ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಣಿ, ರೂಪಾಗೆ ನೋಟಿಸ್: ಅಧಿಕಾರಿಗಳ ಕಿತ್ತಾಟಕ್ಕೆ ಸಂಪುಟ ಸಭೆಯಲ್ಲಿ ಅಸಮಾಧಾನ

Last Updated 21 ಫೆಬ್ರುವರಿ 2023, 9:51 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಎಚ್ಚರಿಕೆ ನೀಡಿದ ಬಳಿಕವೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಮಧ್ಯದ ಜಟಾಪಟಿ ಸೋಮವಾರವೂ ಸಾಮಾಜಿಕ ಜಾಲ ತಾಣಗಳಲ್ಲಿ ಮುಂದುವರಿಯಿತು.

ಅಧಿಕಾರಿಗಳ ಬೀದಿಜಗಳದಿಂದ ಮುಜುಗರಕ್ಕೆ ಒಳಗಾಗಿರುವ ಸರ್ಕಾರ, ಶಿಸ್ತು ಉಲ್ಲಂಘನೆ, ದುರ್ನಡತೆ, ಸರ್ಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದೆ. ಇಬ್ಬರಿಗೂ ನೋಟಿಸ್‌ ನೀಡಲಾಗಿದೆ.

‘ಮುಖ್ಯಕಾರ್ಯದರ್ಶಿ ಇಬ್ಬರನ್ನೂ ಕರೆದು ಮಾತನಾಡಿದ್ದಾರೆ. ಅವರು ನೀಡಿರುವ ದೂರಿನ ಪತ್ರದ ಆಧಾರದಲ್ಲಿ ಕ್ರಮ ಕೈಗೊಳ್ಳಲು ಪರಿಶೀಲಿಸುತ್ತಿದ್ದಾರೆ. ಮಾಧ್ಯಮಗಳಿಂದ ಅಂತರ ಕಾಪಾಡಿಕೊಂಡು, ಶಿಸ್ತು ಕಾಪಾಡುವುದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

‘ಶಾಸಕ ಸಾ.ರಾ. ಮಹೇಶ್‌ ಜತೆ ಸಿಂಧೂರಿ ಸಂಧಾನಕ್ಕೆ ಯತ್ನಿಸಿದ್ದಾರೆ’ ಎಂಬ ಸುದ್ದಿಯನ್ನು ಪ್ರಸ್ತಾಪಿಸಿದ್ದ ರೂಪಾ ಭಾನುವಾರ ಜಾಲತಾಣಗಳಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದರು. ಅವರಿಗೆ ಸಂಬಂಧಿಸಿದ 20 ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಂಧೂರಿ, ‘ವೈಯಕ್ತಿಕ ಹಗೆ ಸಾಧಿಸುವುದಕ್ಕಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಮಾನಸಿಕ ಅಸ್ವಸ್ಥತೆಗೆ ಒಳಗಾದರೆ ಅದು ಸಮಾಜಕ್ಕೆ ಬಹುದೊಡ್ಡ ಅಪಾಯಕಾರಿ ಬೆಳವಣಿಗೆ’ ಎಂದಿದ್ದರು.

ಅವರ ಮಾತಿಗೆ ಸೋಮವಾರ ಮತ್ತೆ ಸಾಮಾಜಿಕ ಜಾಲತಾಣಗಳಲ್ಲೇ ಪ್ರತಿಕ್ರಿಯೆ ನೀಡಿರುವ ರೂಪಾ, ‘ನನ್ನನ್ನು ಮಾನಸಿಕ ಅಸ್ವಸ್ಥೆ ಎಂದಿದ್ದಾರೆ. ಇದು ಅವರು ಎಷ್ಟು ಕೀಳು ಎಂಬುದನ್ನು ತೋರಿಸುತ್ತದೆ. ಹಾಗೆ ಹೇಳುವುದು ಮಾನನಷ್ಟದ ಹೇಳಿಕೆ. ಅಶ್ಲೀಲ ಚಿತ್ರಗಳನ್ನು ಪುರುಷ ಐಎಎಸ್‌ ಅಧಿಕಾರಿಗಳಿಗೆ ಕಳುಹಿಸಿದ್ದು ಯಾವ ಕಾರಣಕ್ಕೆ? ಶಿಕ್ಷೆ ಆಗದಂತೆ ತಡೆಯುವುದಕ್ಕಾಗಿಯೇ ಎನ್ನುವುದನ್ನು ಅವರೇ ಉತ್ತರಿಸಲಿ’ ಎಂದು ಸವಾಲು ಹಾಕಿದ್ದಾರೆ.

ರೋಹಿಣಿ ಸಿಂಧೂರಿ ಅಭಿಮಾನಿಗಳ ಹೆಸರಲ್ಲಿ ರೂಪಾ ಅವರಿಗೆ ಜಾಲತಾಣಗಳಲ್ಲಿ ಒಂಬತ್ತು ಪ್ರಶ್ನೆಗಳನ್ನು ಕೇಳಲಾಗಿದೆ. ಕನ್ನಡಿಗರು, ಹೊರ ರಾಜ್ಯದವರು ಎನ್ನುವ ಭೇದದ ವಿರುದ್ಧ ಕಿಡಿಕಾರಲಾಗಿದೆ.

ಮುಖ್ಯಕಾರ್ಯದರ್ಶಿ ಭೇಟಿ ಮಾಡಿದ ಸಿಂಧೂರಿ: ಸೋಮವಾರ ಅಧಿವೇಶನದ ಸಮಯದಲ್ಲೇ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಭೇಟಿ ಮಾಡಿದ ಸಿಂಧೂರಿ, ಪ್ರಕರಣ ಕುರಿತು ಚರ್ಚಿಸಿದರು. ಮೂರು ಪುಟಗಳ ಲಿಖಿತ ಪತ್ರ ನೀಡಿದರು.

‘ರೂಪಾ ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದೇನೆ’ ಎಂದು ಭೇಟಿಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ಕರ್ನಾಟಕದಲ್ಲಿ ಹಿರಿಯ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ವಿದ್ಯಮಾನ ದುರದೃಷ್ಟಕರ. ಇಬ್ಬರಿಗೂ ಬುದ್ಧಿ ಹೇಳುವಂತೆ ಪ್ರಧಾನಮಂತ್ರಿ, ಗೃಹ ಸಚಿವಾಲಯವನ್ನು ಒತ್ತಾಯಿಸಿದ್ದೇನೆ’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್‌ ಸಿಂಗ್‌ ಸಿರೋಯಾ ಅವರು ಟ್ವೀಟ್‌ ಮಾಡಿದ್ದಾರೆ.

ಸಂಪುಟ ಸಭೆಯಲ್ಲೂ ಪ್ರಸ್ತಾಪ: ‘ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿದ್ದು, ಘಟನೆಯ ಕುರಿತು ಹಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳ ತೋರಿಸದೆ ವರ್ಗಾವಣೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ’ ಎಂದು ಸಂಪುಟದ ಹಿರಿಯ ಸಚಿವರೊಬ್ಬರು ಮಾಹಿತಿ ನೀಡಿದರು.

ಬಾಗಲಗುಂಟೆ ಠಾಣೆಗೆ ರೋಹಿಣಿ ದೂರು
‘ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ನನ್ನ ವೈಯಕ್ತಿಕ ಫೋಟೊ ಬಳಸಿಕೊಂಡು ಗೌರವಕ್ಕೆ ಧಕ್ಕೆ ತಂದಿದ್ದಾರೆ. ಇಲ್ಲಸಲ್ಲದ ಆರೋಪ ಮಾಡಿ ಮಾನಹಾನಿ ಮಾಡಿದ್ದಾರೆ’ ಎಂದು ಆರೋಪಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಬಾಗಲಗುಂಟೆ ಠಾಣೆಗೆ ದೂರು ನೀಡಿದ್ದಾರೆ.

ಪತಿ ಸುಧೀರ್ ರೆಡ್ಡಿ ಮೂಲಕ ದೂರಿನ ಪ್ರತಿಯನ್ನು ಠಾಣೆಗೆ ತಲುಪಿಸಿರುವ ರೋಹಿಣಿ, ‘ಡಿ. ರೂಪಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ.

ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ದೂರು ಸ್ವೀಕರಿಸಲಾಗಿದ್ದು, ಸದ್ಯಕ್ಕೆ ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಂಧಾನ ನಡೆಸಿದ್ದು ನಾನೇ: ಮಾಧುಸ್ವಾಮಿ
‘ಶಾಸಕ ಸಾ.ರಾ.ಮಹೇಶ್‌– ಅಧಿಕಾರಿ ರೋಹಿಣಿ ಸಿಂಧೂರಿ ಮಧ್ಯೆ ಸಂಧಾನ ನಡೆಸಿದ್ದು ನಾನೇ. ಅಧಿವೇಶನದಲ್ಲಿ ಅನಗತ್ಯ ವಿಚಾರ ಪ್ರಸ್ತಾಪಿಸಬಾರದು ಎಂಬ ಕಾರಣಕ್ಕೆ ಇಬ್ಬರನ್ನೂ ಕರೆದು ಮಾತನಾಡಿದೆ’ ಎಂದು ಕಾನೂನು ಸಚಿವ ಮಾಧುಸ್ವಾಮಿ ಸಮರ್ಥಿಸಿಕೊಂಡರು.

‘ರೂಪಾ, ಸಿಂಧೂರಿ ಅವರದು ವೈಯಕ್ತಿಕ ಜಗಳ ಎಂದು ಸುಮ್ಮನಾಗಿದ್ದೆವು. ಈಗ ಅದು ಬೀದಿ ಜಗಳವಾಗಿದೆ. ಸರ್ಕಾರಕ್ಕೂ ಮುಜುಗರವಾಗಿದೆ. ಇಬ್ಬರ ವಿರುದ್ಧ ಶಿಸ್ತುಕ್ರಮ ಅನಿವಾರ್ಯ’ ಎಂದರು.

ಲಿಖಿತ ಕ್ಷಮೆ ಕೇಳಿದ್ದಾರೆ: ಸಾ.ರಾ.ಮಹೇಶ್‌
‘ರೋಹಿಣಿ ಸಿಂಧೂರಿ ಹಾಗೂ ನನ್ನ ಮಧ್ಯೆ ಸಂಧಾನ ನಡೆದದ್ದು ನಿಜ. ಅವರು ಬಹಿರಂಗವಾಗಿ, ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ. ನಡವಳಿಕೆ ಬದಲಿಸಿಕೊಳ್ಳುವಂತೆ ಅವರಿಗೆ ಸೂಚಿಸಿದ್ದೇನೆ’ ಎಂದು ಶಾಸಕ ಸಾ.ರಾ.ಮಹೇಶ್‌ ಪ್ರತಿಕ್ರಿಯಿಸಿದ್ದಾರೆ.

‘ಪಕ್ಷದ ವರಿಷ್ಠರಾದ ದೇವೇಗೌಡ, ಕುಮಾರಸ್ವಾಮಿ ಅವರೂ ಸಲಹೆ ನೀಡಿದ್ದರು. ಒಂದೂವರೆ ವರ್ಷದ ಹೋರಾಟಕ್ಕೆ ತೆರೆ ಎಳೆದಿದ್ದೇನೆ. ಅವರ ವಿರುದ್ಧ ಮತ್ತೆ ಸಮರ ಸಾರುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT