ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಝಿಲ್‌ ಹತ್ಯೆ ಪ್ರಕರಣ: ಕಾರು ನೀಡಿದ ವ್ಯಕ್ತಿ ಬಂಧನ– ಹಂತಕರ ಸುಳಿವು ಪತ್ತೆ

Last Updated 31 ಜುಲೈ 2022, 20:15 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿಗೆ ಸಮೀಪದ ಸುರತ್ಕಲ್ ನಲ್ಲಿ ಗುರುವಾರ ನಡೆದ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಪಾಝಿಲ್ (23) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಆತನ ನೀಡಿದ ಮಾಹಿತಿ ಆಧಾರದಲ್ಲಿ ಹಂತಕರ ಬಗ್ಗೆ ಪೊಲೀಸರಿಗೆ ಖಚಿತ ಸುಳಿವು ಸಿಕ್ಕಿದ್ದು, ಅವರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಕೃತ್ಯಕ್ಕೆ ಬಳಕೆಯಾದ ಹ್ಯುಂಡೈ ಇಯಾನ್‌ ಕಾರಿನ ಮಾಲೀಕ ಅಜಿತ್ ಕ್ರಾಸ್ತ ಎಂದು ಗುರುತಿಸಲಾಗಿದೆ. ಆರೋಪಿಯ ಬಂಧನವನ್ನು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ 'ಪ್ರಜಾವಾಣಿ'ಗೆ ಖಚಿತಪಡಿಸಿದರು.

ಆರೋಪಿಯು ಮಂಗಳೂರು ಪೊಲೀಸರ ವಶದಲ್ಲಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಕಸ್ಟಡಿಗೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಆರೋಪಿಯ ಬಂಧನದ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌, ‘ಕೃತ್ಯಕ್ಕೆ ಬಳಸಿದ್ದ ಬಿಳಿ ಬಣ್ಣದ ಹ್ಯುಂಡೈ ಇಯಾನ್‌ ಕಾರು ಹಾದು ಹೋಗಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಕೃತ್ಯಕ್ಕೆ ಬಳಸಿದ ಕಾರಿನ ಮಾಲೀಕನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ತನ್ನಿಂದ ಕಾರನ್ನು ಕೊಂಡೊಯ್ದವರು ಯಾರು ಎಂಬುದೂ ಸೇರಿದಂತೆ ವಿಚಾರಣೆ ವೇಳೆ ಕೆಲವು ವಿಚಾರಗಳನ್ನು ಆತ ತಿಳಿಸಿದ್ದಾನೆ’ ಎಂದರು.

‘ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆಯುತ್ತೇವೆ. ಸದ್ಯಕ್ಕೆ ಮಾಲೀಕನಿಂದ ಹ್ಯುಂಡೈ ಕಾರನ್ನು ತೆಗೆದುಕೊಂಡು ಹೋದವರು ಯಾರು ಎಂಬುದು ಖಚಿತವಾಗಿದೆ. ಕೃತ್ಯದಲ್ಲಿ ಯಾರು ನೇರವಾಗಿ ಭಾಗಿಯಾಗಿದ್ದಾರೆ ಎಂಬ ಕುರಿತ ಮಾಹಿತಿ ಹೆಚ್ಚಿನ ವಿಚಾರಣೆ ಬಳಿಕವಷ್ಟೇ ಸಿಗಲಿದೆ. ಆರೋಪಿ ನೀಡುವ ಮಾಹಿತಿ ಆಧಾರದಲ್ಲಿ ಇನ್ನು ಕೆಲವು ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಂಡಿದ್ದೇವೆ. ಕೆಲವೊಂದು ಮಾಹಿತಿಗಳನ್ನು ಈ ಹಂತದಲ್ಲಿ ಬಹಿರಂಗಪಡಿಸಲು ಸಾಧ್ಯವಾಗದು’ ಎಂದು ಪ‍್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವಶಕ್ಕೆ ಪಡೆದ ಆರೋಪಿಯ ಬಳಿ ಕಾರು ಹಾಗೂ ಎರಡು ಲಾರಿಗಳಿವೆ. ಈ ವಾಹನಗಳನ್ನು ಬೇರೆಯವರಿಗೆ ಬಾಡಿಗೆಗೆ ಕೊಡುತ್ತಿದ್ದ. ಕೊಲೆಯ ಆರೋಪಿಗಳಲ್ಲಿ ಒಬ್ಬ ಈ ಕಾರಿನ ಮಾಲೀಕನ ಜೊತೆ ಈ ಹಿಂದೆಯೂ ಸಂಪರ್ಕದಲ್ಲಿದ್ದ. ಈ ಹಿಂದೆಯೂ ಅನೇಕ ಸಲ ಕಾರನ್ನು ಕೊಂಡೊಯ್ದಿದ್ದ. ಕೃತ್ಯಕ್ಕೆ ಬಳಕೆಯಾದ ಕಾರು ಇನ್ನೂ ಪತ್ತೆಯಾಗಿಲ್ಲ. ಅದನ್ನು ಕೊಂಡೊಯ್ದವರು ಮಾಲೀಕನಿಗೆ ಕಾರನ್ನು ಮರಳಿಸಿಲ್ಲ. ಕಾರು ಆರೋಪಿಗಳ ಬಳಿ ಇರಬಹುದು. ಆರೋಪಿ ಹಾಗೂ ಕಾರು ಮಾಲೀಕನ ನಡುವೆ ಮಾತುಕತೆ ನಡೆದಿದೆ. ಜಾಸ್ತಿ ಬಾಡಿಗೆ ಕೊಡುತ್ತೀವೆ ಎಂದು ಹೇಳಿ ಆರೋಪಿಗಳು ಕಾರನ್ನು ಪಡೆದಿದ್ದರು. ಈಗ ಕೃತ್ಯಕ್ಕೆ ಬಳಸಿದ ಕಾರಿನ ಮಾಲೀಕ ಪತ್ತೆಯಾಗಿದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚುವುದು ಸುಲಭ’ ಎಂದರು.

‘ಕೊಲೆ ನಡೆದಾಗ ಹತ್ತಾರು ಆಯಾಮಗಳಲ್ಲಿ ತನಿಖೆ ಮಾಡಬೇಕಾಗುತ್ತದೆ. ಹಾಗಾಗಿ ನಗರದ ಬೇರೆ ಬೇರೆ ಕಡೆ ಸಿಟಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಕಾರಿನ ಮಾಲೀಕರನ್ನು ಪತ್ತೆ ಹಚ್ಚುವ ಪ್ರಯತ್ನಕ್ಕೆ ಮುಂದಾಗಿದ್ದೆವು. ಬೇರೆ ಬೇರೆ ಕಡೆ ಸಿಕ್ಕಿರುವ ದೃಶ್ಯಗಳಲ್ಲಿ ಕಾರಿನ ನಂಬರ್‌ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹಾಗಾಗಿ ಕಾರಿನ ಮಾದರಿಯನ್ನು ಆಧರಿಸಿ ವಿವರ ಕಲೆ ಹಾಕಿದ್ದೆವು. ಅದರ ಆಧಾರದಲ್ಲಿ ಶನಿವಾರ ಸಂಜೆಯಿಂದ 13 ಕಾರುಗಳ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಮಹಮ್ಮದ್‌ ಫಾಝಿಲ್‌ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸುವಾಗ ಆರಂಭದಲ್ಲಿ ನಾಲ್ವರನ್ನು, ನಂತರ 21 ಮಂದಿಯನ್ನು, ಬಳಿಕ 16 ಮಂದಿ ಸೇರಿ 51ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಕೃತ್ಯಕ್ಕೆ ಸಂಬಂಧ ಇಲ್ಲ ಎಂದು ಖಚಿತವಾದವರನ್ನು ಬಿಟ್ಟುಕಳುಹಿಸಿದ್ದೇವೆ’ ಎಂದರು.

ದ್ವೇಷ ಸಂದೇಶ: ಐದು ಎಫ್‌ಐಆರ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವಂತಹ ಸಂದೇಶಗಳನ್ನು ಹರಿಯಬಿಡುತ್ತಿರುವವರ ವಿರುದ್ಧ ನಗರ ಪೊಲೀಸ್‌ ಕಮಿಷನರೇಟ್‌ನ ಸಾಮಾಜಿಕ ಜಾಲತಾಣ ಕೋಶ ಹದ್ದಿನ ಕಣ್ಣಿಟ್ಟಿದೆ. ಐದು ಆಕ್ಷೇಪಾರ್ಹ ಸಂದೇಶಗಳನ್ನು ಗುರುತಿಸಿ ಸೈಬರ್‌, ಆರ್ಥಿಕ ಮತ್ತು ಮಾದಕ ವಸ್ತುಗಳಿಗೆ ಸಂಬಂಧಿಸಿದ (ಸೆನ್‌) ಅಪರಾಧಗಳ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಡಳಿತ ಶನಿವಾರ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದರು.

‘ದ್ವೇಷ ಹಬ್ಬಿಸುವ ಅಥವಾ ಆಕ್ಷೇಪಾರ್ಹ ಸಂದೇಶಗಳನ್ನು ಹಂಚಿಕೊಳ್ಳುವವರ ಮೇಲೆ ನಿಗಾ ಇಟ್ಟಿದ್ದೇವೆ. ಇಂಥ ಸಂದೇಶಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ’ ಎಂದು ನಗರ ಪೊಲೀಸ್‌ ಕಮಿನಷರ್‌ ಎನ್‌.ಶಶಿಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT