ಮಂಗಳವಾರ, ಅಕ್ಟೋಬರ್ 19, 2021
22 °C
ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯ ಆರೋಪ

ಆಕ್ಷೇಪಣೆಗೆ ಕಾಲಾವಕಾಶ ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಸೀದಿಗಳ ಧ್ವನಿವರ್ಧಕಗಳಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿದ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರ ಕಾಲಾವಕಾಶ ಬೇಕು’ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮನವಿ ಮಾಡಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಮುಂದಿನ ವಿಚಾರಣೆ ದಿನದಂದು ಈ ಅರ್ಜಿಯ ವಿಚಾರಣಾ ಮಾನ್ಯತೆಯನ್ನು ರಾಷ್ಟೀಯ ಹಸಿರು ನ್ಯಾಯಾಧೀಕರಣ ನಿರ್ದೇಶನಗಳ ಪ್ರಕಾರ ಪರಿಶೀಲಿಸಲಾಗುವುದು’ ಎಂದು ತಿಳಿಸಿದ ನ್ಯಾಯಪೀಠ, ನವೆಂಬರ್ 16ಕ್ಕೆ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರಪ್ರಭು, ‘ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು-2000’ ಅನ್ವಯ ಲಿಖಿತ ಪರವಾನಿಗೆ ಪಡೆಯದ ಹೊರತು ಧ್ವನಿವರ್ಧಕಗಳನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಥಣಿಸಂದ್ರ ಹಾಗೂ ಸುತ್ತಲಿನ 16 ಮಸೀದಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮಸೀದಿಗಳ ಆಡಳಿತ ಮಂಡಳಿ ಪರ ವಕೀಲರು, ’ಎಲ್ಲಾ 16 ಮಸೀದಿಗಳಲ್ಲಿ ಶಬ್ದ ಮಿತಿ  ನಿಯಂತ್ರಿಸುವ ಶಬ್ದ ಮತ್ತು ನಿಯಂತ್ರಣ ಮಾಪಕಗಳನ್ನು ಅಳವಡಿಸಲಾಗಿದೆ. ಒಂದೊಮ್ಮೆ ಮಿತಿಗಿಂತ ಅಧಿಕ ಶಬ್ದ ಉಂಟಾದರೆ ಅದು ನೇರವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಗಮನಕ್ಕೆ ಬರುತ್ತದೆ. ಆಗ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಅಲ್ಲದೇ ಧ್ವನಿವರ್ಧಕಗಳ ಬಳಕೆಗೆ ಲಿಖಿತ ಪರವಾನಿಗೆ ಪಡೆದುಕೊಳ್ಳಲಾಗಿದೆ’ ಎಂಬ ಅಂಶಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಪಿ.ರಾಕೇಶ್ ಮತ್ತು ಅಯ್ಯಪ್ಪ ದಾಸ್ ಬಾಲಗೋಪಾಲ್ ಸೇರಿದಂತೆ ಥಣಿಸಂದ್ರ ಮುಖ್ಯ ರಸ್ತೆಯ ಐಕಾನ್ ಅಪಾರ್ಟ್‌ಮೆಂಟ್‌ನ 32 ನಿವಾಸಿಗಳು ಸುತ್ತಲಿನ 16 ಮಸೀದಿಗಳ ವಿರುದ್ಧ ಈ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು