ಕರ್ನಾಟಕದಲ್ಲಿ ನಾಲ್ಕು ಲಕ್ಷದತ್ತ ಕೋವಿಡ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ 9,319 ಮಂದಿ ಕೋವಿಡ್ ಪೀಡಿತರಾಗಿರುವುದು ಭಾನುವಾರ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 4 ಲಕ್ಷದತ್ತ (3.98 ಲಕ್ಷ) ದಾಪುಗಾಲು ಇರಿಸಿದೆ.
ರಾಜ್ಯದಲ್ಲಿ ಪ್ರಥಮ ಕೋವಿಡ್ ಪ್ರಕರಣ ಮಾರ್ಚ್ 8ರಂದು ವರದಿಯಾಗಿತ್ತು. ಬಳಿಕ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ತಲುಪಲು 108 ದಿನಗಳು ತಗುಲಿದ್ದವು.
ನಂತರದ ದಿನಗಳಲ್ಲಿ ಸೋಂಕಿತರ ಸಂಖ್ಯೆ ಏರುಗತಿಪಡೆದ ಪರಿಣಾಮ ಕೇವಲ 20 ದಿನಗಳಲ್ಲಿಯೇ ಮತ್ತೊಂದು ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಅಂದರೆ, ಜುಲೈ 13ಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟಿತ್ತು. ಆ. 26ಕ್ಕೆ ಸೋಂಕಿತರ ಸಂಖ್ಯೆ 3 ಲಕ್ಷ ತಲುಪಿತ್ತು.
ಮುಂದಿನ 98 ಸಾವಿರ ಪ್ರಕರಣಗಳು 11 ದಿನಗಳಲ್ಲಿ ವರದಿಯಾಗಿದ್ದು, ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 8,909 ಪ್ರಕರಣಗಳು ದೃಢಪಟ್ಟಿವೆ.
ರಾಜ್ಯದಲ್ಲಿ ಸದ್ಯ ಸೋಂಕು ದೃಢ ಪ್ರಮಾಣ ಶೇ 11.87ರಷ್ಟಿದೆ. ಈ ತಿಂಗಳ ಆರು ದಿನಗಳಲ್ಲಿಯೇ 56,128 ಪ್ರಕರಣಗಳು ವರದಿಯಾಗಿವೆ. ಪ್ರತಿನಿತ್ಯ ಸರಾಸರಿ 9,354 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಕೋವಿಡ್ ಪೀಡಿತರಲ್ಲಿ ಮತ್ತೆ 95 ಮಂದಿ ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 6,393ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಅಧಿಕ ಮರಣ ಪ್ರಕರಣಗಳು ವರದಿಯಾದ ರಾಜ್ಯಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕ, ಸೋಂಕಿತರು ಹಾಗೂ ಗುಣಮುಖರ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ.
3 ಲಕ್ಷದತ್ತ ಗುಣಮುಖರು: ರಾಜ್ಯದಲ್ಲಿ ಒಂದೇ ದಿನ 35,073 ಆ್ಯಂಟಿಜೆನ್ ಸೇರಿದಂತೆ 74,384 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.
ಈವರೆಗೆ ಕೋವಿಡ್ ಪರೀಕ್ಷೆಗೆ ಒಳಪಟ್ಟವರ ಸಂಖ್ಯೆ 33.48 ಲಕ್ಷ ತಲುಪಿದೆ.
ರಾಜ್ಯದಲ್ಲಿರುವ 603 ಜ್ವರ ಚಿಕಿತ್ಸಾಲಯಗಳಲ್ಲಿ ಈವರೆಗೆ 24.82 ಲಕ್ಷ ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ 4,540 ಮಂದಿ ಸೇರಿದಂತೆ ರಾಜ್ಯದಲ್ಲಿ ಮತ್ತೆ 9,575 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 3 ಲಕ್ಷದ ಗಡಿ (2.92 ಲಕ್ಷ) ಸಮೀಪಿಸಿದೆ.
99,266 ಸೋಂಕಿತರು ಸದ್ಯ ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಹೊಸದಾಗಿ 2,824 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1.47 ಲಕ್ಷ ದಾಟಿದೆ.
ಮೈಸೂರಿನಲ್ಲಿ ಮತ್ತೆ 686 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 22 ಸಾವಿರಕ್ಕೆ ತಲುಪಿದೆ. ಬೆಳಗಾವಿಯಲ್ಲಿ 427 ಮಂದಿ ಸೋಂಕಿತರಾಗಿದ್ದಾರೆ.
ಬಳ್ಳಾರಿ (396), ಶಿವಮೊಗ್ಗ (329), ದಕ್ಷಿಣ ಕನ್ನಡ (326), ಹಾಸನ (324), ಧಾರವಾಡ (311), ತುಮಕೂರು (304) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.