ಶನಿವಾರ, ಜನವರಿ 23, 2021
24 °C

ಸಂಪುಟ ವಿಸ್ತರಣೆ: ಅರುಣ್‌ ಸಿಂಗ್‌ ಜತೆ ಗೃಹ ಸಚಿವ ಬೊಮ್ಮಾಯಿ ರಹಸ್ಯ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಶನಿವಾರ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ಅನುಮತಿ ನೀಡುವಂತೆ ಮತ್ತೆ ಮನವಿ ಮಾಡಿದ್ದಾರೆ.

ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು ಪ್ರಮುಖರ ಸಮಿತಿ ಸಭೆಯಲ್ಲಿ ಭಾಗವಹಿಸಲು ರಾಜ್ಯಕ್ಕೆ ಬಂದಿರುವ ಅರುಣ್‌ ಸಿಂಗ್‌ ಅವರನ್ನು ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿ ಮಾಡಿದ ಯಡಿಯೂರಪ್ಪ, ಕೆಲಕಾಲ ಚರ್ಚೆ ನಡೆಸಿದರು. ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆಗಿದ್ದರು.

‘ಉಪ ಚುನಾವಣೆ, ವಿಧಾನ ಪರಿಷತ್‌, ಗ್ರಾಮ ಪಂಚಾಯಿತಿ ಚುನಾವಣೆಗಳು ಮುಗಿದಿವೆ. ಎಲ್ಲ ಚುನಾವಣೆಗಳಲ್ಲೂ ಪಕ್ಷಕ್ಕೆ ಗೆಲುವು ದೊರಕಿದೆ. ಸಂಪುಟ ವಿಸ್ತರಣೆಗೆ ಶಾಸಕರಿಂದ ಒತ್ತಡ ಹೆಚ್ಚುತ್ತಿದೆ. ತಕ್ಷಣವೇ ಸಂಪುಟ ವಿಸ್ತರಣೆಗೆ ಅನುಮತಿ ನೀಡುವಂತೆ ವರಿಷ್ಠರ ಮನವೊಲಿಸಿ’ ಎಂಬುದಾಗಿ ಯಡಿಯೂರಪ್ಪ ಅವರು ಸಿಂಗ್‌ ಅವರಿಗೆ ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಸಂಪುಟ ವಿಸ್ತರಣೆ ಕುರಿತು ಚರ್ಚಿಸುವ ಭರವಸೆ ನೀಡಿದ ಅರುಣ್‌ ಸಿಂಗ್‌, ಆದಷ್ಟು ಬೇಗ ಒಪ್ಪಿಗೆ ದೊರಕಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಎಚ್ಚರಿಕೆಯ ಭರವಸೆ: ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಪಕ್ಷದ ಶಾಸಕರೇ ಮುಖ್ಯಮಂತ್ರಿ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ವಿಚಾರವನ್ನೂ ಅರುಣ್‌ ಸಿಂಗ್‌ ಎದುರು ಪ್ರಸ್ತಾಪಿಸಲಾಗಿದೆ. ಈ ಕುರಿತು ಪದಾಧಿಕಾರಿಗಳ ಸಭೆ ಮತ್ತು ಪ್ರಮುಖರ ಸಮಿತಿ ಸಭೆಯಲ್ಲಿ ಎಚ್ಚರಿಕೆ ನೀಡುವುದಾಗಿ ಸಿಂಗ್‌ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಯಡಿಯೂರಪ್ಪ ಅವರ ಭೇಟಿಗೂ ಮೊದಲು ಬಸವರಾಜ ಬೊಮ್ಮಾಯಿ ಒಬ್ಬರೇ ಸಿಂಗ್‌ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು.

ಬಿಜೆಪಿಯ ಇತರ ಶಾಸಕರು, ಮುಖಂಡರೂ ಭೇಟಿಗೆ ಅವಕಾಶ ಕೋರಿದ್ದರು. ಆದರೆ, ಅರುಣ್‌ ಸಿಂಗ್‌ ಯಾರಿಗೂ ಸಮಯಾವಕಾಶ ನೀಡಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು