ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಕ್ಕೇರಿ ವಿಧಾನಸಭಾ ಕ್ಷೇತ್ರ | ಅನುಕಂಪದ ಅಲೆಯೋ, ಅನುಭವಕ್ಕೆ ಬೆಲೆಯೋ?

ಉಮೇಶ ಕತ್ತಿ ಅಗಲಿಕೆ ಬಳಿಕ ಶೂನ್ಯ ಆವರಿಸಿದ ಹುಕ್ಕೇರಿ ವಿಧಾನಸಭಾ ಕ್ಷೇತ್ರ
Last Updated 28 ಮಾರ್ಚ್ 2023, 3:14 IST
ಅಕ್ಷರ ಗಾತ್ರ

ಹುಕ್ಕೇರಿ: ಉತ್ತರ ಕರ್ನಾಟಕದ ಅತ್ಯಂತ ಗಟ್ಟಿ ಧ್ವನಿ ಎಂದೇ ಹೆಸರಾಗಿದ್ದ ಉಮೇಶ ಕತ್ತಿ ಅವರ ಅಕಾಲಿಕ ಅಗಲಿಕೆಯಿಂದ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಖಾಲಿಖಾಲಿ ಎನಿಸುತ್ತಿದೆ. ಕತ್ತಿ ಕುಟುಂಬಕ್ಕೆ ನಿಷ್ಠರಾದ ಮತದಾರರನ್ನು ಸೆಳೆದು ಹೊಸ ಮುಖ ಗೆಲ್ಲುವುದೋ ಅಥವಾ ವಂಶವಾಹಿ ಪರಂಪರೆ ಮುಂದುವರಿಯುವುದೋ ಎಂಬುದೇ ಈಗಿರುವ ಕುತೂಹಲ.

‘ಉಮೇಶ ಕತ್ತಿ ಅಗಲಿಕೆಯಿಂದ ಅನುಕಂಪದ ಮತಗಳನ್ನು ಪಡೆದು ಗೆಲ್ಲುವ ಅವಶ್ಯಕತೆ ಇಲ್ಲ. ಕತ್ತಿ ಕುಟುಂಬಕ್ಕೇ ಸಾಂ‍ಪ್ರದಾಯಿಕ ಮತಗಳಿವೆ. ಕುಟುಂಬದಲ್ಲಿ ಯಾರು ನಿಂತರೂ ಜನ ಬೆಂಬಲಿಸುತ್ತಾರೆ’ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಕುಟುಂಬದಲ್ಲೇ ಸ್ಪರ್ಧೆ:

ನಿರೀಕ್ಷೆಯಂತೆ, ಉಮೇಶ ಕತ್ತಿ ಅವರ ಹಿರಿಯ ಪುತ್ರ ನಿಖಿಲ್‌ ಅಖಾಡಕ್ಕೆ ಇಳಿದಿದ್ದಾರೆ. ತಂದೆಯ ವಾರಸುದಾರಿಕೆ ಮುಂದುವರಿ ಸುವ ಉಮೇದಿನಲ್ಲಿದ್ದಾರೆ. ಬಿಜೆಪಿಯಿಂದ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಉಮೇಶ ಅವರ ಪತ್ನಿ ಸುಶೀಲಾ ಕೂಡ ಪುತ್ರನಿಗೇ ಟಿಕೆಟ್‌ ಕೊಡಬೇಕು ಎಂದು ಹಟ ಹಿಡಿದಿದ್ದಾರೆ.

ಇಂಗ್ಲೆಂಡ್‌ನಲ್ಲಿ ಎಂಬಿಎ ಪದವಿ ಮುಗಿಸಿರುವ ನಿಖಿಲ್‌ ತಂದೆಯ ಗರಡಿಯಲ್ಲೇ ಪಳಗಿದ್ದಾರೆ. ಒಂದು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಸದ್ಯ ಹಿರಾ ಶುಗರ್‌ ಕಾರ್ಖಾನೆಯ ಚೇರ್ಮನ್‌ ಆಗಿದ್ದು, ಅವರಿಗೆ ಅನುಕೂಲವಾಗಲಿದೆ ಎನ್ನುವುದು ಲೆಕ್ಕಾಚಾರ.

ಅಣ್ಣನಿಂದ ತೆರವಾದ ಕ್ಷೇತ್ರದಲ್ಲಿ ತಮಗೇ ಟಿಕೆಟ್‌ ಕೊಡಬೇಕು ಎಂಬ ಬೇಡಿಕೆ ರಮೇಶ ಕತ್ತಿ ಅವರದು. ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ, ಒಂದು ಬಾರಿ ಸಂಸದರಾಗಿ ರಾಜಕೀಯದಲ್ಲೂ ಅವರು ಅಣ್ಣನಂತೆಯೇ ಛಾಪು ಮೂಡಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಫಜೀತಿ ಬಂದಿರುವುದು ಮತದಾರರಿಗೆ.

ಈ ಸಹೋದರರಿಗೆ ನಿಷ್ಠರಾದ ದೊಡ್ಡ ‍ಪಡೆಯೇ ಹುಕ್ಕೇರಿ ಕ್ಷೇತ್ರದಲ್ಲಿದೆ. ನಿಖಿಲ್‌ ಬೆಂಬಲಿಸಲು ಎಷ್ಟು ಜನರಿದ್ದಾರೋ, ರಮೇಶ ಅವರ ಬೆಂಬಲಕ್ಕೂ ಅಷ್ಟೇ ಜನರಿದ್ದಾರೆ. ಅವರವರ ಬೆಂಬಲಿ ಗರಲ್ಲಿ ಮಾತ್ರ ತಮ್ಮ ನಾಯಕನಿಗೇ ಟಿಕೆಟ್‌ ಸಿಗುತ್ತದೆ ಎಂಬ ಭರವಸೆ ಮೂಡಿದೆ.

ಮಾಜಿ ಸಚಿವ ಶಶಿಕಾಂತ ನಾಯಿಕ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಕೂಡ ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಇಬ್ಬರಿಗೂ ಆರ್‌ಎಸ್‌ಎಸ್‌ ಕೃಪಾ ಶೀರ್ವಾದ ಇರುವ ಕಾರಣ ಹಗುರವಾಗಿ ಪರಿಗಣಿಸುವಂತಿಲ್ಲ ಎನ್ನುವುದು ಕ್ಷೇತ್ರದ ಜನರ ಅನಿಸಿಕೆ.

ಎ.ಬಿ.ಪಾಟೀಲ ತಂತ್ರ ಏನು?:

ಸಂಕೇಶ್ವರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿ, ಎರಡು ಬಾರಿ ಸಚಿವರಾದವರು ಎ.ಬಿ.ಪಾಟೀಲ. ತಮ್ಮ ಹಿರಿತನದ ಅನುಭವವನ್ನು ಈ ಬಾರಿ ಒರೆಗೆ ಹಚ್ಚಲು ಮುಂದಾಗಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಟಿಕೆಟ್‌ ಕೂಡ ಅವರಿಗೆ ಸಿಕ್ಕಿದೆ.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಆದ ಬಳಿಕ ಸಂಕೇಶ್ವರ ಕ್ಷೇತ್ರವು ಒಡೆದು ಯಮಕನಮರಡಿ ಹಾಗೂ ಹುಕ್ಕೇರಿ ಕ್ಷೇತ್ರಗಳಲ್ಲಿ ಸೇರಿತು. ಆ ವರ್ಷ ಎ.ಬಿ. ಪಾಟೀಲ ಕಣಕ್ಕಿಳಿಯಲಿಲ್ಲ. ಆದರೆ, 2013 ಹಾಗೂ 2018ರಲ್ಲಿ ಹುಕ್ಕೇರಿಯಿಂದಲೇ ಸ್ಪರ್ಧಿಸಿ ಉಮೇಶ ಕತ್ತಿ ವಿರುದ್ಧ ಸೋಲುಂಡರು.

ಈಗ ಆ ವರ್ಚಸ್ಸಿನ ನಾಯಕ ಇಲ್ಲ. ಇದನ್ನು ತಮ್ಮ ರಾಜಕೀಯ ದಾಳಕ್ಕೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಎ.ಬಿ.ಪಾಟೀಲ ಅವರ ಸಾಮರ್ಥ್ಯ ನಿಂತಿದೆ.

ಪಂಚಮಸಾಲಿ ಸಮುದಾಯದ ವರಾದ ‘ಎಬಿ‍ಪಿ’ ಅವರು 2ಎ ಮೀಸ ಲಾತಿ ಹೋರಾಟದಲ್ಲಿ ಮುಂಚೂಣಿಯ ಲ್ಲಿದ್ದಾರೆ. ಬೃಹತ್‌ ಸಮಾವೇಶ ಮಾಡಿಸಿ ಮತಗಳನ್ನು ಒಟ್ಟುಗೂಡಿಸುವ ಯತ್ನ ಮಾಡಿದ್ದಾರೆ.

ಕಾಂಗ್ರೆಸ್‌ನಿಂದ ಬಂಡಾಯ ಅಥವಾ ಒಳಬೇಗುದಿಯ ಯಾವುದೇ ಲಕ್ಷಣ ಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಹೀಗಾಗಿ, ‘ಎಬಿಪಿ’ ಹಾಗೂ ಕಾಂಗ್ರೆಸ್‌ ಕಾರ್ಯ ಕರ್ತರ ಹುಮ್ಮಸ್ಸು ದು‍ಪ್ಪಟ್ಟಾಗಿದೆ.

ಧಾಡಸಿತನದ ನಾಯಕನಿಲ್ಲದೇ...

ಜನತಾ ಪಕ್ಷ, ಜೆಡಿಯು, ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಹೀಗೆ ಎಲ್ಲ ಪಕ್ಷಗಳಿಂದಲೂ ಕಣಕ್ಕಿಳಿದು ಗೆದ್ದವರು ಉಮೇಶ ಕತ್ತಿ. ಅವರ ತಂದೆ ವಿಶ್ವನಾಥ ಕತ್ತಿ ವಿಧಾನಸಭೆಯಲ್ಲೇ ಹೃದಯಾಘಾತದಿಂದ ನಿಧನರಾದರು. ಪರಿಣಾಮ, ತಮ್ಮ 25ನೇ ವಯಸ್ಸಿಗೇ ಉಮೇಶ ಕತ್ತಿ ವಿಧಾನಸಭೆ ಪ್ರವೇಶಿಸಿದರು.

ಬಳಿಕ ತಮ್ಮ ಧಾಡಸಿತನದಿಂದಲೇ ಉಮೇಶ ರಾಜಕೀಯವಾಗಿ ಬೆಳೆದರು. ತಮ್ಮ ನಾಯಕನ ಅಗಲಿಕೆ ಬೆಂಬಲಿಗರಲ್ಲಿ ಶೂನ್ಯಭಾವ ಸೃಷ್ಟಿಸಿದೆ.

‘ಹುಕ್ಕೇರಿಯಲ್ಲಿ ಉಮೇಶ ಕತ್ತಿ ಬಣ– ವಿರೋಧಿ ಬಣ ಮಾತ್ರ ಇವೆ. ಇಲ್ಲಿ ಯಾವುದೇ ಪಕ್ಷ ಲೆಕ್ಕಕ್ಕಿಲ್ಲ’ ಎಂಬ ಮಾತನ್ನು ಸ್ವತಃ ಉಮೇಶ ಅವರೇ ಹೇಳಿದ್ದನ್ನು ಸಹವರ್ತಿಗಳು ನೆನೆಯುತ್ತಾರೆ.

‘ಉತ್ತರ ಕರ್ನಾಟಕ’ ಪ್ರತ್ಯೇಕ ರಾಜ್ಯ ಮಾಡುತ್ತೇನೆ, ನಾನೇ ಮೊದಲ ಮುಖ್ಯಮಂತ್ರಿ ಆಗುತ್ತೇನೆ’ ಎನ್ನುವ ಮೂಲಕ ಉಮೇಶ ಕತ್ತಿ ಅವರು; ಇಡೀ ರಾಜ್ಯ ರಾಜಕಾರಣಕ್ಕೇ ಠಕ್ಕರ್‌ ಕೊಟ್ಟವರು. ಯಾವುದೇ ಪಕ್ಷಕ್ಕೂ, ಸಿದ್ಧಾಂತಕ್ಕೂ ಅಂಟಿಕೊಳ್ಳದ ಅವರು ತಮ್ಮ ವೈಯಕ್ತಿಕ ವರ್ಚಸ್ಸಿನಿಂದಲೇ ಸತತ ಎಂಟು ಬಾರಿ ಗೆದ್ದವರು. ನಾಲ್ಕು ಬಾರಿ ಸಚಿವರಾಗಿ ಛಾಪು ಮೂಡಿಸಿದವರು.

2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 800 ಮತಗಳಲ್ಲಿ ಸೋತಿದ್ದರು. ಆಗ ಬಿಜೆಪಿಯಿಂದ ಶಶಿಕಾಂತ ನಾಯಿಕ ಗೆದ್ದಿದ್ದರು.

16 ಬಾರಿ ಚುನಾವಣೆ..!

ಹುಕ್ಕೇರಿ ವಿಧಾನಸಭೆಗೆ 16 ಬಾರಿ ಚುನಾವಣೆ ನಡೆದಿದೆ. ಉಮೇಶ ಕತ್ತಿ ಅವರ ಕಾರಣಕ್ಕೆ ಎರಡು ಉಪಚುನಾವಣೆಗಳು ನಡೆದಿದ್ದು ವಿಶೇಷ. ಒಟ್ಟು 5 ಬಾರಿ ಕಾಂಗ್ರೆಸ್‌, 4 ಬಾರಿ ಬಿಜೆಪಿ, 2 ಬಾರಿ ಜನತಾ ಪಕ್ಷ, 2 ಬಾರಿ ಜನತಾದಳ, ಎನ್‌ಸಿಒ, ಜೆಡಿಯು, ಜೆಡಿಎಸ್‌ ತಲಾ ಒಂದೊಂದು ಬಾರಿ ಗೆಲುವು ಸಾಧಿಸಿವೆ. ಈ ಎಲ್ಲ ಪಕ್ಷಗಳಲ್ಲೂ ಉಮೇಶ ಕತ್ತಿ ಅವರೇ ಸ್ಪರ್ಧಿಸಿದ್ದರು ಎನ್ನವುದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT