ಶನಿವಾರ, ಮೇ 21, 2022
28 °C

'ನಾನು ಹೇಳಿದ್ದು ಸುಳ್ಳಾದ್ರೆ ಸ್ಥಾನ ತ್ಯಾಗ': ಸಿದ್ದರಾಮಯ್ಯ, ಸೋಮಣ್ಣ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ (ಸುವರ್ಣಸೌಧ): ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾವು ಹೇಳಿದ್ದು ಸುಳ್ಳೆಂದು ಸಾಬೀತಾದರೆ ತಮ್ಮ ಸ್ಥಾನಗಳನ್ನು ತ್ಯಾಗ ಮಾಡುವುದಾಗಿ ಒಂದು ಕಾಲದ ಗುರು–ಶಿಷ್ಯರಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರು ಸವಾಲು– ಪ್ರತಿ ಸವಾಲು ಹಾಕಿದ ಘಟನೆ ನಡೆಯಿತು.

ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ಬಗ್ಗೆ ನಿಯಮ 69ರಡಿ ವಿಧಾನಸಭೆಯಲ್ಲಿ ಮಾತನಾಡುವಾಗ ಸಿದ್ದರಾಮಯ್ಯ ಮತ್ತು ಸೋಮಣ್ಣ ಮಧ್ಯೆ ಬಿಸಿ ಬಿಸಿ ವಾಗ್ವಾದ ನಡೆಯಿತು. ಇಬ್ಬರೂ ತಮ್ಮ ಬಳಿ ಲಭ್ಯವಿದ್ದ ದಾಖಲೆಗಳನ್ನು ಮುಂದಿಟ್ಟು ಮಾತನಾಡಿದರು. ಸುಮಾರು ಒಂದು ತಾಸಿನಷ್ಟು ಜಟಾಪಟಿ ನಡೆಯಿತು.

ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಮೇಲೆ ಒಂದೂ ಮನೆಯನ್ನು ಕಟ್ಟಿ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದೂ ಅಲ್ಲದೆ, ತಮ್ಮ ಸರ್ಕಾರ ಇದ್ದಾಗ 15 ಲಕ್ಷ ಮನೆಗಳನ್ನು ಕಟ್ಟಿಕೊಟ್ಟಿದ್ದಾಗಿ ಪ್ರತಿಪಾದಿಸಿದರು.

ಆಗ ಸದನದಲ್ಲಿ ಸೋಮಣ್ಣ ಇರಲಿಲ್ಲ. ಸರ್ಕಾರದ ಪರವಾಗಿ ಸಮರ್ಥನೆಗೆ ನಿಂತ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು, ‘ನಿಮ್ಮ ಸರ್ಕಾರ ಇದ್ದಾಗ ಮನೆಗಳನ್ನು ಘೋಷಿಸಿತ್ತೇ ಹೊರತು ಮನೆಗಳನ್ನು ಕಟ್ಟಲು ಒಂದು ರೂಪಾಯಿ ಬಿಡುಗಡೆ ಮಾಡಲಿಲ್ಲ’ ಎಂದರು. ‘ಏಯ್ ರಾಮುಲು ನಿಂಗೆ ಸಮರ್ಥನೆ ಮಾಡಿಕೊಳ್ಳಲು ಗೊತ್ತಾಗಲ್ಲ ಕುತ್ಕೊಳಪ್ಪ’ ಎಂದು ಸಿದ್ದರಾಮಯ್ಯ ಗದರಿದರು.

ತಮ್ಮ ಇಲಾಖೆಯ ವಿಷಯ ಪ್ರಸ್ತಾಪವಾಗಿದ್ದು ಕೇಳಿ ಸದನದೊಳಗೆ ದೌಡಾಯಿಸಿದ ಸೋಮಣ್ಣ ಕ್ಷಣ ಕಾಲ ಆಸನದಲ್ಲಿ ಸಾವರಿಸಿಕೊಂಡರು. ಬಳಿಕ ಸಿದ್ದರಾಮಯ್ಯ ಅವರ ವಾಗ್ದಾಳಿಯನ್ನು ಎದುರಿಸಲು ನಿಂತರು. ‘ಸತ್ಯವಾದ ಹೇಳಿಕೆ ಕೊಡಿ ಸಿದ್ದರಾಮಯ್ಯ ಅವರೇ, ನಾನು ನಿಮ್ಮ ಗರಡಿಯಲ್ಲೇ ಬೆಳೆದವನು’ ಎಂದರು.

ಆಗಲೂ ಪಟ್ಟು ಬಿಡದ ಸಿದ್ದರಾಮಯ್ಯ, ‘ನೀವು ಏನು ಹೇಳಬೇಕೋ ಅದನ್ನು ಉತ್ತರ ಕೊಡುವಾಗ ಹೇಳಿ, ನಿಮ್ಮ ಸರ್ಕಾರ ಬಂದ ಮೇಲೆ ಒಂದೇ ಒಂದು ಮನೆ ಕಟ್ಟಲಿಲ್ಲ. ಎಂ.ಟಿ.ಬಿ.ನಾಗರಾಜ್‌ ಸಮ್ಮಿಶ್ರ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದಾಗ ಬಾದಾಮಿಗೆ 7,500 ಮನೆ ಘೋಷಿಸಿದರು. ಎಷ್ಟು ಮನೆ ಕಟ್ಟಿ ಕೊಟ್ಟಿದ್ದೀರಿ’ ಎಂದು ಪ್ರಶ್ನಿಸಿದರು.

‘2018 ರಲ್ಲಿ ಚುನಾವಣೆಗೆ ಹೋಗುವ ಮುನ್ನ 20 ಲಕ್ಷ ಮನೆ ಕಟ್ಟುತ್ತೀರಿ ಘೋಷಿಸಿದಿರಿ. ಆದರೆ, ಒಂದು ರೂಪಾಯಿಯನ್ನೂ ಕೊಡಲಿಲ್ಲ. ಅಷ್ಟೇ ಅಲ್ಲ, 15 ಲಕ್ಷ ಮನೆಗಳಿಗೆ ಕಾರ್ಯಾದೇಶವನ್ನು ಮಾಡಿ ಹೋದಿರಿ. ಆ ಬಳಿಕ ಬಂದಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರ, ಒಂದು ರೂಪಾಯಿ ಬಿಡುಗಡೆ ಮಾಡದೇ 15 ಲಕ್ಷ ಮನೆಗಳಿಗೆ ಕಾರ್ಯಾದೇಶ ನೀಡಿದರು‘ ಎಂದು ಸೋಮಣ್ಣ ತಿರುಗೇಟು ನೀಡಿದರು.

‘ನಮ್ಮ ಸರ್ಕಾರ ಬಂದ ಬಳಿಕ ನೀವು ಘೋಷಿಸಿದ ಯೋಜನೆ ಆಗಿದ್ದರೂ ಅದಕ್ಕೆ ₹10 ಸಾವಿರ ಕೋಟಿ ಬಿಡುಗಡೆ ಮಾಡಿದೆವು. ಮನೆ ನಿರ್ಮಾಣ ಕಾರ್ಯವನ್ನು ಮುಂದುವರೆಸಿದೆವು. ನಿಮ್ಮ ಕಾರ್ಯಕ್ರಮ ರದ್ದು ಮಾಡಿ, ಹೊಸತಾಗಿ ನಮ್ಮದೇ ಮಾಡಬಹುದಿತ್ತು. ಆದರೆ, ಅದು ಬಡವರಿಗೆ ಸಂಬಂಧಿಸಿದ ಯೋಜನೆ ಆಗಿದ್ದರಿಂದ ಆ ರೀತಿ ಮಾಡಲು ಹೋಗಲಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘2018 ರ ಬಜೆಟ್‌ ಭಾಷಣದಲ್ಲಿ ಮುಂದಿನ 5 ವರ್ಷದಲ್ಲಿ 20 ಲಕ್ಷ ಮನೆ ಕಟ್ಟುವುದಾಗಿ ಆಶ್ವಾಸನೆ ನೀಡಿದ್ದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ಮಾಡುತ್ತಿದ್ದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ಆದರೆ, ನಿಮ್ಮ ಸರ್ಕಾರ ಒಂದು ಮನೆಯನ್ನಾದರೂ ಕಟ್ಟಿದೆಯೇ’ ಎಂದು ಪ್ರಶ್ನಿಸಿದರು.

‘ನಾನು ಸುಳ್ಳು ಹೇಳಿದರೆ ನನ್ನ ಸ್ಥಾನ ತ್ಯಾಗ ಮಾಡಿ ಹೋಗುತ್ತೇನೆ. ನಿಮ್ಮ ಬಳಿ ದಾಖಲೆ ಇದ್ದರೆ ಇಡಿ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಅದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ‘ನನ್ನ ಬಳಿಯೂ ದಾಖಲೆಗಳು ಇವೆ. ನಾನು ಹೇಳಿದ್ದು ಸುಳ್ಳಾದರೆ ಈ ಜಾಗದಲ್ಲಿ ಮುಂದುವರೆಯುವುದಿಲ್ಲ’ ಎಂದರು. ಈ ಹಂತದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಬಿಸಿ ಬಿಸಿ ವಾಗ್ವಾದ ನಡೆಯಿತು.

ಬೆಳೆ ಹಾನಿ ಪರಿಹಾರ ಹೆಚ್ಚಳಕ್ಕೆ ಆಗ್ರಹ
‘ಬೆಳೆಹಾನಿಗೆ ಸಂಬಂಧಿಸಿದಂತೆ 2014ರ ಬಳಿಕ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿಲ್ಲ. ಸಂತ್ರಸ್ತ ರೈತರಿಗೆ ಚಿಕ್ಕಾಸು ಪರಿಹಾರ ನೀಡಲಾಗುತ್ತಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು.

ನಿಯಮ 69ರಡಿ ವಿಧಾನಸಭೆಯಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ’ಬೆಳೆಹಾನಿ ಉಂಟಾಗಿರುವ ಒಣ ಜಮೀನಿಗೆ ಹೆಕ್ಟೇರ್‌ಗೆ ₹6,800, ನೀರಾವರಿ ಜಮೀನಿಗೆ ₹13,500 ಹಾಗೂ ತೋಟಗಾರಿಕಾ ಜಮೀನಿಗೆ ₹18,000 ಪರಿಹಾರ ನೀಡಲಾಗುತ್ತಿದೆ. ಪರಿಹಾರ ಮೊತ್ತವನ್ನು ಕ್ರಮವಾಗಿ ₹20,400, ₹40,500 ಹಾಗೂ ₹54 ಸಾವಿರಕ್ಕೆ ಹೆಚ್ಚಿಸಬೇಕು. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಬದಿಗಿಟ್ಟು ಜನರಿಗೆ ಪರಿಹಾರ ನೀಡಬೇಕು‘ ಎಂದು ಆಗ್ರಹಿಸಿದರು.

’ಮಳೆ ಹಾನಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಜನರ ನೋವಿಗೆ ಸ್ಪಂದಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲ. ಜನಸ್ವರಾಜ್‌ ಯಾತ್ರೆ ಹೆಸರಿನಲ್ಲಿ ಕೊರೊನಾ ಹರಡುವುದರಲ್ಲಿ ಸಚಿವರು ನಿರತರಾಗಿದ್ದರು. ಕಂದಾಯ ಸಚಿವರು ಮಾತ್ರ ಒಂದೆರಡು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ’ ಎಂದು ಟೀಕಿಸಿದರು.

‘ಘೋಷಣೆ ಕಮಿಟ್‌ಮೆಂಟ್‌ ಆಗಲ್ಲ’
ಕ್ರಿಯಾಲೋಪವೆತ್ತಿದ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌ ಅವರು, ‘ನಾವು ಮತ್ತೆ ಆರಿಸಿ ಬಂದರೆ ಮನೆ ಕಟ್ಟಿಕೊಡುತ್ತೇವೆ ಎಂದು ಬಜೆಟ್‌ ಭಾಷಣದಲ್ಲಿ ಆಶ್ವಾಸನೆ ನೀಡಿದ್ದೇ ಹೊರತು ಅದು ಕಮಿಟ್‌ಮೆಂಟ್‌ (ಬದ್ಧತೆ) ಆಗಿರಲಿಲ್ಲ. 20 ಲಕ್ಷ ಅಲ್ಲ 1 ಕೋಟಿ ಹೇಳಬಹುದು, ಆದರೆ ಅದು ಕಮಿಟ್‌ಮೆಂಟ್‌ ಆಗಲ್ಲ. ಗ್ರಾಮ ಪಂಚಾಯಿತಿಯಿಂದ ಫಲಾನುಭವಿ ಗುರುತಿಸಿ ರಾಜೀವ್‌ಗಾಂಧಿ ವಸತಿ ನಿಗಮದಿಂದ ಕಾರ್ಯಾದೇಶ ಆದಾಗಲೇ ಅದಕ್ಕೆ ಬದ್ಧತೆ ಬರುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು