ಗುರುವಾರ , ಜನವರಿ 21, 2021
23 °C
ಗರಿಗೆದರಿದ ಸಚಿವಾಕಾಂಕ್ಷಿಗಳ ಚಟುವಟಿಕೆ l ಸಮಾರಂಭಕ್ಕೆ ನಡ್ಡಾ, ಅರುಣ್ ಸಿಂಗ್‌ಗೆ ಆಹ್ವಾನ

ಸಂಪುಟ ವಿಸ್ತರಣೆ: ರಾಜ್ಯಪಾಲರಿಗೆ ಇಂದು ಮಾಹಿತಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 13 ರಂದು ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದ ಬೆನ್ನಲ್ಲೇ ಸಚಿವಾಕಾಂಕ್ಷಿ ಶಾಸಕರ ಚಟುವಟಿಕೆ ಗರಿಗೆದರಿದೆ. ಸೋಮವಾರ ಸಂಜೆ ಸಂಭಾವ್ಯ ಸಚಿವರ ಪಟ್ಟಿ ಬಿಡುಗಡೆ ಆಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಬುಧವಾರ (ಜ.13) ಸಂಜೆ ಸಂಪುಟ ವಿಸ್ತರಣೆ ನಡೆಯಲಿದ್ದು, ರಾಜ್ಯಪಾಲರಿಗೆ ಮಂಗಳವಾರ (ಜ.12) ಮಾಹಿತಿ ನೀಡಲು ತೀರ್ಮಾನಿಸಲಾಗಿದೆ. ಪ್ರಮಾಣ ಸ್ವೀಕರಿಸಲಿರುವವರ ಪಟ್ಟಿಯೂ ಬಿಡುಗಡೆ ಆಗುವ ಸಾಧ್ಯತೆ ಇದೆ. ಇಬ್ಬರು ಸಚಿವರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿದೆ.

ಸೋಮವಾರ ಬೆಳಿಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ , ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಅವರಿಗೆ ಅನುಕೂಲಕರ ದಿನ‌ ನೋಡಿಕೊಂಡು ದಿನ ಅಂತಿಗೊಳಿಸುತ್ತೇನೆ' ಎಂದು ಹೇಳಿದರು.

’ಸಂಪುಟ ವಿಸ್ತರಣೆಯೇ ಪುನರ್ ರಚನೆಯೇ’ ಎಂಬ ಪ್ರಶ್ನೆಗೆ, 'ಏಳು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನೋಡೋಣ ಎರಡೂ ಗೊತ್ತಾಗುತ್ತದೆ' ಎಂದಷ್ಟೆ ಹೇಳಿದರು. ದೆಹಲಿ ಮೂಲಗಳ ಪ್ರಕಾರ, ಇದೇ 13 ರಂದು ನಡ್ಡಾ ಅವರ ಅಸ್ಸಾಂ ಪ್ರವಾಸದಲ್ಲಿರುವ ಸಾಧ್ಯತೆ ಇದೆ.

ಪಟ್ಟಿಯಲ್ಲಿ ಕೆಲವು ಬದಲಾವಣೆ: ಈಗಾಗಲೇ ಸಿದ್ಧವಾಗಿರುವ ಪಟ್ಟಿಯಲ್ಲಿ ಒಂದೆರಡು ಹೆಸರುಗಳು ಬದಲಾವಣೆ ಆಗುವ ಸಾಧ್ಯತೆ ಇದೆ. ಹೀಗಾಗಿ ಪಟ್ಟಿ ಕೊನೇ ಕ್ಷಣದಲ್ಲಿ ಬಹಿರಂಗಪಡಿಸಬಹುದು. ಪಕ್ಷದ ಕೋಟಾದಲ್ಲಿ ವರಿಷ್ಠರು ಸೂಚಿಸುವ ಹೆಸರುಗಳನ್ನು ಸೇರಿಸಬೇಕಾಗಬಹುದು. ಆರು ಶಾಸಕರ ಹೆಸರು ಅಂತಿಮಗೊಳಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

ಮೂವರು ವಲಸಿಗರನ್ನು ಸೇರಿಸಿಕೊಂಡ ನಂತರ ಉಳಿಯುವ ನಾಲ್ಕು ಸ್ಥಾನಗಳಲ್ಲಿ ಅವಕಾಶ ಗಿಟ್ಟಿಸಲು ಮೂಲ ಬಿಜೆಪಿ ಶಾಸಕರಲ್ಲಿ ಪೈಪೋಟಿ ಹೆಚ್ಚಾಗಿದೆ. ಸಂಪುಟದಲ್ಲಿ ಉಮೇಶ ಕತ್ತಿಯವರಿಗೆ ಸ್ಥಾನ ನೀಡಿದರೆ, ಬೆಳಗಾವಿ ಜಿಲ್ಲೆಗೆ ಅತ್ಯಧಿಕ
ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಹೀಗಾಗಿ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಕೈಬಿಡಬಹುದು ಎಂಬ ಮಾತೂ ಕೇಳಿ ಬರುತ್ತಿದೆ. ಜೊಲ್ಲೆ ಕೈಬಿಟ್ಟರೆ ಮಹಿಳೆಯೊಬ್ಬರಿಗೆ ಅವಕಾಶ ನೀಡಬೇಕಾಗುತ್ತದೆ, ಆದ್ದರಿಂದ ಕಾರವಾರ ಶಾಸಕಿ ರೂಪಾಲಿ ನಾಯ್ಕ ಮತ್ತು ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಹೆಸರುಗಳು ಚಲಾವಣೆಗೆ ಬಂದಿವೆ.

ಮುನಿರತ್ನ ಮತ್ತು ಅರವಿಂದ ಲಿಂಬಾವಳಿ ಅವರಿಗೆ ಅವಕಾಶ ನೀಡಿದರೆ ಬೆಂಗಳೂರಿಗೆ ಪ್ರಾತಿನಿಧ್ಯ ಹೆಚ್ಚಾಗುತ್ತದೆ. ಆಗ ನಗರದಿಂದ ಸಚಿವರಾದವರಲ್ಲಿ ಯಾರಾದರೂ ಒಬ್ಬರನ್ನು ಕೈಬಿಡಬೇಕಾಗಬಹುದು ಎಂದು ಮೂಲಗಳು ಹೇಳಿವೆ.

ಸಚಿವ ಸಂಪುಟ ವಿಸ್ತರಣೆ ಬಳಿಕ ಮುಖ್ಯಮಂತ್ರಿ ತಮ್ಮ ಬಳಿ ಇರುವ ಹೆಚ್ಚುವರಿ ಖಾತೆಗಳನ್ನು ಹಂಚಿಕೆ ಮಾಡಬೇಕಾಗುತ್ತದೆ. ಇದರಿಂದಾಗಿ ಕೆಲವು ಸಚಿವರ ಖಾತೆಗಳೂ ಬದಲಾಗಬಹುದು ಎಂದು ಹೇಳಲಾಗಿದೆ.

‘ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದೇನೆ’

'ಕಷ್ಟ ಕಾಲದಲ್ಲಿ ಯಡಿಯೂರಪ್ಪ ಅವರ ಕೈ ಹಿಡಿದಿದ್ದೇನೆ. ನನ್ನನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ' ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದರು.

ಸುದ್ದಿಗಾರರ ಮಾತನಾಡಿದ ಅವರು, 'ನನ್ನನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ನಾನು ಸಚಿವನಾಗಿದ್ದೆ.‌ ಮೊದಲು ರಾಜೀನಾಮೆ ನೀಡಿ ಬಂದವನೇ ನಾನು. ಆ ಬಳಿಕ, ಆರ್. ಶಂಕರ್ ಎಲ್ಲರೂ ರಾಜೀನಾಮೆ ನೀಡಿ ಬಂದಿದ್ದಾರೆ' ಎಂದರು.

'ಅವಧಿ ಪೂರ್ಣವಾಗುವವರೆಗೂ ಸಚಿವರಾಗಿ ಇರುತ್ತೀರಾ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕಷ್ಟ ಕಾಲದಲ್ಲಿ ನಾನು ಈ ಸರ್ಕಾರ ರಚನೆಗೆ ಬಂದಿದ್ದೇನೆ. ಹೀಗಾಗಿ, ಮುಖ್ಯಮಂತ್ರಿ ಮಾತು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಒಂದು ವೇಳೆ ಕೈ ಬಿಡುವ ಸಂದರ್ಭ ಬಂದಲ್ಲಿ ಆಗ ತೀರ್ಮಾನ ಮಾಡುತ್ತೇನೆ. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು