ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಕಾಂಗ್ರೆಸ್ ಟೀಕೆ ಸವಾಲಾಗಿ ಸ್ವೀಕರಿಸುವೆ: ಕುಮಾರಸ್ವಾಮಿ

ಸಿಂಧನೂರಿನಲ್ಲಿ ‘ಪಂಚರತ್ನ ಯಾತ್ರೆ’: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ
Last Updated 29 ಜನವರಿ 2023, 16:23 IST
ಅಕ್ಷರ ಗಾತ್ರ

ಸಿಂಧನೂರು: ‘ಜೆಡಿಎಸ್ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಹೇಳುವ ಸುಳ್ಳುಗಳು ಮತ್ತು ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಜೆಡಿಎಸ್ ತರಲು ಶ್ರಮಿಸುತ್ತೇವೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಬರೀ ತಮ್ಮ ಒಳಜಗಳ, ಕಚ್ಚಾಟದ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ರೈತರ ಸಮಸ್ಯೆಗಳ ಬಗ್ಗೆ ಎಂದೂ ಮಾತಾಡಿಲ್ಲ. ಕೇಂದ್ರದ ಗೃಹ ಸಚಿವ ಅಮಿತ್‍ ಶಾ ಅವರು ಹುಬ್ಬಳ್ಳಿ ಸೇರಿ ರಾಜ್ಯದ ಹಲವೆಡೆ ಪ್ರವಾಸ ಮಾಡಿದ್ದಾರೆ. ಆದರೆ ಎಲ್ಲಿಯೂ ರೈತರ ಸಮಸ್ಯೆಯ ಬಗ್ಗೆ ಚಕಾರವೆತ್ತಿಲ್ಲ’ ಎಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 8 ವರ್ಷಗಳಾಗಿವೆ. ರಾಜ್ಯದಲ್ಲಿ 3 ವರ್ಷವಾಗಿದೆ. ಡಬಲ್ ಎಂಜಿನ್ ಸರ್ಕಾರ ರೈತರಿಗೆ ಮತ್ತು ಜನರಿಗೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ಜೆಡಿಎಸ್‍ ಅನ್ನು ಬಿಜೆಪಿಯ ಬಿ ಟೀಂ ಅಂತಾರೆ, ಅಮಿತ್ ಶಾ ಅವರು ಜೆಡಿಎಸ್‍ಗೆ ಓಟ್ ಹಾಕಿದರೆ ಕಾಂಗ್ರೆಸ್‌ಗೆ ಅನುಕೂಲ ಆಗುತ್ತೆ ಅಂತಾರೆ, ಈ ಇಬ್ಬರೂ ನಾಯಕರು ಅದು ಹೇಗೆನ್ನುವುದನ್ನು ಬಹಿರಂಗ ಪಡಿಸಬೇಕು. ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಸ್ಪಷ್ಟತೆ ಇಲ್ಲ. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದು ಭರವಸೆಗಳನ್ನು ಈಡೇರಿಸದೇ ಹೋದರೆ ಆಗ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದೇನೆ ಹೊರತು ಅವರು ಈಗ ನೀಡುತ್ತಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಶಾಸಕರಾದ ವೆಂಕಟರಾವ್ ನಾಡಗೌಡ, ಸಾ.ರಾ.ಮಹೇಶ, ಭೋಜೇಗೌಡ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಮ ಹಾಂತೇಶ ಪಾಟೀಲ ಅತ್ತನೂರು, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶಗೌಡ, ಲಿಂಗಸುಗೂರು ಅಭ್ಯರ್ಥಿ ಸಿದ್ದು ಬಂಡಿ, ಡಾ.ರಿಯಾಜ್, ಮುಖಂಡರಾದ ಚಂದ್ರಭೂಪಾಲ ನಾಡಗೌಡ, ಬಸವರಾಜ ನಾಡಗೌಡ, ಎಂ.ಡಿ.ನದೀಮ್ ಮುಲ್ಲಾ ಹಾಗೂ ಧರ್ಮನಗೌಡ ಮಲ್ಕಾಪುರ ಇದ್ದರು.

ಅದ್ದೂರಿ ಮೆರವಣಿಗೆ

ನಗರಕ್ಕೆ ಪಂಚರತ್ನ ಯಾತ್ರೆಯೊಂದಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಸಂಜೆ ಆಗಮಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಭವ್ಯವಾಗಿ ಸ್ವಾಗತಿಸಿಕೊಂಡು ಎರಡು ತಾಸುಗಳ ಕಾಲ ಅದ್ದೂರಿ ಮೆರವಣಿಗೆ ನಡೆಸಿದರು.

ಕುಮಾರಸ್ವಾಮಿ ಅವರ ಸ್ವಾಗತಕ್ಕೆ ಸಿಂಧನೂರು ನಗರವನ್ನು ಬಂಟಿಗ್ಸ್, ಕಟೌಟ್, ಕಮಾನುಗಳ ಮೂಲಕ ಸಿದ್ಧಗೊಳಿಸಲಾಗಿತ್ತು. ಮಧ್ಯಾಹ್ನ 2 ಗಂಟೆಯಿಂದಲೇ ಕುಷ್ಟಗಿ ರಸ್ತೆಯ ಗಣೇಶ ದೇವಸ್ಥಾನದ ಮುಂದೆ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಕುಂಭ-ಕಳಸದೊಂದಿಗೆ ಸ್ವಾಗತ ಕೋರಿದರು.

4 ಗಂಟೆಯಿಂದ ಮೆರವಣಿಗೆ ಆರಂಭಗೊಂಡಿತು. ತೆರೆದ ವಾಹನದಲ್ಲಿ ಕುಮಾರಸ್ವಾಮಿ, ಶಾಸಕರಾದ ವೆಂಕಟರಾವ್ ನಾಡಗೌಡ, ಸಾ.ರಾ.ಮಹೇಶ, ಭೋಜೇಗೌಡ ಮತ್ತಿತರ ನಾಯಕರಿಗೆ ಭಾರಿ ಗಾತ್ರದ ಹೂ ಮಾಲೆಗಳನ್ನು ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು.

ಬಪ್ಪೂರು ರಸ್ತೆಯಲ್ಲಿ ಕ್ರೇನ್ ಮೂಲಕ ಬೃಹತ್ ಗಾತ್ರದ ಹೂವಿನ ಹಾರ ಹಾಕಲಾಯಿತು. ವಿವಿಧ ವಾದ್ಯ ಮೇಳಗಳು, ಹಗಲು ವೇಷಗಾರರು, ಕುಂಭ-ಕಳಸ ಹೊತ್ತ ಮಹಿಳೆಯರು ಮೆರವಣಿಗೆಗೆ ಕಳೆತಂದರು. ಸುಮಾರು 200ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು.

ಜವಳಗೇರಾದಲ್ಲಿ ಸ್ವಾಗತ: ಇದಕ್ಕೂ ಮುನ್ನ ಮಧ್ಯಾಹ್ನ ಎರಡು ಗಂಟೆಗೆ ಪಂಚರತ್ನ ರಥಯಾತ್ರೆಯೊಂದಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಜವಳಗೇರಾ ಗ್ರಾಮಕ್ಕೆ ಆಗಮಿಸಿದರು. ಅವರನ್ನು ಶಾಸಕ ವೆಂಕಟರಾವ್ ನಾ ಡಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಸ್ವಾಗತಿಸಿಕೊಂಡರು.

ಜವಳಗೇರಾ ಗ್ರಾಮದ ಚರ್ಚ್ ಮುಂಭಾಗದಲ್ಲಿ ಕುಮಾರಸ್ವಾಮಿ ಅವರು ಬರುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ, ತಿಲಕವಿಟ್ಟು, ಪುಷ್ಪವೃಷ್ಟಿ ಮಾಡಿದರು. ನಂತರ ಸುಕ್ಷೇತ್ರ ವಳಬಳ್ಳಾರಿಯ ಸುವರ್ಣಗಿರಿ ವಿ ರಕ್ತಮಠ, ಸಿದ್ದಪರ್ವತ ಅಂಬಾಮಠದ ಅಂಬಾದೇವಿ ದೇವಸ್ಥಾನ, ಗಾಂಧಿ ನಗರದ ಶಿವಾಲಯಕ್ಕೆ ಭೇಟಿ ನೀಡಿ ಸ್ಪಟಿಕ ಲಿಂಗ ದರ್ಶನ ಪಡೆದರು.

‘ಶಕುನಿಗಳು ಕುಟುಂಬದ ದಾರಿ ತಪ್ಪಿಸಿದ್ದಾರೆ’

ರಾಯಚೂರು: ‘ಹಾಸನ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾರೋ ಶಕುನಿಗಳು ನಮ್ಮ ಕುಟುಂಬದ ಮಕ್ಕಳ ದಾರಿ ತಪ್ಪಿಸಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಪಂಚರತ್ನ ಯಾತ್ರೆಯಲ್ಲಿ ಶನಿವಾರ ರಾತ್ರಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಕುಟುಂಬದ ಮಕ್ಕಳು ನಮ್ಮ‌ ಬಗ್ಗೆ ಮಾತನಾಡಲು ಹಕ್ಕಿದೆ. ಅದನ್ನು ಅರಗಿಸಿಕೊಳ್ಳುವ ಶಕ್ತಿ ನನಗಿದೆ. ಅದನ್ನು ಸರಿಪಡಿಸುವುದು ಹೇಗೆ ಎಂಬುದೂ ನನಗೆ ಗೊತ್ತಿದೆ. ಮಾಧ್ಯಮದವರು ಈ‌ ಬಗ್ಗೆ ಹೆಚ್ಚು ಆಸಕ್ತಿವಹಿಸುವ ಅಗತ್ಯವಿಲ್ಲ. ರಾಮಾಯಣ, ಮಹಾಭಾರತ ಕಾಲದಿಂದಲೂ ರಾಜಕೀಯದಲ್ಲಿ ನೂರಾರು ಶಕುನಿಗಳು ಇದ್ದಾರೆ. ಇಂಥವರ ಬಗ್ಗೆ ತಲೆಡಕೆಡಿಸಿಕೊಳ್ಳುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಶಕುನಿಗಳು ಯಾರು ಎನ್ನುವ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದೆ, ‘ಯಾರೋ ಇರ್ತಾರೆ, ನೀವು (ಭವಾನಿ ರೇವಣ್ಣ) ಚುನಾವಣೆಗೆ ನಿಂತರೆ ಏನೋ ಆಗಿಬಿಡುತ್ತೆ ಎಂದು ಹೇಳಿರ್ತಾರೆ’ ಎಂದರು.

ಟಿಕೆಟ್ ಕೊಡುವುದನ್ನು ದೇವೇಗೌಡರು ನಿರ್ಧರಿಸುತ್ತಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿರುವ ಕುರಿತು ಸುದ್ದಿಗಾರರು ಪ್ರಶ್ನಿಸುತ್ತಿದ್ದಂತೆ ಕುಮಾರಸ್ವಾಮಿ ಅವರು ಭಾವೋದ್ವೇಗಕ್ಕೆ ಒಳಗಾದರು. ‘ಈ ವಿಷಯದಲ್ಲಿ ದೇವೇಗೌಡರ ಹೆಸರು ತರಬೇಡಿ‘ ಎಂದು ವಿನಂತಿಸಿದರು.

‘ದೇವೇಗೌಡರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.‌ ಅದನ್ನು ನಾವು ಹೇಳುವುದಿಲ್ಲ. ಅವರು ಸಾಯುವ ಮುನ್ನ, ಅವರು ಕಟ್ಟಿದ ಪಕ್ಷ ಇನ್ನೂ ಉಳಿದಿದೆ ಎಂಬುದನ್ನು ತೋರಿಸಲು 120 ಸ್ಥಾನಗಳನ್ನು ಗೆಲ್ಲುವುದಕ್ಕಾಗಿ ಯಾತ್ರೆ ಮಾಡುತ್ತಿದ್ದೇನೆ’ ಕಣ್ಣೀರು ಒರೆಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT