ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ವಾರಾಂತ್ಯದಲ್ಲೂ ಲಾಕ್‌ಡೌನ್ ಪ್ರಸ್ತಾವ ಇಲ್ಲ- ಬಿ.ಎಸ್. ಯಡಿಯೂರಪ್ಪ

Last Updated 14 ಏಪ್ರಿಲ್ 2021, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ನಿಯಂತ್ರಣಕ್ಕೆ ವಾರಾಂತ್ಯ ಲಾಕ್‌ಡೌನ್‌ ಅಥವಾ ಕರ್ಫ್ಯೂ ವಿಧಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಅದನ್ನು ಜಾರಿ ಮಾಡದೆಯೇ ಮತ್ತ‌ಷ್ಟು ಬಿಗಿ ಕ್ರಮ ಕೈಗೊಳ್ಳಲಾಗು
ವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸುದ್ದಿಗಾರರ ಜತೆ ಬುಧವಾರ ಬೆಳಿಗ್ಗೆ ಮಾತನಾಡಿದ ಅವರು, ‘ಕೋವಿಡ್‌ ಬಗ್ಗೆ ಚರ್ಚಿಸಲು ಇದೇ 18ರಂದು ಸರ್ವಪಕ್ಷಗಳ ನಾಯಕರ ಸಭೆ ಕರೆಯಲಾಗಿದೆ. ಲಾಕ್‌ಡೌನ್ ಹೇರುವುದನ್ನು ಬಿಟ್ಟು ಉಳಿದ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಮಹಾರಾಷ್ಟ್ರ
ದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಚರ್ಚಿಸುತ್ತೇವೆ’ ಎಂದು ಹೇಳಿದರು.

‘ಈಗಾಗಲೇ ಏಳು ಜಿಲ್ಲೆಗಳ ನಗರಗಳು ಮತ್ತು ಮಣಿಪಾಲದಲ್ಲಿ ಏಪ್ರಿಲ್‌ 20ರವರೆಗೆ ರಾತ್ರಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ಅಗತ್ಯಬಿದ್ದರೆ ಅದನ್ನು ವಿಸ್ತರಿಸುವ ಮತ್ತು ಇನ್ನೂ 2–3 ಜಿಲ್ಲೆಗಳಲ್ಲಿ ರಾತ್ರಿ ಕರ್ಪ್ಯೂ ವಿಧಿಸುವ ಕುರಿತು ಚಿಂತನೆ ನಡೆಸಲಾಗುವುದು’ ಎಂದೂ ಅವರು ಹೇಳಿದರು.

ಗುಂಪುಗೂಡುವಿಕೆಗೆ ಕಡಿವಾಣ

‘ಕೊರೊನಾ ನಿಯಂತ್ರಿಸಲು ಜನರು ಅನಾವಶ್ಯಕವಾಗಿ ಗುಂಪು ಸೇರುವುದನ್ನು ನಿಲ್ಲಿಸಬೇಕು. ಜನ ಸೇರುವ ಸ್ಥಳಗಳಲ್ಲಿ ಕಡಿವಾಣ ಹಾಕಲು ನಿರ್ಧರಿಸಿದ್ದೇವೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಆ ಎಲ್ಲ ವಿಚಾರಗಳನ್ನು ತಿಳಿಸುತ್ತೇವೆ’ ಎಂದರು.

‘ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಸಿದ್ಧ ಮಾಡುತ್ತಿದ್ದೇವೆ. ಲಸಿಕೆ ಹೆಚ್ಚಳ ಮಾಡುತ್ತಿದ್ದೇವೆ. ಕೊರೊನಾ ನಿಯಂತ್ರಣ ಕೇವಲ ಸರ್ಕಾರ ಮಾಡುವ ಕೆಲಸ ಅಲ್ಲ. ಮಹಾರಾಷ್ಟ್ರದಲ್ಲಿ ಕೂಡಾ ಬಹಳಷ್ಟು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾದಿಂದ ಸಾವಿಗೀಡಾಗುವವರ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳಬೇಕಿದೆ’ ಎಂದರು.

45 ವರ್ಷದೊಳಗಿನವರಿಗೂ ಲಸಿಕೆ: ಡಿವಿಎಸ್‌

ಕೋವಿಡ್‌ ಲಸಿಕೆಯನ್ನು 45 ವರ್ಷ ವಯಸ್ಸಿನೊಳಗಿನವರಿಗೂ ನೀಡಲು ತಯಾರಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 2 ನೇ ಡೋಸ್ ಲಸಿಕೆ ಹಾಕಿಸಿಕೊಂಡ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈವರೆಗೆ 22 ಕೋಟಿ ಡೋಸ್‌ ಲಸಿಕೆ ಉತ್ಪಾದನೆ ಮಾಡಲಾಗಿದೆ. ಸುಮಾರು 12 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌ ವಿ ಲಸಿಕೆಯನ್ನೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಲಸಿಕೆ ಅಭಿಯಾನವನ್ನು ಇನ್ನಷ್ಟು ವೇಗವಾಗಿ ಮತ್ತು ವ್ಯಾಪಕವಾಗಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಲಸಿಕೆ ಉತ್ಪಾದನೆ ಹೆಚ್ಚಿಸಲು ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಇನ್ನಷ್ಟು ಓದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT