತಿಯು ತನ್ನ ವರದಿಯಲ್ಲಿ ಹಲವು ಶಿಫಾರಸುಗಳನ್ನುಮಾಡಿತ್ತು. ಆ ಶಿಫಾರಸ್ಸಿನ ಅನ್ವಯ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅಂಕಗಳನ್ನು ಕಡಿಮೆ ಮಾಡಲಾಗಿದೆ. ಸಂದರ್ಶನಕ್ಕೆ ಮಾರ್ಗಸೂಚಿಯನ್ನು ರೂಪಿಸಲೂ ಸೂಚಿಸಲಾಗಿತ್ತು.

362 ಅಭ್ಯರ್ಥಿಗಳಿಗೆ ಜ್ಯೇಷ್ಠತೆ ಪೂರ್ವಾನ್ವಯ ಇಲ್ಲ:

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗಾಗಿ ಕೆಪಿಎಸ್‌ಸಿ 2011 ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದಕ್ಕೆ ಪೂರಕವಾಗಿ ರೂಪಿಸಿರುವ ‘ಕರ್ನಾಟಕ ಸಿವಿಲ್‌ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಮಸೂದೆ– 2022’ ಅನ್ನು ವಿಧಾನ
ಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ವಜಾಗೊಳಿಸಬೇಕು ಎಂದು ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸುತ್ತಿದ್ದ ವೇಳೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಸೂದೆ ಮಂಡಿಸಿದರು.

ಈ ಮಸೂದೆಯ ಉಪಬಂಧಗಳನ್ನು ರಚಿಸುವ ವೇಳೆ ಯಾವುದೇ ತೊಂದರೆಗಳು ಉದ್ಭವಿಸಿದಲ್ಲಿ, ರಾಜ್ಯ ಸರ್ಕಾರವು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ತೊಂದರೆಗಳನ್ನು ನಿವಾರಿಸಲು ಉಪಬಂಧಗಳನ್ನು ರಚಿಸಬಹುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

362 ಅಭ್ಯರ್ಥಿಗಳ ಬಗ್ಗೆ ಸಿಐಡಿ ವರದಿಯಲ್ಲಿ ಯಾವುದೇ ಆಕ್ಷೇಪಣೆ ವ್ಯಕ್ತವಾಗಿಲ್ಲ. ಅವರ ವಿರುದ್ಧ ಯಾವುದೇ ಆಪಾದನೆಗಳಿಲ್ಲ. ಹೀಗಾಗಿ, ಅವರದಲ್ಲದ ತಪ್ಪಿಗೆ ಅವರನ್ನು ದಂಡಿಸುವುದು ಸರಿಯಲ್ಲ. ಈ ಅಭ್ಯರ್ಥಿಗಳು ಕೆಪಿಎಸ್‌ಸಿ ಸದಸ್ಯರಿಗೆ ಅಥವಾ ಮಧ್ಯವರ್ತಿಗಳಿಗೆ ಕಾನೂನುಬಾಹಿರವಾಗಿ ಹಣ ಪಾವತಿ ಮಾಡಿರುವುದು ದೋಷಾರೋಪಣಾ ಪಟ್ಟಿಯಲ್ಲಿ ಸ್ಪಷ್ಟವಾಗಿ ತೋರಿಸಿಲ್ಲ ಎಂದೂ ಮಸೂದೆಯಲ್ಲಿ ಹೇಳಲಾಗಿದೆ.

ಮಂಡನೆಯಾಗಿರುವ ಮಸೂದೆಯಲ್ಲಿ ಏನಿದೆ?

* 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆಯು ಕಾನೂನಿನ ಅನುಸಾರ ಸಿಂಧುವಾಗಿರಬೇಕು.

* 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ನೇಮಕಾತಿ ಪ್ರಕ್ರಿಯೆಯನ್ನು ಹಿಂಪಡೆದು ರಾಜ್ಯ ಸರ್ಕಾರವು 2013ರ ಅಕ್ಟೋಬರ್‌ 15 ಹಾಗೂ 2014ರ ಆಗಸ್ಟ್‌ 14ರಂದು ಹೊರಡಿಸಿರುವ ಎಲ್ಲ ಆದೇಶಗಳು ರದ್ದುಗೊಳ್ಳಲಿವೆ.

* ನೇಮಕಾತಿ ಆದೇಶಗಳನ್ನು ಹೊರಡಿಸಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.

*ಎಲ್ಲ ನೇಮಕಾತಿಗಳು ಕರ್ನಾಟಕ ಸಿವಿಲ್‌ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ 18ನೇ ನಿಯಮದ ಉಪಬಂಧಗಳ ವ್ಯಾಪ್ತಿಗೊಳಗೆ ಇರಬೇಕು. 362 ಅಧಿಕಾರಿಗಳ ಜೇಷ್ಠತೆಯು ಸೇವೆಗೆ ವರದಿ ಮಾಡಿಕೊಂಡ ದಿನದಿಂದ ಜಾರಿಗೆ ಬರಲಿದೆ. ಅವರು ಯಾವುದೇ ಸಮಯದಲ್ಲಿ ಪೂರ್ವಾನ್ವಯವಾಗಿ ಜೇಷ್ಠತೆಗೆ ಅರ್ಹರಾಗಿರುವುದಿಲ್ಲ. ಜೇಷ್ಠತೆಯನ್ನು ಪೂರ್ವಾನ್ವಯವಾಗಿ ನೀಡುವಂತೆ ಹಕ್ಕು ಸ್ಥಾಪಿಸುವಂತಿಲ್ಲ.

* ನೇಮಕಾತಿಯ ಪುನರಾವಲೋಕನಕ್ಕಾಗಿ ಯಾವುದೇ ನ್ಯಾಯಾಲಯ ಅಥವಾ ನ್ಯಾಯಮಂಡಳಿ ಅಥವಾ ಪ್ರಾಧಿಕಾರದಲ್ಲಿ ದಾವೆ ಅಥವಾ ಇತರ ವ್ಯವಹಾರಗಳನ್ನು ನಡೆಸುವಂತಿಲ್ಲ.

* ಈ ಮಸೂದೆಯ ಉಪಬಂಧಗಳಿಗೆ ವಿರುದ್ಧವಾದ ಯಾವುದೇ ಪ್ರಕರಣಗಳನ್ನು ಪುನರ್‌ ಪರಿಶೀಲಿಸಲು ನಿರ್ದೇಶಿಸುವ ಯಾವುದೇ ಆದೇಶವನ್ನು ನ್ಯಾಯಾಲಯಗಳು ಜಾರಿಗೊಳಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT