ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಖಾತೆ ಜೂಟಾಟ

ಸುಧಾಕರ್‌, ಮಾಧುಸ್ವಾಮಿ ಖಾತೆ ಬದಲು: ನಾಲ್ಕನೇ ಬಾರಿ ಮರು ಹಂಚಿಕೆ
Last Updated 25 ಜನವರಿ 2021, 19:51 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆಯ ವಿಷಯದಲ್ಲಿ ಸ್ಫೋಟಗೊಂಡ ಸಚಿವರ ಆಕ್ರೋಶ ಶಮನಗೊಳಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒಂದೇ ವಾರದಲ್ಲಿ ನಾಲ್ಕನೇ ಬಾರಿಗೆ ಖಾತೆಗಳ ಮರು ಹಂಚಿಕೆ ಮಾಡಿದ್ದಾರೆ.

ಆರೋಗ್ಯ ಸಚಿವ ಡಾ.ಸುಧಾಕರ್‌ ಒತ್ತಡಕ್ಕೆ ಮಣಿದು ಸಚಿವರಾದ ಜೆ.ಸಿ.ಮಾಧುಸ್ವಾಮಿ ಮತ್ತು ಆನಂದ್‌ಸಿಂಗ್‌ ಅವರ ಖಾತೆಗಳನ್ನು ಸೋಮವಾರ ಸಂಜೆ ಬದಲಾಯಿಸಲಾಗಿತ್ತು. ಇದರಿಂದ ಸಿಡಿದೆದ್ದ ಮಾಧುಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಮ್ಮೆ ಅವರ ಖಾತೆಯನ್ನು ಬದಲಾಯಿಸಲಾಯಿತು.

ಖಾತೆಗಾಗಿ ನಡೆದ ಈ ಜಟಾಪಟಿ ಯಲ್ಲಿ ಡಾ.ಕೆ.ಸುಧಾಕರ್‌ ಹಿಂದೆ ಹೊಂದಿದ್ದ ವೈದ್ಯ ಶಿಕ್ಷಣ ಖಾತೆಯನ್ನು ಮರಳಿ ಗಿಟ್ಟಿಸಿದರು. ವಿಸ್ತರಣೆ ಬಳಿಕ ಕಳೆದುಕೊಂಡಿದ್ದ ಸಣ್ಣ ನೀರಾವರಿ ಖಾತೆಯೇ ತಮಗೆ ಬೇಕು ಎಂದು ಪಟ್ಟು ಹಿಡಿದಿದ್ದ ಮಾಧುಸ್ವಾಮಿ, ಪುನಃ ಅದನ್ನೇ ದಕ್ಕಿಸಿಕೊಳ್ಳುವಲ್ಲಿ ಸಫಲರಾದರು.

ಮಾಧುಸ್ವಾಮಿಯವರ ಕೋಪ ಮತ್ತು ಖಡಕ್‌ ನುಡಿಗಳಿಗೆ ತಣ್ಣಗಾದ ಮುಖ್ಯಮಂತ್ರಿ ಅವರನ್ನು ಸಮಾಧಾನ ಮಾಡಲು, ಅವರು ಬಯಸಿದ ಸಣ್ಣ ನೀರಾವರಿ ಖಾತೆಯನ್ನು ನೀಡಿದರು. ವಿಸ್ತರಣೆಗೆ ಬಳಿಕ ಆನಂದ್‌ಸಿಂಗ್‌ಗೆ ನೀಡಿದ್ದ ಪ್ರವಾಸೋದ್ಯಮ, ಪರಿಸರ ಖಾತೆಯನ್ನು ಸಿ.ಪಿ.ಯೋಗೇಶ್ವರ್‌(ಸಣ್ಣ ನೀರಾವರಿ ಖಾತೆ ಇವರಿಗೆ ಸಿಕ್ಕಿತ್ತು) ಅವರಿಗೆ ನೀಡಲು ತೀರ್ಮಾನಿಸಿದರು.

ಸೋಮವಾರ ಬೆಳಿಗ್ಗೆಯಿಂದಲೇ ಮಾಧುಸ್ವಾಮಿ ಮತ್ತು ಆನಂದ್‌ಸಿಂಗ್ ಖಾತೆ ಬದಲಾಗುತ್ತದೆ ಎಂಬ ಸುದ್ದಿ ಹರಡಿತ್ತು. ಈ ಬೆಳವಣಿಗೆಯಿಂದ ಕೆಂಡಾಮಂಡಲರಾದ ಮಾಧುಸ್ವಾಮಿ, ಗಣರಾಜ್ಯೋತ್ಸವ ಧ್ವಜಾರೋಹಣದ ಬಳಿಕ ತಮ್ಮ ಮುಂದಿನ ನಿಲುವು ಪ್ರಕಟಿಸುವುದಾಗಿ ಹೇಳಿದರು. ‘ಸಚಿವನಾಗಬೇಕು ಎಂದೇನೂ ಬಿಜೆಪಿಗೆ ಬಂದಿಲ್ಲ. ಕೇವಲ ಶಾಸಕನಾಗಿಯೂ ಮುಂದುವರಿಯಲೂ ಸಿದ್ಧ’ ಎಂದು ಆನಂದ್‌ಸಿಂಗ್‌ ಹೇಳಿದರು.

ಖಾತೆ ಬದಲಾವಣೆಯ ಅಧಿಸೂಚನೆ ಹೊರಡಿಸುವುದಕ್ಕೆ ಮುನ್ನ ಮುಖ್ಯಮಂತ್ರಿ ಈ ವಿಚಾರವನ್ನು ತುಮಕೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಾಧುಸ್ವಾಮಿ ಅವರಿಗೆ ದೂರವಾಣಿ ಮೂಲಕ ತಿಳಿಸಿದರು.

ಬೆಂಗಳೂರಿಗೆ ಬಂದು ತಮ್ಮ ಜತೆ ಮಾತನಾಡುವಂತೆಯೂ ಹೇಳಿದರು.

ಇದರಿಂದ ಕೋಪಗೊಂಡಿದ್ದ ಮಾಧು ಸ್ವಾಮಿ, ‘ನಾಳೆ ಧ್ವಜಾರೋಹಣ ಮುಗಿಸಿ ಬಂದು ರಾಜೀನಾಮೆ ಕೊಡುತ್ತೇನೆ. ಆಗಲೇ ನನ್ನ ಮುಂದಿನ ನಿಲುವು ಪ್ರಕಟಿ ಸುತ್ತೇನೆ. ಮಂತ್ರಿಯಾಗಿ ನನಗೇನೂ ಆಗಬೇಕಾಗಿಲ್ಲ’ ಎಂದು ಕಠಿಣವಾಗಿ ನುಡಿದರು ಎಂದು ಮೂಲಗಳು ಹೇಳಿವೆ.

‘ಈ ರೀತಿ ಅವಮಾನ ಸಹಿಸಿ ಕೊಂಡು ಇರುವುದಕ್ಕಿಂತ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದೇ ಲೇಸು’ ಎಂಬುದಾಗಿ ತಮ್ಮ ಆಪ್ತರ ಬಳಿ ಮಾಧುಸ್ವಾಮಿ ಹೇಳಿದರು ಎನ್ನಲಾಗಿದೆ.

ಅಸಮಾಧಾನಗೊಂಡಿದ್ದ ಆನಂದ್‌ಸಿಂಗ್‌, ‘ನಾನು ಸಚಿವನಾಗಬೇಕು ಎಂದು ಬಯಸಿ ಬಿಜೆಪಿಗೆ ಬಂದಿಲ್ಲ. ವಿಜಯನಗರ ಜಿಲ್ಲೆ ರಚನೆ ಆಗಬೇಕು ಎಂಬ ಬೇಡಿಕೆ ಸೇರಿ
ಹಲವು ಬೇಡಿಕೆಗಳು ಈಡೇರಿವೆ. ಶಾಸಕ ನಾಗಿಯೂ ಮುಂದುವರಿಯುತ್ತೇನೆ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ನನ್ನ ಖಾತೆಗಳನ್ನು ಬೇರೆಯವರಿಗೆ ಕೊಟ್ಟರೂ ಸಂತೋಷ’ ಎಂದು ಹೇಳಿದ್ದರು.

ಸಚಿವ ಸಂಪುಟ ವಿಸ್ತರಣೆ ಆದಾಗ ಖಾತೆ ಬದಲಾವಣೆಯಿಂದ ಗೋಪಾಲಯ್ಯ ಮತ್ತು ನಾರಾಯಣಗೌಡ ಬೇಸರಗೊಂಡಿದ್ದರೆ, ತಮಗೆ ಸಿಕ್ಕಿದ ಖಾತೆಯ ಬಗ್ಗೆ ಎಂ.ಟಿ.ಬಿ ನಾಗರಾಜ್‌ ಅವರ ಅಸಮಾಧಾನಗೊಂಡಿದ್ದರು.

ಗೋಪಾಲಯ್ಯ ಮತ್ತು ಎಂ.ಟಿ.ಬಿ ಅವರ ಖಾತೆಗಳನ್ನು ಬದಲಿಸಿ ಸಮಾಧಾನಪಡಿಸಲಾಗಿದೆ.

ಶಾಸಕರ ಪ್ರತ್ಯೇಕ ಸಭೆಗೆ ಸಿದ್ಧತೆ

ಸಚಿವ ಸ್ಥಾನ ವಂಚಿತ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಕೆಲವು ಅತೃಪ್ತ ಶಾಸಕರ ಸಭೆ ಇದೇ ವಾರ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಶಾಸಕರಾದ ರಾಜುಗೌಡ, ಶಿವನಗೌಡ ನಾಯಕ್, ಶಿವರಾಜ ಪಾಟೀಲ, ಜಿ.ಎಚ್‌. ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಶಂಕರ ಪಾಟೀಲ ಮುನೇನಕೊಪ್ಪ, ಮಾಡಾಳು ವಿರೂಪಾಕ್ಷಪ್ಪ ಅವರು ಈ ಸಭೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘ಕೆಲವು ಸಚಿವರ ಒತ್ತಡಕ್ಕೆ ಮಣಿದು ಖಾತೆ ಬದಲಾವಣೆ ಮಾಡಲಾಗಿದೆ. ಇನ್ನೂ ಕೆಲವರು ಬ್ಲ್ಯಾಕ್‌ಮೇಲ್‌ ಮಾಡಿ ಸಂಪುಟಕ್ಕೆ ಸೇರಿದ್ದಾರೆ. ಇದರಿಂದ ಪಕ್ಷ ನಿಷ್ಠ ಶಾಸಕರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ವಲಸಿಗರ ಮಾತುಗಳಿಗೆ ಅತಿಯಾದ ಸ್ಪಂದನೆಯಿಂದ ಮೂಲ ಬಿಜೆಪಿ ಶಾಸಕರು ಮೂಲೆಗುಂಪಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗುವುದು’ ಎಂದು ಮೂಲಗಳು ವಿವರಿಸಿವೆ.


ಬದಲಾದ ಖಾತೆಗಳು

ಜೆ.ಸಿ.ಮಾಧುಸ್ವಾಮಿ;ಸಣ್ಣ ನೀರಾವರಿ

ಸಿ.ಪಿ.ಯೋಗೇಶ್ವರ್; ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ

ಆನಂದ್‌ ಸಿಂಗ್‌;ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌

ಡಾ.ಕೆ.ಸುಧಾಕರ್‌; ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ

***

ಖಾತೆಗಳ ಬದಲಾವಣೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ತೀರ್ಮಾನವೇ ಅಂತಿಮ

- ಆರ್‌.ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT