ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಜಿಲ್ಲೆಗಳಲ್ಲೂ ಗೋಶಾಲೆ ಸ್ಥಾಪನೆಗೆ ತೀರ್ಮಾನ: ಸಂಪುಟ ಸಭೆಯಲ್ಲಿ ಒಪ್ಪಿಗೆ

ಸಹಕಾರ ಸಂಘ, ಸೊಸೈಟಿಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
Last Updated 15 ಜುಲೈ 2021, 18:06 IST
ಅಕ್ಷರ ಗಾತ್ರ

ಬೆಂಗಳೂರು: ಸಹಕಾರ ಸಂಘಗಳು, ಸೊಸೈಟಿಗಳು, ಎಪಿಎಂಸಿಗಳ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳ ಸ್ಥಾನಗಳಿಗೆ ಚುನಾವಣೆ ನಡೆಸಲು ಅನುಮತಿ. ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆಯಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಸಹಕಾರ ಇಲಾಖೆ ವ್ಯಾಪ್ತಿಗೆ ಬರುವ ಸಹಕಾರ ಸಂಘಗಳು, ಸೊಸೈಟಿಗಳು, ಎಪಿಎಂಸಿಗಳಲ್ಲಿ ಅವಧಿ ಮುಗಿದ ನಿರ್ದೇಶಕ ಮಂಡಳಿಗೆ ಮಾತ್ರ ಚುನಾವಣೆ ನಡೆಸಲಾಗುವುದು. ಆದರೆ, ಜಿಲ್ಲಾಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಡಿಸೆಂಬರ್‌ ವರೆಗೆ ಚುನಾವಣೆ ನಡೆಸದಿರಲು ನಿರ್ಧರಿಸಲಾಗಿದೆ ಎಂದರು.

ಕರ್ನಾಟಕ ಗೋವಧೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿವ ಕಾರಣ, ಜಾನುವಾರುಗಳ ಸಂರಕ್ಷಣೆಗೆ ಗೋಶಾಲೆಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ಗೋಶಾಲೆ ನಿರ್ಮಿಸಲಾಗುವುದು. ಮೊದಲ ಹಂತದಲ್ಲಿ ₹15 ಕೋಟಿ ನೀಡಲಾಗುವುದು. ಕೆಲಸದ ಪ್ರಗತಿ ನೋಡಿಕೊಂಡು ಹೆಚ್ಚುವರಿ ಹಣ ನೀಡಲಾಗುತ್ತದೆ ಎಂದು ಹೇಳಿದರು.

ಈ ಬಾರಿ ಬೆಳೆ ಸಮೀಕ್ಷೆಯನ್ನು ಮೊಬೈಲ್‌ ಆ್ಯಪ್‌ ಮೂಲಕವೇ ನಡೆಸಲು ತೀರ್ಮಾನಿಸಲಾಗಿದೆ. ರೈತರ ಮೊಬೈಲ್ ಆ್ಯಪ್‌ ಮೂಲಕ ತಮ್ಮ ಕೃಷಿ ಜಮೀನಿನ ಮಾಹಿತಿ ನೀಡಬೇಕು. ಇದಕ್ಕೆ ಅವರು ಖಾಸಗಿ ವ್ಯಕ್ತಿಗಳ ನೆರವು ಪಡೆಯಬಹುದು. ಇದಕ್ಕಾಗಿ ₹48 ಕೋಟಿ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ವಿಧಾನಸೌಧದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಎಲ್ಲಿ ಸ್ಥಾಪಿಸಬೇಕು, ಅದರ ವೆಚ್ಚ ಎಷ್ಟು ಎಂಬದರ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ. ವಚನವನ್ನು ಬರೆಯುತ್ತಿರುವ ರೀತಿಯ ಪ್ರತಿಮೆ ಸ್ಥಾಪಿಸುವುದು ಸೂಕ್ತ ಎಂಬ ಅಭಿಪ್ರಾಯ ಸಂಪುಟ ಸಭೆಯಲ್ಲಿ ಕೇಳಿ ಬಂದಿತು ಎಂದರು.

ಮುಂದಿನ ಫೆಬ್ರುವರಿ 9,10 ಮತ್ತು 12 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್‌ ಕರ್ನಾಟಕ 2022 ನಡೆಸಲು ತೀರ್ಮಾನಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಜೆಒಸಿ ಇನ್ನು ಮುಂದೆ ಪಿಯುಸಿಗೆ ತತ್ಸಮಾನ

ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು (ಜೆಒಸಿ) ಇನ್ನು ಮುಂದೆ ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲು ತೀರ್ಮಾನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

ಪ್ರಮುಖ ತೀರ್ಮಾನಗಳು:

l 139 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಶಿಫಾರಸು

l ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಕಟ್ಟಡ ನಿರ್ಮಿಸಲು ₹58 ಕೋಟಿ ಆಡಳಿತಾತ್ಮಕ ಅನುಮೋದನೆ

l ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆಗಾಗಿ (ಜಿಟಿಟಿಸಿ)₹31.66 ಕೋಟಿ ವೆಚ್ಚದಲ್ಲಿ ಬೆಳಗಾವಿ ಮತ್ತು ಮಂಗಳೂರಿನಲ್ಲಿ ಕಟ್ಟಡವನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ

l ಮೈಸೂರಿನ ಲಲಿತ ಮಹಲ್‌ ಪ್ಯಾಲೆಸ್‌ ಹೊಟೇಲ್‌ನ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಯಾವುದಾದರೂ ಹೊಟೇಲ್‌ ನಡೆಸುವವರಿಗೆ ವಹಿಸಲು ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ ಲಿಮಿಟೆಡ್‌ಗೆ ಅನುಮತಿ ನೀಡಲಾಗಿದೆ.

l ಶಿರಗುಪ್ಪಾ ಪಟ್ಟಣಕ್ಕೆ 2,500 ಎಂಎಲ್‌ ಸಾಮರ್ಥ್ಯದ ಜಲಾಶಯ ನಿರ್ಮಿಸಲು ಯೋಜನಾ ಪರಿಷ್ಕೃತ ವೆಚ್ಚ ₹45.46 ಕೋಟಿಗೆ ಒಪ್ಪಿಗೆ

l 2019 ರ ಪ್ರವಾಹದ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಲು ಆರ್ಥಿಕ ನೆರವು ನೀಡುವ ಸಂಬಂಧ ಆದೇಶ ಹೊರಡಿಸಲಾಗಿತ್ತು. ಆದೇಶವನ್ನು ದೃಢೀಕರಿಸಲಾಗಿದೆ.

l ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೇರಿ, ರಾಹುತನಕಟ್ಟೆ ಕೆರೆ ಸೇರಿ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ತಯಾರಿಸಲು ₹206 ಕೋಟಿಗೆ ಅನುಮತಿ

l ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಮುಕ್ಕಂಪಿ ಮತ್ತು ಐದು ಕೆರೆಗಳನ್ನು ತುಂಬಿಸುವ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ತಯಾರಿಸಲು ₹93 ಕೋಟಿ ಆಡಳಿತಾತ್ಮಕ ಒಪ್ಪಿಗೆ ನೀಡಲು ತೀರ್ಮಾನ

l ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶದಲ್ಲಿ 1,100 ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ₹240 ಕೋಟಿಗೆ ಆಡಳಿತಾತ್ಮಕ ಒಪ್ಪಿಗೆ

l ಗದಗ ಪಶುವೈದ್ಯ ಶಾಲೆಯ ಮೂರನೇ ಹಂತದ ಕಾಮಗಾರಿಗೆ ₹30 ಕೋಟಿ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT