ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಟಿ. ರವಿ ವಿರುದ್ಧದ ಪ್ರಕರಣ ರದ್ಧತಿಗೆ ಹೈಕೋರ್ಟ್‌ ನಕಾರ

ಪ್ರಮಾಣಪತ್ರ ಸಲ್ಲಿಸಲು ಅವಕಾಶ ನೀಡುವಂತೆ ಆದೇಶ
Last Updated 7 ನವೆಂಬರ್ 2020, 5:28 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸಿ.ಟಿ. ರವಿ ವಿರುದ್ಧ ದಾಖಲಾಗಿರುವ ಖಾಸಗಿ ದೂರಿನ ವಿಚಾರಣೆಯನ್ನು ರದ್ದುಗೊಳಿಸಲು ನಿರಾ
ಕರಿಸಿರುವ ಹೈಕೋರ್ಟ್‌, ದೂರುದಾರರಿಗೆ ಪ್ರಮಾಣೀಕೃತ ಹೇಳಿಕೆ ದಾಖಲಿಸಲು ಅವಕಾಶ ಕಲ್ಪಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಅಕ್ರಮ ಆಸ್ತಿ ಹೊಂದಿರುವ ಆರೋಪದಡಿ ಸಿ.ಟಿ. ರವಿ ವಿರುದ್ಧ 2012ರಲ್ಲಿ ಖಾಸಗಿ ದೂರು ದಾಖಲಾಗಿತ್ತು. ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ವಿಚಾರಣಾ ನ್ಯಾಯಾಲಯ 2016ರಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶಿಸಿತ್ತು. ದೂರಿನ ವಿಚಾರಣಾ ವಿಧಾನದಲ್ಲಿ ಲೋಪವಿದೆ ಎಂದು ಆಕ್ಷೇಪಿಸಿದ್ದ ರವಿ, ಪ್ರಕರಣವನ್ನೇರದ್ದು ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

‘ಪ್ರಿಯಾಂಕಾ ಶ್ರೀವಾತ್ಸವ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ಆದೇಶದ ಪ್ರಕಾರ, ಖಾಸಗಿ ದೂರುಗಳ ಕುರಿತು ತನಿಖೆಗೆ ಆದೇಶಿಸುವ ಅಥವಾ ವಿಚಾರಣೆ ಆರಂಭಿಸುವ ಮೊದಲು ದೂರುದಾರರಿಂದ ಪ್ರಮಾಣೀಕೃತ ಹೇಳಿಕೆ ದಾಖಲಿಸಬೇಕು. ದೂರಿನಲ್ಲಿ ಸತ್ಯಾಂಶವಿದೆಯೆ? ಸುಳ್ಳು ದೂರು ಸಲ್ಲಿಸಲಾಗಿದೆಯೆ? ಎಂಬುದನ್ನು ವಿಚಾರಣಾ ನ್ಯಾಯಾಧೀಶರು ಪರಿಶೀಲನೆ ನಡೆಸ
ಬೇಕು. ಈ ಪ್ರಕರಣದಲ್ಲಿ ಅದನ್ನು ಪಾಲಿಸಿಲ್ಲ’ ಎಂದು ರವಿ ಪರ ವಕೀಲರು ವಾದಿಸಿದ್ದರು.

ಅರ್ಜಿದಾರರು ಉಲ್ಲೇಖಿಸುತ್ತಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡುವ ಮೊದಲೇ ದೂರು ಸಲ್ಲಿಕೆಯಾಗಿತ್ತು. ಆದ್ದರಿಂದ ಈ ಪ್ರಕರಣದಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಎಸಿಬಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

‘ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 156 (3)ರಅಡಿಯಲ್ಲಿ ದೂರುದಾರರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಆ ಬಳಿಕ ಸುಪ್ರೀಂಕೋರ್ಟ್‌ ತೀರ್ಪು ಬಂದಿದೆ. ಅದಕ್ಕೆ ಪೂರಕವಾಗಿ ಕಾನೂನುತಿದ್ದುಪಡಿ ಮಾಡುವಂತೆ ನ್ಯಾಯಾಂಗ ಆಯೋಗಕ್ಕೆ ಶಿಫಾರಸು ಮಾಡಲಾಗಿತ್ತು. ಕಾಯ್ದೆಗೆ ಇನ್ನೂ ತಿದ್ದುಪಡಿ ಆಗಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್‌ ತೀರ್ಪನ್ನು ಪಾಲಿಸಬೇಕಾಗುತ್ತದೆ’ ಎಂದು ನ್ಯಾ. ಕುನ್ಹ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಮರಳಿಸಲಾಗುವುದು. ವಿಚಾರಣಾ ನ್ಯಾಯಾಲಯವು ದೂರುದಾರರಿಗೆ ಪ್ರಮಾಣೀಕೃತ ಹೇಳಿಕೆ ದಾಖಲಿಸಲು ಅವಕಾಶ ಕಲ್ಪಿಸಬೇಕು. ಅರ್ಜಿದಾರರ ವಿರುದ್ಧದ ಆರೋಪಗಳು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವ್ಯಾಪ್ತಿಯಲ್ಲಿರುವುದರಿಂದ ದೂರುದಾರರು ಎಸಿಬಿಗೂ ದೂರು ಸಲ್ಲಿಸಬಹುದು ಎಂದು ಹೈಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT