ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಪತ್ನಿಗೆ ಜೀವನಾಂಶ ನೀಡಲು ಕಾರಣ ಹೇಳಕೂಡದು: ಹೈಕೋರ್ಟ್

Last Updated 20 ಅಕ್ಟೋಬರ್ 2021, 17:19 IST
ಅಕ್ಷರ ಗಾತ್ರ

ಬೆಂಗಳೂರು: ‘ತರಾತುರಿಯಲ್ಲಿ ಮದುವೆಯಾದ ಎರಡನೇ ಪತ್ನಿ ಮತ್ತು ಮಗುವಿನ ನಿರ್ವಹಣೆ ಜವಾಬ್ದಾರಿಯ ಕಾರಣ ಹೇಳಿ, ಮೊದಲ ಪತ್ನಿಗೆ ಜೀವನಾಂಶ ನೀಡಲಾಗದು ಎಂಬ ಸಬೂಬು ಹೇಳುವಂತಿಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ತಲಾಖ್‌ ನೀಡಿದ್ದರೂ ಜೀವನಾಂಶ ನೀಡಬೇಕು ಎಂದು ಹಲವು ವರ್ಷ ಕಾನೂನು ಹೋರಾಟ ನಡೆಸಿದ್ದ ಮಹಿಳೆಯೊಬ್ಬರಿಗೆ ಆಕೆಯ ಮಾಜಿ ಪತಿ ಜೀವನಾಂಶನೀಡಬೇಕು ಎಂಬ ಆದೇಶ ನೀಡಿದ ಪೀಠ, ಹೀಗೆ ಹೇಳಿದೆ.

‘ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವ ಮುನ್ನ ಮೊದಲ ಪತ್ನಿಗೆ ಜೀವನಾಂಶ ನೀಡಬೇಕಿರುವುದು ಆ ವ್ಯಕ್ತಿಯ ಜವಾಬ್ದಾರಿ. ಹೊಸ ಮದುವೆಯ ಕಾರಣ ನೀಡಿ ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಆಗುವುದಿಲ್ಲ’ ಎಂದು ಹೇಳಿದೆ.

ಒಂಬತ್ತು ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ತಿಂಗಳಿಗೆ ₹3 ಸಾವಿರ ಜೀವನಾಂಶ ನೀಡುವಂತೆ 2011ರಲ್ಲಿ ಆದೇಶಿಸಿತ್ತು. ಪಾವತಿಸದ ಕಾರಣಕ್ಕೆ 2012ರಲ್ಲಿ ಜೈಲಿಗೂ ಹೋಗಿದ್ದ ಪತಿ, 2013ರಲ್ಲಿ ₹30 ಸಾವಿರ ಪಾವತಿಸಿದ ಬಳಿಕ ಬಿಡುಗಡೆಯಾಗಿದ್ದರು. ‘ಹಣಕಾಸಿನ ಅಸಮರ್ಥತೆಯ ಕಾರಣ ಜೀವನಾಂಶ ನೀಡಲು ಆಗುವುದಿಲ್ಲ’ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ತಿರಸ್ಕರಿಸಿದ ಪೀಠ, ಮಾಜಿ ಪತಿಗೆ ₹25 ಸಾವಿರ ದಂಡ ವಿಧಿಸಿದೆ. ಈ ಪ್ರಕರಣವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಮೂರು ತಿಂಗಳಲ್ಲಿ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರಿಗೆ ವರದಿ ಸಲ್ಲಿಸಲು ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT