ಗುರುವಾರ , ಜೂನ್ 17, 2021
28 °C

ಬ್ರಾಹ್ಮಣ ಮಹಿಳೆಯ ಅಂತ್ಯಸಂಸ್ಕಾರ ಮಾಡಿದ ಸಂಸದ ನಾಸೀರ್ ಹುಸೇನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ನಿಂದ ನಿಧನರಾದ ಬ್ರಾಹ್ಮಣ ಮಹಿಳೆಯೊಬ್ಬರ ಅಂತಿಮ ವಿಧಿವಿಧಾನ ನಡೆಸಲು ಕುಟುಂಬದವರು ಯಾರೂ ಇಲ್ಲವೆಂದು ತಿಳಿದಾಗ, ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಸಯ್ಯದ್ ನಾಸೀರ್ ಹುಸೇನ್ ತಾವೇ ಮುಂದೆ ನಿಂತು ಆ ಕೆಲಸ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿದ್ದ ತಮಿಳುನಾಡಿನ ಪ್ರೊ. ಸಾವಿತ್ರಿ ವಿಶ್ವನಾಥನ್ ಅವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದ ಪ್ರಕಾರ ನಡೆಸಿದ ಸಯ್ಯದ್ ನಾಸೀರ್ ಹುಸೇನ್‌, ಬಳಿಕ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆಯ ವಿಧಿವಿಧಾನಗಳನ್ನೂ ಮಾಡಿದ್ದಾರೆ. ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬಗ್ಗೆ ಮಾತನಾಡಿದ ಅವರು, ‘ನಾನು ದೆಹಲಿ ವಿಶ್ವವಿದ್ಯಾಲಯದಲ್ಲಿದ್ದಾಗಲೇ ಪ್ರೊ. ಸಾವಿತ್ರಿ ವಿಶ್ವನಾಥನ್‌ ಪರಿಚಿತರು. ಅವರ ಕುಟುಂಬ ಮತ್ತು ನಮ್ಮ ಕುಟುಂಬ ಅನ್ಯೋನ್ಯವಾಗಿತ್ತು. ಈಗಲೂ ಅಷ್ಟೆ. ತಮಿಳ್‌ ಬ್ರಾಹ್ಮಿಣ್‌ ಕುಟುಂಬದಿಂದ ಬಂದ ಅವರು ದೆಹಲಿ ವಿಶ್ವವಿದ್ಯಾಲಯದ ಜಪಾನೀಸ್ ಮತ್ತು ಚೈನೀಸ್‌ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ನಿವೃತ್ತಿಯ ಬಳಿಕ ತಂಗಿ ಮಹಾಲಕ್ಷ್ಮಿ ಅತ್ರೇಯಿ ಜೊತೆ 90ರ ದಶಕದ ಮಧ್ಯಭಾಗದಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದರು’ ಎಂದರು.

‘ಜಪಾನ್‌– ಇಂಡಿಯಾದ ಪ್ರಮುಖರ ಗುಂಪಿನ ಸದಸ್ಯೆಯಾಗಿದ್ದ (2000–2002) ಪ್ರೊ. ಸಾವಿತ್ರಿ ಅವರು, ಜಪಾನ್‌ ಜೊತೆಗಿನ ದ್ವಿಪಕ್ಷೀಯ ಮಾತುಕತೆಗಳ ಸಂದರ್ಭದಲ್ಲಿ ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಜೊತೆಗೂ ಭಾಗವಹಿಸಿದ್ದಾರೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು’

‘ಪ್ರೊ. ಸಾವಿತ್ರಿ ವಿಶ್ವನಾಥನ್ ಮತ್ತು ಅವರ ತಂಗಿಗೆ ಕೋವಿಡ್‌ ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೇ 5ರಂದು ಸಾವಿತ್ರಿ ನಿಧನರಾದರು. ಆಸ್ಪತ್ರೆಯಲ್ಲಿ ದಾಖಲಾದ ದಿನಗಳಿಂದ ಅವರ ಆರೋಗ್ಯವನ್ನು ದಿನಾ ಗಮನಿಸುತ್ತಿದ್ದೆ. ನಿಧನರಾದ ಸುದ್ದಿ ಗೊತ್ತಾದ ತಕ್ಷಣ ಬಿಬಿಎಂಪಿ ಮೂಲಕ ಅವರ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನಾನೇ ಮಾಡಿದೆ. ತಮಿಳುನಾಡು ಮತ್ತು ಹೊರದೇಶಗಳಲ್ಲಿ (ಸಿಂಗಪುರ, ಲಂಡನ್) ಅವರ ಸಂಬಂಧಿಕರಿದ್ದಾರೆ. ಆದರೆ, ಕೋವಿಡ್‌ ಕಾರಣದಿಂದ ಅವರಿಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, 11ನೇ ದಿನ ಮೃತರ ಅಸ್ಥಿ ವಿಸರ್ಜನೆಯ ವಿಧಿವಿಧಾನಗಳನ್ನೂ ನಾನೇ ನೆರವೇರಿಸಿದೆ’ ಎಂದು ಭಾವುಕರಾದರು.

‘ಇದೇನೂ ಹೊಸತಲ್ಲ. ಅದೆಷ್ಟೋ ಹಿಂದೂ ಮೃತದೇಹಗಳ ಅಂತಿಮ ಕ್ರಿಯೆಯನ್ನು ಮುಸ್ಲಿಮರು, ಮುಸ್ಲಿಮರ ಅಂತಿಮ ವಿಧಿವಿಧಾನಗಳನ್ನು ಹಿಂದೂಗಳು, ಮೃತರ ಧರ್ಮ, ಸಂಪ್ರದಾಯಗಳಿಗೆ ಅನುಗುಣವಾಗಿ ಈ ಹಿಂದೆಯೂ ಮಾಡಿದ್ದಾರೆ. ಅಂಥದ್ದೇ ಮಾನವೀಯ ಕೆಲಸವನ್ನು ನಾನೂ ಮಾಡಿದ್ದೇನೆ.ಮಾನವೀಯ ಧರ್ಮವಿದು’ ಎಂದು ಸಯ್ಯದ್‌ ನಾಸೀರ್ ಹುಸೇನ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು