ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆ: ಕೇವಲ ‘ಮೂಗಿಗೆ ತುಪ್ಪ’?

ಅಪಾಯ ಮೈಮೇಲೆ ಹಾಕಿಕೊಳ್ಳಲು ಬಯಸದ ಸಿ.ಎಂ ಮತ್ತು ವರಿಷ್ಠರು
Last Updated 7 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಯಾವುದೇ ಸಂದೇಶವಿಲ್ಲದೆ ಬರಿಗೈಯಲ್ಲಿ ರಾಜ್ಯಕ್ಕೆ ಮರಳಿದ್ದಾರೆ. ಯುಗಾದಿ ಹಬ್ಬದ ಬಳಿಕ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಈ ಬೆಳವಣಿಗೆ ತೀವ್ರ ನಿರಾಸೆ ಮೂಡಿಸಿದೆ.

ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಉಳಿದಿದೆ. ಈಗಲೂ ಸಂಪುಟದಲ್ಲಿ ಸ್ಥಾನ ಸಿಗದೇ ಇದ್ದರೆ, ಮುಂದೆ ಸ್ಥಾನ ಸಿಗುವುದು ಕಷ್ಟ ಎಂಬ ಭಾವನೆ ಗಟ್ಟಿಗೊಳ್ಳುತ್ತಿದೆ. ಒತ್ತಡ ಹಾಕುವುದನ್ನು ಬಿಟ್ಟರೆ ಆಕಾಂಕ್ಷಿಗಳಿಗೆ ಈಗ ಬೇರೆ ದಾರಿ ಉಳಿದಿಲ್ಲ. ಈ ಮಧ್ಯೆ ವಿಸ್ತರಣೆ ಅಥವಾ ಪುನಾರಚನೆಯ ಸಾಧ್ಯತೆಯೇ ಕಡಿಮೆ ಎಂಬ ಮಾತು ಬಿಜೆಪಿಯ ಒಳಗಿನಿಂದ ಕೇಳಿಬರುತ್ತಿದೆ.

ಹಿಂದೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಇದ್ದ ಕಾರಣ ಆ ಸಂದರ್ಭದಲ್ಲಿ ವರಿಷ್ಠರು ಕರ್ನಾಟಕದ ಸಂಪುಟದ ವಿಚಾರಕ್ಕೆ ಕೈ ಹಾಕುವ ಸಾಧ್ಯತೆ ಇಲ್ಲ ಎಂದೇ ವ್ಯಾಖ್ಯಾನಿಸಲಾಗಿತ್ತು. ಸದ್ಯಕ್ಕೆ ಯಾವುದೇ ರಾಜ್ಯಗಳ ಚುನಾವಣೆ ಇಲ್ಲದಿದ್ದರೂ, ವರಿಷ್ಠರು ಹಸಿರು ನಿಶಾನೆ ನೀಡದೇ ಇರುವುದು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ದಿಗಿಲು ಮೂಡಿಸಿದೆ.

ದೆಹಲಿಯಿಂದ ಹಿಂದಕ್ಕೆ ಮರಳಿದ ಬೊಮ್ಮಾಯಿ, ‘ಸಂಪುಟ ವಿಸ್ತರಣೆಗೆ ಬಗ್ಗೆ ಸ್ಥೂಲವಾಗಿ ಚರ್ಚೆಯಾಗಿದೆ. ವರಿಷ್ಠರು ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕಾರ್ಯಕಾರಿಣಿ ಸಭೆಗೆ ಬಂದ ಸಂದರ್ಭದಲ್ಲಿ ಮಿಕ್ಕ ವಿಚಾರಗಳನ್ನು ಮಾತನಾಡುತ್ತೇನೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭರವಸೆ ನೀಡಿದ್ದಾರೆ. ಇಲ್ಲಿಯ ವರಿಷ್ಠರು, ನಾಯಕರು, ಸಂಘಟನಾ ಕಾರ್ಯದರ್ಶಿಗಳೊಂದಿಗೆ, ಚರ್ಚೆ ಮಾಡುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

ಮುಂದೂಡುವ ತಂತ್ರ?: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕಸರತ್ತಿಗೆ ಕೈಹಾಕಿದರೆ ಜೇನುಗೂಡಿಗೆ ಕಲ್ಲು ಹೊಡೆದಂತೆ ಎಂಬುದು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ವರಿಷ್ಠರಿಗೆ ಮನದಟ್ಟಾಗಿದೆ. ಕೆಲವರನ್ನು ತೆಗೆದು, ಇನ್ನು ಕೆಲವರನ್ನು ಸೇರಿಸಿದರೂ ಸಮಸ್ಯೆ ತಪ್ಪಿದ್ದಲ್ಲ. ಒಂದು ಕಡೆ ಸಚಿವ ಸ್ಥಾನ ಕಳೆದುಕೊಂಡವರು, ಮತ್ತೊಂದೆಡೆ ಸಚಿವ ಸ್ಥಾನ ಸಿಗದವರು ಬಂಡಾಯ ಬಾವುಟ ಹಾರಿಸುವುದು ಖಚಿತ. ಇವೆಲ್ಲವನ್ನು ನಿಭಾಯಿಸುವುದೂ ಕಷ್ಟ. ಚುನಾವಣೆ ವೇಳೆ ಈ ಬೆಳವಣಿಗೆ ಪಕ್ಷವನ್ನು ಅಪಾಯದ ದವಡೆಗೆ ಸಿಲುಕಿಸಲಿದೆ ಎಂಬ ಚರ್ಚೆಯೂ ಬಿಜೆಪಿ ವಲಯದಲ್ಲಿ ನಡೆದಿದೆ.

ಈ ವಿಚಾರ ಮುಖ್ಯಮಂತ್ರಿ ಮತ್ತು ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಿ ಆದಷ್ಟು ಈ ಕಸರತ್ತನ್ನು ಮುಂದೂಡುವ ತಂತ್ರಕ್ಕೆ ಶರಣಾಗಿರಬಹುದು. ಯಾವುದೇ ‘ಅವಘಡ’ಕ್ಕೆ ಕೈಹಾಕದೇ ರಕ್ಷಣಾತ್ಮಕ ಆಟ ಆಡುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದಿರಲೂಬಹುದು ಎಂದು ಮೂಲಗಳು ಹೇಳಿವೆ.

ಒಂದು ವೇಳೆ ಸಂಪುಟ ವಿಸ್ತರಣೆಗೆ ಕೈಹಾಕಿದರೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸುಮ್ಮನಿರುವುದಿಲ್ಲ. ತಮ್ಮನ್ನೂ ಸೇರಿಸಿಕೊಳ್ಳಬೇಕು ಎಂಬ ಒತ್ತಡ ಹಾಕುತ್ತಾರೆ. ಅವರನ್ನು ಮರಳಿ ಸಂಪುಟಕ್ಕೆ ತೆಗೆದುಕೊಳ್ಳುವುದು ಪಕ್ಷಕ್ಕೆ ಮುಜುಗರ ಉಂಟು ಮಾಡುವುದೂ ಅಲ್ಲದೇ, ಪ್ರತಿಪಕ್ಷಕ್ಕೆ ಅಸ್ತ್ರ ನೀಡಿದಂತಾಗುತ್ತದೆ. ಹಿರಿಯರನ್ನು ಸಂಪುಟದಿಂದ ಬಿಟ್ಟರೆ ಚುನಾವಣೆ ವೇಳೆಯಲ್ಲಿ ಅವರು ಮುನಿಸಿಕೊಂಡು ಕೂರುವ ಸಾಧ್ಯತೆ ಇದೆ. ಶಾಸಕರಲ್ಲದ ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಂಡರೂ ಅಸಮಾಧಾನ ಭುಗಿಲೇಳಬಹುದು. ಹೀಗಾಗಿ ಮುಖ್ಯಮಂತ್ರಿ ಮತ್ತು ವರಿಷ್ಠರು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಇದೇ ತಿಂಗಳು ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಯ ಬಳಿಕ ಸಂಪುಟ ವಿಸ್ತರಣೆ ವಿಷಯ ಮಾತನಾಡುವುದಾಗಿ ಹೇಳಿ ಬೊಮ್ಮಾಯಿ ಆಕಾಂಕ್ಷಿಗಳಿಗೆ ಮತ್ತೊಂದು ‘ಮುಹೂರ್ತ’ ನಿಗದಿ ಮಾಡಿದ್ದಾರೆ. ಅಲ್ಲಿಯವರೆಗೆ ಆಕಾಂಕ್ಷಿಗಳು ದಿನಗಣನೆ ಮಾಡುವುದು ಬಿಟ್ಟು ಬೇರೆ ದಾರಿ ಉಳಿದಿಲ್ಲ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT