ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2–ಎ ಮೀಸಲಾತಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್‌ ಮಧ್ಯಂತರ ಆದೇಶ

Last Updated 12 ಜನವರಿ 2023, 20:53 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬಾರದು ಮತ್ತು ಮೀಸಲು ಪ್ರವರ್ಗ ಮಾರ್ಪಾಡು ಮಾಡುವಂತೆ ಕೋರಿ ಯಾವುದೇ ಜಾತಿ, ಉಪಜಾತಿ, ಸಮುದಾಯ ಬುಡಕಟ್ಟುಗಳು ಸಲ್ಲಿಸುವ ವೈಯಕ್ತಿಕ ಬೇಡಿಕೆಗಳನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸದಂತೆ ತಡೆ ನೀಡಬೇಕು‘ ಎಂಬ ಮಧ್ಯಂತರ ಮನವಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್‌, ಈ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಮುಂದಿನ ವಿಚಾರಣೆವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹೀಗಾಗಿ, ಮೀಸಲು ಹಂಚಿಕೆಗೆ ಸಂಬಂಧಿಸಿದಂತೆ ಪ್ರವರ್ಗ 2–ಎ ಗೆ ಸೇರ್ಪಡೆ ಮಾಡುವ ಅಥವಾ ಹೊಸದಾಗಿ 2–ಸಿ, 2–ಡಿ ಪ್ರವರ್ಗ ಸೃಷ್ಟಿಸಲು ಸರ್ಕಾರ ಕೈಗೊಂಡಿರುವ ನಿರ್ಣಯದ ಮುಂದಿನ ಪ್ರಕ್ರಿಯೆಗೆ ಈಗ ತಾತ್ಕಾಲಿಕ ತಡೆ ಬಿದ್ದಂತಾಗಿದೆ.

ಈ ಸಂಬಂಧ ಬೆಂಗಳೂರಿನ ಜ್ಞಾನಭಾರತಿಯ ಮೃತ್ಯುಂಜಯ ನಗರದ ನಿವಾಸಿ ಡಿ.ಜಿ ರಾಘವೇಂದ್ರ ಬಿನ್ ಸೂರ್ಯ ದೇವಾಡಿಗ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ಅಶೋಕ್‌ ಎಸ್‌.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ದಿನದ ಕಲಾಪ ಮುಗಿಯುವಾಗ ಸಂಜೆ 5.45 ರಲ್ಲಿ ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮ ಕುಮಾರ್‌ ಅವರು, ‘ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ. ಈ ವರದಿಯನ್ನು ರಾಜ್ಯ ಸರ್ಕಾರ ಇನ್ನೂ ಕೋರ್ಟ್‌ಗೆ ಸಲ್ಲಿಸಿಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಿ ಪ್ರತಿಕ್ರಿಯಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ವರದಿ ಸರ್ಕಾರದ ಪರಿಶೀಲನೆಯಲ್ಲಿದೆ. ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ವರದಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು. ಹಾಗಾಗಿ, ತಡೆ ನೀಡಬಾರದು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಡಿದ ರವಿವರ್ಮ ಕುಮಾರ್, ‘ಸರ್ಕಾರ ಸಮಯ ತೆಗೆದುಕೊಳ್ಳಲು ನಮ್ಮ ತಕರಾರಿಲ್ಲ, ಆದರೆ ಕೆಲವು ಸಮುದಾಯಗಳು ಸರ್ಕಾರದ ಮೇಲೆ ಅಸಾಂವಿಧಾನಿಕ ಬೇಡಿಕೆಯ ಈಡೇರಿಕೆಗಾಗಿ ಒತ್ತಡ ಹೇರುತ್ತಿವೆ. ಆದಕಾರಣ ಈ ವಿಷಯದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಅದೇಶಿಸಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಇದೇ 30ಕ್ಕೆ ನಿಗದಿಪಡಿಸಿ ಅಲ್ಲಿಯವರೆಗೂ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಆದೇಶಿಸಿತು. ಅರ್ಜಿದಾರರ ಪರ ವಕೀಲ ಎಚ್.ವಿ.ಮಂಜುನಾಥ ಹಾಜರಿದ್ದರು.

ಅರ್ಜಿದಾರರ ಕೋರಿಕೆಯೇನು?: ‘ನಾನು ದೇವಾಡಿಗ ಸಮುದಾಯಕ್ಕೆ ಸೇರಿದವನಾಗಿದ್ದು ಹಿಂದುಳಿದ ವರ್ಗಗಳಿಗೆ ದೊರೆಯುವ 2-ಎ ಮೀಸಲಾತಿಯ ಫಲಾನುಭವಿಯಾಗಿದ್ದೇನೆ‌. ಇತ್ತೀಚೆಗೆ ಲಿಂಗಾಯತ-ವೀರಶೈವ ಪಂಚಮಸಾಲಿ ಸಮುದಾಯದವರು ಪ್ರವರ್ಗ 2-ಎಗೆ ಸೇರಿಸಬೇಕು ಎಂ‌ಬ ಬೇಡಿಕೆಯನ್ನು ಮಂಡಿಸಿದ್ದಾರೆ. ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಂಚಮಸಾಲಿ ಸಮುದಾಯವನ್ನು 2-ಎಗೆ ಸೇರ್ಪಡೆ ಮಾಡುವುದನ್ನು ಖಚಿತಪಡಿಸಿದ್ದು ಅದಕ್ಕಾಗಿ 2022ರ ಡಿಸೆಂಬರ್‌ 29ರ ಗಡುವು ನೀಡಿದ್ದರು. ಒಂದು ವೇಳೆ ಈ ಬಲಾಢ್ಯ ಹಾಗೂ ಮುಂದುವರಿದ ಸಮುದಾಯವನ್ನು 2-ಎಗೆ ಸೇರ್ಪಡೆ ಮಾಡಿದರೆ ಹಿಂದುಳಿದ ವರ್ಗಗಳಿಗೆ ಭರಿಸಲಾಗದ ಅನ್ಯಾಯ ಉಂಟಾಗಲಿದೆ. ಹಾಗಾಗಿ, ಈ ಅರ್ಜಿ ಇತ್ಯರ್ಥವಾಗುವತನಕ ಮೀಸಲು ಪ್ರವರ್ಗಗಳನ್ನು ಮಾರ್ಪಾಡು ಮಾಡುವಂತೆ ಕೋರುವ ಬೇಡಿಕೆಗಳನ್ನು ಸರ್ಕಾರ ಪ್ರೋತ್ಸಾಹಿಸದಂತೆ ಮಧ್ಯಂತರ ತಡೆ ನೀಡಬೇಕು’ ಎಂದು ಕೋರಿದ್ದಾರೆ.

‘ಮುತ್ತಿಗೆ–ನ್ಯಾಯಾಂಗ ನಿಂದನೆ’
‘2–ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ವತಿಯಿಂದ ಇದೇ 13ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿ ನಿವಾಸದ ಮುಂದೆ ಸತ್ಯಾಗ್ರಹ ನಡೆಸುವ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಿರ್ಧಾರ ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದು ಹಿರಿಯ ವಕೀಲ ರವಿವರ್ಮ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕೋರ್ಟ್‌ ಆದೇಶ ಹೊರಬಿದ್ದ ನಂತರ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ಅವರು, ‘ಕೋರ್ಟ್‌ ಆದೇಶ ಈ ಪ್ರಕ್ರಿಯೆಯಲ್ಲಿನ ಎಲ್ಲ ವಿಧವಾದ ನಡೆಗಳಿಗೂ ಅನ್ವಯ ಆಗುತ್ತದೆ. ಸತ್ಯಾಗ್ರಹವನ್ನು ಪ್ರಶ್ನಿಸಿ ವಿಚಾರಣೆಗೆ ಒಳಪಡಿಸುವಂತೆ ಕೋರಿದರೆ ಆಗ ಅದು ಖಂಡಿತಾ ನ್ಯಾಯಾಂಗ ನಿಂದನೆ ಎನಿಸಿಕೊಳ್ಳುತ್ತದೆ’ ಎಂದರು.

ಎಸ್ಸಿ-ಎಸ್ಟಿ ಮೀಸಲು ಹೆಚ್ಚಳಕ್ಕೆ ರಾಜ್ಯಪಾಲರ ಒಪ್ಪಿಗೆ
ಪರಿಶಿಷ್ಟ ಜಾತಿ (ಎಸ್ಸಿ) ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿ ಶೇ 3 ರಿಂದ ಶೇ 7ಕ್ಕೆ ಹೆಚ್ಚಿಸಿ ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆದ ಮಸೂದೆಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸಹಿ ಹಾಕಿದ್ದಾರೆ.

ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಮಸೂದೆಗೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿತ್ತು. ಇದಕ್ಕೂ ಮೊದಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಮತ್ತು ಸರ್ಕಾರಿ ನೌಕರಿಯ ನೇಮಕಾತಿಗಳಲ್ಲಿ ಮೀಸಲು ಪ್ರಮಾಣ ಹೆಚ್ಚಾಗಲಿದೆ.

ಸಿಎಂ ಮನೆ ಮುತ್ತಿಗೆ ನಿಲ್ಲಿಸುವುದಿಲ್ಲ: ಮೃತ್ಯುಂಜಯ ಸ್ವಾಮೀಜಿ
‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಖ್ಯಮಂತ್ರಿ ನಮ್ಮ ಹೋರಾಟದ ದಿಕ್ಕು ತಪ್ಪಿಸಲು, 2ಡಿ ಮೀಸಲಾತಿ ಘೋಷಿಸಿದರು. ಇದನ್ನು ಜನವರಿ 5ರಂದು ಬೆಳಗಾವಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸಂಪೂರ್ಣವಾಗಿ ತಿರಸ್ಕರಿಸಿದ್ದೇವೆ. 2ಎ ಮೀಸಲಾತಿ ಕೊಡುವ ಅಧಿಕಾರ ಮುಖ್ಯಮಂತ್ರಿಯವರ ಕೈಯಲ್ಲಿತ್ತು. ಆದರೆ, ಮೀಸಲಾತಿ ಕೊಡದೆ ಕಾಲಹರಣ ಮಾಡಿದರು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರಿದರು.

‘ಹೈಕೋರ್ಟ್‌ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸರ್ಕಾರಕ್ಕೆ ಆದೇಶಿಸಿದೆ. ನಮ್ಮ ಹೋರಾಟಕ್ಕೆ ಯಾವುದೇ ತಡೆ ನೀಡಿಲ್ಲ. ಹೀಗಾಗಿ ನಮ್ಮ ಹೋರಾಟ ನಿರಂತರ. ಸರ್ಕಾರದ ಅನ್ಯಾಯ ಖಂಡಿಸಿ ಜ.13ರಂದು ಶಿಗ್ಗಾವಿಯಲ್ಲಿರುವ ಸಿಎಂ ಮನೆಗೆ ಮುತ್ತಿಗೆ ಕಾರ್ಯಕ್ರಮ ಹಾಕಿಕೊಂಡಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT