ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ತೊಳೆದು ಹಾಕುವವರೆಗೂ ವಿರಮಿಸುವುದಿಲ್ಲ: ಹೋರಾಟಕ್ಕೆ ಕಾಂಗ್ರೆಸ್‌ ಪಣ

ರಾಜಭವನದ ಕದ ತಟ್ಟಿದ ‘ಕೈ’ ನಾಯಕರು l ಇದೇ 15ರಿಂದ ಸರಣಿ ಹೋರಾಟ
Last Updated 13 ಏಪ್ರಿಲ್ 2022, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆಗೆ ನೇರ ಕಾರಣವೆಂಬ ಆರೋಪ ಎದುರಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಕಾಂಗ್ರೆಸ್‌ ನಿಯೋಗ ಬುಧವಾರ ಮನವಿ ಸಲ್ಲಿಸಿದೆ.

‘ಈಶ್ವರಪ್ಪ ಮತ್ತು ಅವರ ಮಿತ್ರರ ಕುಮ್ಮಕ್ಕಿನಿಂದ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಶರಣಾದ ಬಗ್ಗೆ ಗಮನಹರಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ಅವರ ವಿರುದ್ಧ ಕೊಲೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಮೊಕದ್ದಮೆ ದಾಖಲಿಸಬೇಕು’ ಎಂದು ರಾಜ್ಯಪಾಲರಲ್ಲಿ ಕಾಂಗ್ರೆಸ್‌ ನಾಯಕರು ಮನವಿ ಮಾಡಿದ್ದಾರೆ.

‘ಈಶ್ವರಪ್ಪ ಬಂಧನ ಆಗುವವರೆಗೂ ಹೋರಾಟ ಮುಂದುವರಿಸುತ್ತೇವೆ. ಬೊಮ್ಮಾಯಿ ನೇತೃತ್ವದ ಸರ್ಕಾರದ ಭ್ರಷ್ಟಾಚಾರವನ್ನು ತೊಳೆದು ಹಾಕುವವರೆಗೂ ವಿರಮಿಸುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕರು ಘೋಷಿಸಿದ್ದಾರೆ.

ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಈಶ್ವರಪ್ಪ ಬಿಲ್ ಪಾವತಿಸದೆ ಲಂಚ ಕೇಳಿದ ಬಗ್ಗೆ ಹಲವರಿಗೆ ದೂರು ಕೊಟ್ಟರೂ ನ್ಯಾಯ ಸಿಗದ ಕಾರಣ ಸಂತೋಷ್‌ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಉಡುಪಿಗೆ ಹೋಗಿದ್ದಾರೆ. ಬಳಿಕ, ‘ಈಶ್ವರಪ್ಪ ನನ್ನ ಸಾವಿಗೆ ನೇರ ಕಾರಣ’ ಎಂದು ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ್ದಾರೆ. ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು? ಹೀಗಾಗಿ, ಈಶ್ವರಪ್ಪ ಅವರನ್ನು ಬಂಧಿಸಬೇಕು, ವಜಾಗೊಳಿಸಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ’ ಎಂದರು.

‘ಈಶ್ವರಪ್ಪ ವಿರುದ್ಧ ಮಂಗಳವಾರ ತಡರಾತ್ರಿ ಎಫ್ಐಆರ್ ದಾಖಲಾಗಿದ್ದರೂ, ಪೊಲೀಸರು ಭ್ರಷ್ಟಾಚಾರ ನಿಗ್ರಹದ ಸೆಕ್ಷನ್ 13 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ. ಈಶ್ವರಪ್ಪ ಮತ್ತು ಇತರ ಆರೋಪಿ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕು. ಈ ಪ್ರಕರಣ ಜಾಮೀನುರಹಿತ ಅಪರಾಧ’ ಎಂದರು.

ಸರ್ಕಾರದಿಂದ ಒತ್ತಡ: ‘ರಾಜ್ಯ ಸರ್ಕಾರದ ಒತ್ತಡದ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿ ಸಚಿವರನ್ನು ರಕ್ಷಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾವು ನಮ್ಮ ಹೋರಾಟ ಹಮ್ಮಿಕೊಂಡಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ನಮ್ಮ ಸರ್ಕಾರ ಇದ್ದ ಸಮಯದಲ್ಲಿ ಕೆ.ಜೆ. ಜಾರ್ಜ್ ಅವರನ್ನು ಬಿಜೆಪಿ ನಾಯಕರು ಕೊಲೆಗಾರ ಎಂದಿದ್ದರು. ನಾವು ಈಗ ಈಶ್ವರಪ್ಪ ಅವರನ್ನು ಏನೆಂದು ಕರೆಯಬೇಕು. ಸಾಯುವಂತೆ ಕಿರುಕುಳ ನೀಡಿರುವ ಅವರು ಕೂಡ ಕೊಲೆಗಾರ’ ಎಂದರು.

‘ಇದೇ 15ರಿಂದ ಪಕ್ಷದ ಪ್ರಮುಖ ನಾಯಕರ ನೇತೃತ್ವದಲ್ಲಿ 7-8 ತಂಡಗಳನ್ನು ರಚಿಸಿ ಐದು ದಿನ ಎಲ್ಲ ಜಿಲ್ಲೆಗಳಿಗೆ ತೆರಳಿ, ಶೇ 40 ಕಮಿಷನ್‌ ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಬ್ಲಾಕ್ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೂ ವಿಶ್ರಮಿಸದೆ, ಹೋರಾಟ ಆಯೋಜಿಸಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT